ಪ್ರದೀಪ್ ಆತ್ಮಹತ್ಯೆ ಪ್ರಕರಣ: ನಾಲ್ವರು ಆರೋಪಿಗಳ ವಿಚಾರಣೆ

ಸುದ್ದಿ360 ರಾಮನಗರ ಜ.12: ಉದ್ಯಮಿ ಪ್ರದೀಪ್‌ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಈವರೆಗೆ ನಾಲ್ವರನ್ನು ಪೊಲೀಸರು ವಿಚಾರಣೆ ನಡೆಸಿ, ಹೇಳಿಕೆಗಳನ್ನು ದಾಖಲಿಸಿಕೊಂಡಿದ್ದಾರೆ.

ಪ್ರಕರಣದ ಮೊದಲ ಆರೋಪಿ ಗೋಪಿ ತಲೆಮರಿಸಿಕೊಂಡಿದ್ದು, ಮೊದಲ ಆರೋಪಿಯ ಹೇಳಿಕೆ ಪಡೆದ ನಂತರ ಮತ್ತೊಬ್ಬ ಆರೋಪಿಯಾಗಿರುವ ಶಾಸಕ ಅರವಿಂದ ಲಿಂಬಾವಳಿ ಅವರ ಹೇಳಿಕೆ ಪಡೆಯುವುದಾಗಿ ಪೊಲೀಸ್ ಮೂಲಗಳು ತಿಳಿಸಿವೆ.

ಐವರು ಆರೋಪಿಗಳಿಗೆ ಕಗ್ಗಲೀಪುರ ಠಾಣೆ ಪೊಲೀಸರು ನೋಟಿಸ್ ನೀಡಿದ್ದರು. ಇವರಲ್ಲಿ ಎರಡನೇ ಆರೋಪಿ ಸೋಮಯ್ಯ, ನಾಲ್ಕನೇ ಆರೋಪಿ ರಮೇಶ್ ರೆಡ್ಡಿ, ಐದನೇ ಆರೋಪಿ ಜಯರಾಮ್‌ ರೆಡ್ಡಿ ಹಾಗೂ ಆರನೇ ಆರೋಪಿ ರಾಘವ ಭಟ್ ಅವರ ಹೇಳಿಕೆಗಳನ್ನು ಪೊಲೀಸರು ದಾಖಲಿಸಿದ್ದಾರೆ.

ಪ್ರದೀಪ್‌ ಬ್ಯಾಂಕ್‌ ಖಾತೆಯ ವಿವರಗಳನ್ನು ಪೊಲೀಸರು ಪಡೆದಿದ್ದು, ಯಾರಿಗೆಲ್ಲ ಹಣ ಸಂದಾಯ ಆಗಿತ್ತು? ಯಾರಿಂದ ಎಷ್ಟು ಹಣ ವಾಪಸ್ ಬಂದಿತ್ತು ಎಂಬ ಮಾಹಿತಿ ಕಲೆ ಹಾಕಿದ್ದಾರೆ. ಇದೊಂದು ಸಿವಿಲ್‌ ವ್ಯಾಜ್ಯದ ರೀತಿ ಇರುವುದು ಪೊಲೀಸರ ಪ್ರಾಥಮಿಕ ತನಿಖೆ ವೇಳೆ ತಿಳಿದುಬಂದಿದೆ. ಪ್ರದೀಪ್‌ ಹಾಗೂ ಆರೋಪಿಗಳಾದ ಗೋಪಿ ಮತ್ತು ಸೋಮಯ್ಯ ಕ್ಲಬ್‌ ಒಂದರ ಪಾಲುದಾರರಾಗಿದ್ದರು. ಕೋವಿಡ್ ಸಂದರ್ಭ ಕ್ಲಬ್‌ನ ವ್ಯವಹಾರದಲ್ಲಿ ನಷ್ಟ ಉಂಟಾಗಿದ್ದು, ಈ ಕಾರಣಕ್ಕೆ ಪ್ರದೀಪ್‌ಗೆ ಹಣ ಸಂದಾಯ ಆಗಿರಲಿಲ್ಲ ಎಂಬುದು ವಿಚಾರಣೆ ವೇಳೆ ಗೊತ್ತಾಗಿದೆ.

Leave a Comment

error: Content is protected !!