ಪ್ರಧಾನಿಗಳೇ ರೈತರ ಸಂಕಷ್ಟ ಗಮನಿಸಿ: ದಾವಣಗೆರೆಯಲ್ಲಿ ರೈತರ ಕೂಗು

ಸುದ್ದಿ360 ದಾವಣಗೆರೆ, ಜೂ.20: ಕೃಷಿ ಉತ್ಪನ್ನಗಳ ಉತ್ಪಾದನಾ ವೆಚ್ಚ, ಕನಿಷ್ಠ ಬೆಂಬಲ ಬೆಲೆಯಿಂದ ಮಾರುಕಟ್ಟೆಯಲ್ಲಿ ಅನುಭವಿಸಿರುವ ನಷ್ಟಗಳ ವಿವರವನ್ನು ರಾಜ್ಯ ಪ್ರವಾಸದಲ್ಲಿರುವ ಪ್ರದಾನಿ ಮೋದಿಯವರ ಗಮನ ಸೆಳೆಯುವ ಉದ್ದೇಶದಿಂದ ರೈತರು ಇಂದು ರೈತ  ಉತ್ಪನ್ನಗಳೊಂದಿಗೆ ಮೆರವಣಿಗೆ ನಡೆಸಿ  ಉಪವಿಭಾಗಾಧಿಕಾರಿಗಳ ಮೂಲಕ ಪ್ರಧಾನಿಯವರಿಗೆ ಮನವಿ ಸಲ್ಲಿಸುತ್ತಿರುವುದಾಗಿ ರಾಜ್ಯ ಕಬ್ಬು ಬೆಳೆಗಾರರ ಸಂಘದ ಉಪಾಧ್ಯಕ್ಷ ತೇಜಸ್ವಿ ವಿ. ಪಟೇಲ್‍ ತಿಳಿಸಿದರು.

ನಗರದಲ್ಲಿ ಸೋಮವಾರ ರಾಜ್ಯ ಕಬ್ಬು ಬೆಳೆಗಾರರ ಸಂಘ ಹಾಗೂ ಕರ್ನಾಟಕ ರಾಜ್ಯ ರೈತ ಸಂಘ ಕೃಷಿ ಉತ್ಪನ್ನಗಳನ್ನು ತಳ್ಳುವ ಗಾಡಿಯಲ್ಲಿಟ್ಟುಕೊಂಡು ಜಯದೇವ ವೃತ್ತದಿಂದ  ಉಪವಿಭಾಗಾಧಿಕಾರಿಗಳ ಕಛೇರಿ ತಲುಪಿ ಮನವಿ ಸಲ್ಲಿಸಲು ಮುಂದಾಗಿತ್ತು. ಕಾನೂನು ಸುವ್ಯವಸ್ಥೆಯ ದೃಷ್ಟಿಯಿಂದ ಪೊಲೀಸರು ಮೆರವಣಿಗೆ ನಿರತರಲ್ಲಿ ಪೊಲೀಸ್‍್ ವರಿಷ್ಠಾಧಿಕಾರಿಗಳ ಸೂಚನೆಯನ್ನು ತಿಳಿಸಿ ಮನವೊಲಸಿ ಮೆರವಣಿಗೆಯನ್ನು ಮೊಟಕು ಗೊಳಿಸಿದರಲ್ಲದೆ, ಉಪವಿಭಾಗಾಧಿಕಾರಿಗಳು ಸ್ಥಳಕ್ಕೆ ಧಾವಿಸಿ ರೈತರ ಮನವಿಯನ್ನು ಪಡೆದರು.

ಈ ಸಂದರ್ಭದಲ್ಲಿ ಮಾತನಾಡಿದ ತೇಜಸ್ವಿ ವಿ. ಪಟೇಲ್‍ ಸರ್ಕಾರಕ್ಕೆ ಕೂಗಿ ಹೇಳಿ ಹೇಳಿ ನಮ್ಮ ಗಂಟಲು ಹೋಗಿದೆ ಎಂದು ನೀರು ಕುಡಿದು ತಮ್ಮ ಗಂಟಲು ಸರಿಮಾಡಿಕೊಳ್ಳುತ್ತಾ ಮಾತು ಮುಂದುವರೆಸಿದರು. ದಾವಣಗೆರೆ ಉಪವಿಭಾಗಾಧಿಕಾರಿಗಳು ಇಂದು ಕಾನೂನು ಸುವ್ಯವಸ್ಥೆಯ ಹಿತದೃಷ್ಠಿಯಿಂದ ರೈತರು ಇದ್ದಲ್ಲಿಗೆ ಬಂದು ಮನವಿ ತೆಗೆದುಕೊಳ್ಳುತ್ತಿದ್ದಾರೆ. ಅವರಿಗೆ ನಾವು ಗೌರವಿಸುತ್ತೇವೆ. ಇದೇ ರೀತಿ ಬಹಳ ದಿನಗಳಿಂದ ನೆನೆಗುದಿಗೆ ಬಿದ್ದಿರುವ ರೈತರ ಕಡತಗಳನ್ನೂ ವಿಲೇವಾರಿ ಮಾಡಬೇಕು ಎಂದು ಮನವಿ ಮಾಡಿದರು.

ರೈತ ಸಾಲಮುಕ್ತನಾಗಿ ಗೌರವಯುತ ಕೌಟುಂಬಿಕ ಜೀವನ ಸಾಗಿಸಲು ಬೆಳೆದ ಬೆಳೆಗಳಿಗೆ ನ್ಯಾಯಯುತ ದರ ಸಿಗಬೇಕು. ಪ್ರಕೃತಿಯೊಂದಿಗೆ ಹೋರಾಟ ನಡೆಸಿ ಬೆಳೆದ ಬೆಳೆಗೆ ಯೋಗ್ಯ ಬೆಲೆ ಪಡೆಯಲು ಮಾರುಕಟ್ಟೆಯಲ್ಲಿ ಸೆಣೆಸಾಡಬೇಕಿದೆ.

ಪೊಲೀಸ್‍ ವರಿಷ್ಠಾಧಿಕಾರಿಗಳ ಸೂಚನೆ ಮೇರೆಗೆ ಮೆರವಣಿಗೆ ಮಾಡಲು ಅವಕಾಶ ಇಲ್ಲ ಎಂದು ಪೊಲೀಸರು ಹೇಳುತ್ತಿದ್ದಾರೆ. ನಾವು ಇದನ್ನು ಗಮನಿಸುತ್ತೇವೆ. ಬೇರೆ ಯಾರಿಗಾದರೂ ಮೆರವಣಿಗೆಗೆ ಅವಕಾಶ ಕಲ್ಪಿಸಿದಲ್ಲಿ ರಾಜ್ಯ ಪೊಲೀಸ್‍ ಅಧಿಕಾರಿಗಳು ರಾಜ್ಯ ಸರ್ಕಾರದ ಅಧಿಕಾರಿಗಳೋ ಅಥವಾ ಅಧಿಕಾರದಲ್ಲಿರುವ ಪಕ್ಷದ ಅಧಿಕಾರಿಗಳೋ ಎಂಬುದು ಜನರಿಗೆ ತಿಳಿಯುತ್ತದೆ. ರೈತರು ಯಾವಾಗಲೂ ಶಾಂತಯುತವಾಗಿ ಹೋರಾಟ ಮಾಡುತ್ತ ಬಂದವರು. ನಾವು ಪೊಲೀಸರಿಗೆ ಕೆಲಸ ಕೊಡುವವರಲ್ಲ. ನಾವೇನಿದ್ದರೂ ಕೆಲಸ ಕೊಡುತ್ತಿರುವುದು ಸರ್ಕಾರಕ್ಕೆ ಎಂದು ಛೇಡಿಸಿದರು.

ಕಾನೂನು ಸುವ್ಯವಸ್ಥೆಗೆ ಧಕ್ಕೆಯಾದ ಸಂದರ್ಭದಲ್ಲಿ ತಲುಪಿಸುವ ವರದಿಯಷ್ಟೇ ವೇಗವಾಗಿ ನಮ್ಮ ಮನವಿಯನ್ನು ಮಾನ್ಯ ಪ್ರಧಾನಿಯವರಿಗೆ ಉಪವಿಭಾಗಾಧಿಕಾರಿಗಳು ತಲುಪಿಸಬೇಕು ಎಂದು ಅವರು ಮನವಿ ಮಾಡಿದರು.

ಮೆರವಣಿಗೆಯಲ್ಲಿ ರಾಜ್ಯ ರೈತ ಸಂಭದ ಪ್ರಭುಗೌಡ, ಪೂಜಾರ್‍ ಅಂಜಿನಪ್ಪ, ಮುರುಗಯ್ಯ ನೂರಾರು ರೈತರು ಪಾಲ್ಗೊಂಡಿದ್ದರು.

  • ರೈತ ಬೆಳೆದ ಬೆಳೆಗೆ ಯೋಗ್ಯ ದರ ದೊರೆತರೆ ಸರ್ಕಾರಕ್ಕೆ ಸಾಲ ಕೊಡುವ ಚೈತನ್ಯ ರೈತರದ್ದಾಗುತ್ತದೆ.ರೈತರೇ ದೇಶದ ಬೆನ್ನೆಲುಬು ಎಂದು ಹೇಳುವ ಸರ್ಕಾರಗಳು ಇಂದು ರೈತರ ಬೆನ್ನೆಲುಬು ಮುರಿಯುವ ಕೆಲಸ ಮಾಡುತ್ತಿವೆ.

-ಮುರುಗಯ್ಯ, ರೈತ ಮುಖಂಡ

admin

admin

Leave a Reply

Your email address will not be published. Required fields are marked *

error: Content is protected !!