ಪ್ರಧಾನಿ ಮೋದಿಯವರ ಎರಡು ದಿನಗಳ ರಾಜ್ಯ ಪ್ರವಾಸ

ಸುದ್ದಿ360 ಬೆಂಗಳೂರು, ಜೂ.19: ಪ್ರಧಾನಿ ನರೇಂದ್ರ ಮೋದಿಯವರು ಜೂನ್ 20 ಮತ್ತು 21ರಂದು ರಾಜ್ಯ ಪ್ರವಾಸ ಕೈಗೊಳ್ಳಲಿದ್ದು, ವಿವಿಧ ಕಾರ್ಯಕ್ರಮಗಳಲ್ಲಿ ಭಾಗವಹಿಸಲಿದ್ದಾರೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ.

ಪ್ರಧಾನಿ ನರೇಂದ್ರ ಮೋದಿಯವರು ಜೂನ್ 20, ನಾಳೆ ಮಧ್ಯಾಹ್ನ 12.30 ಕ್ಕೆ ಬೆಂಗಳೂರಿನ ಭಾರತೀಯ ವಿಜ್ಞಾನ ಸಂಸ್ಥೆಯಲ್ಲಿ ಮಿದುಳು ಸಂಶೋಧನಾ ಕೇಂದ್ರ ಲೋಕಾರ್ಪಣೆಗೊಳಿಸಿ ಬಾಗ್ಚಿ- ಪಾರ್ಥಸಾರಥಿ ಆಸ್ಪತ್ರೆಯ ಶಂಕುಸ್ಥಾಪನೆಯನ್ನು ನೆರವೇರಿಸಲಿದ್ದಾರೆ. ಮಧ್ಯಾಹ್ನ 1.45 ಕ್ಕೆ ಪ್ರಧಾನಿಯವರು (ಬೇಸ್) ಕ್ಯಾಂಪಸ್ ಗೆ ತೆರಳಿ, ಡಾ:ಬಿ.ಆರ್.ಅಂಬೇಡ್ಕರ್ ಕಂಚಿನ ಪುತ್ಥಳಿ ಅನಾವರಣ, ಡಾ:ಬಿ.ಆರ್.ಅಂಬೇಡ್ಕರ್ ಸ್ಕೂಲ್ ಆಫ್ ಎಕಾನಾಮಿಕ್ಸ್ ಕ್ಯಾಂಪಸ್ ಉದ್ಘಾಟನೆ ಹಾಗೂ ಮೇಲ್ದರ್ಜೆಗೇರಿಸಿದ 150 ಐಟಿಐಗಳನ್ನು ಲೋಕಾರ್ಪಣೆ ಮಾಡಲಿದ್ದಾರೆ. ಮಧ್ಯಾಹ್ನ 2.45 ಕ್ಕೆ ಬೆಂಗಳೂರಿನ ಕೊಮ್ಮಘಟ್ಟದಲ್ಲಿ ವಿವಿಧ ಅಭಿವೃದ್ಧಿ ಯೋಜನೆಗಳ ಶಂಕುಸ್ಥಾಪನೆ ಹಾಗೂ ಲೋಕಾರ್ಪಣೆಗೊಳಿಸಿ ಸಾರ್ವಜನಿಕ ಕಾರ್ಯಕ್ರಮದಲ್ಲಿ ಪಾಲ್ಗೊಂಡ ನಂತರ ಮೈಸೂರಿಗೆ ತೆರಳಿದ್ದಾರೆ.

ಜೂನ್ 20 ರ ಸಂಜೆ 5.30 ಕ್ಕೆ ಮೈಸೂರಿನ ಮಹಾರಾಜ ಮೈದಾನಕ್ಕೆ ಆಗಮಿಸಿ ವಿವಿಧ ಅಭಿವೃದ್ಧಿ ಕಾರ್ಯಕ್ರಮಗಳ ಲೋಕಾರ್ಪಣೆ ಹಾಗೂ ಶಂಕುಸ್ಥಾಪನೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಸಾರ್ವಜನಿಕರನ್ನು ಉದ್ದೇಶಿಸಿ ಮಾತನಾಡಲಿದ್ದಾರೆ. ಅಂದು ರಾತ್ರಿ 7 ಗಂಟೆಗೆ ಶ್ರೀ ಸುತ್ತೂರು ಮಠದ ಕಾರ್ಯಕ್ರಮದಲ್ಲಿ ಪಾಲ್ಗೊಂಡ ನಂತರ ರಾತ್ರಿ 7.50 ಕ್ಕೆ ಮೈಸೂರಿನ ಚಾಮುಂಡಿಬೆಟ್ಟಕ್ಕೆ ತೆರಳಿ ಶ್ರೀ ಚಾಮುಂಡೇಶ್ವರಿ ದೇವಾಲಯಕ್ಕೆ ಭೇಟಿ ನೀಡಲಿದ್ದಾರೆ.

ಜೂನ್ 21 ರಂದು ಮಂಗಳವಾರ ಬೆಳಿಗ್ಗೆ 6.30 ಕ್ಕೆ ಪ್ರಧಾನಿ ಮೋದಿಯವರು ಮೈಸೂರು ಅರಮನೆಯ ಮೈದಾನದಲ್ಲಿ ಅಂತರರಾಷ್ಟ್ರೀಯ ಯೋಗದಿನಾಚರಣೆಯಲ್ಲಿ ಭಾಗವಹಿಸಿ ಯೋಗಪಟುಗಳೊಂದಿಗೆ ಬೆರತು ಯೋಗ ಮಾಡಲಿದ್ದಾರೆ. ಬೆಳಿಗ್ಗೆ 8.10 ಕ್ಕೆ ವಸ್ತುಪ್ರದರ್ಶನ ಸ್ಥಳಕ್ಕೆ ಭೇಟಿ ನೀಡಲಿದ್ದಾರೆ. ನಂತರ ಬೆಳಿಗ್ಗೆ 9.20 ಕ್ಕೆಮೈಸೂರು ಅರಮನೆ ಆವರಣದಿಂದ ನಿರ್ಗಮಿಸಿ ಬೆಳಿಗ್ಗೆ 9.45ಕ್ಕೆ ಮೈಸೂರಿನ ವಿಮಾನನಿಲ್ದಾಣದಿಂದ ನವದೆಹಲಿಗೆ ತೆರಳುವುದಾಗಿ ಮುಖ್ಯಮಂತ್ರಿಗಳು ತಿಳಿಸಿದ್ದಾರೆ.

admin

admin

Leave a Reply

Your email address will not be published. Required fields are marked *

error: Content is protected !!