– ಕೂಡ್ಲಿ ಸೋಮಶೇಖರ್
ಚುನಾವಣೆ ಎಂದ ಮೇಲೆ ಇಲ್ಲಿ ಪಕ್ಷಗಳ ಹೈಕಮಾಂಡ್ನಿಂದ ಹಿಡಿದು ಸಾಮಾನ್ಯ ಕಾರ್ಯಕರ್ತನ ವರೆಗೆ ಮತ್ತು ಹಿರಿಯ ನಾಗರೀಕರಿಂದ ಹಿಡಿದು ಈಗಷ್ಟೇ ಮತದಾನಕ್ಕೆ ಅರ್ಹತೆ ಪಡೆದ ಯುವಪೀಳಿಗೆ ವಿವಿಧ ಬಗೆಗಳಲ್ಲಿ ಚುನಾವಣಾ ಪರೀಕ್ಷೆಯಲ್ಲಿ ಪಾಲ್ಗೊಳ್ಳುತ್ತಾರೆ ಎಂದರೆ ತಪ್ಪಾಗಲಾರದು.
ಮತದಾನ ಪ್ರತಿಯೊಬ್ಬ ಪ್ರಜೆಯ ಮೂಲಭೂತ ಹಕ್ಕು ಮತ್ತು ಕರ್ತವ್ಯವಾಗಿದ್ದರೂ ಸಹ ಸಾಕಷ್ಟು ಮಂದಿ ಮತದಾನದಿಂದ ದೂರವೇ ಉಳಿಯುವುದು ವಿಪರ್ಯಾಸ. ಚುನಾವಣಾ ಆಯೋಗ ಮತದಾನದ ಕುರಿತು ಜಾಗೃತಿ ಮೂಡಿಸುವಲ್ಲಿ ಸಾಕಷ್ಟು ಕೆಲಸ ಮಾಡುತ್ತಿರುವುದು ಸ್ವಾಗತಾರ್ಹ.
ಮತಯಾಚನೆಗೆ ಬರುವ ಚುನಾವಣಾ ಅಭ್ಯರ್ಥಿ ಮತದಾರನ ಎದುರಿಗೆ ಕೊಡುಗೈದಾನಿಯಂತೆ ಕಂಗೊಳಿಸುವ ಶತಪ್ರುಯತ್ನದಲ್ಲಿ ತೊಡಗಿದ್ದಾನೆ. ಚುನಾವಣಾ ಅಭ್ಯರ್ಥಿಗಳು ನೀಡುವ ಯಾವುದೇ ಆಸೆ ಆಮಿಶಗಳಿಗೆ ಮತದಾರ ಬಲಿಯಾಗದೆ ಅವುಗಳನ್ನು ದಿಕ್ಕರಿಸಿ, ಶ್ರೇಶ್ಠ ಮತದಾನವನ್ನು ದಾಖಲಿಸಿದಲ್ಲಿ ಭ್ರಷ್ಟಾಚಾರಮುಕ್ತ ಸಮಾಜ ನಿರ್ಮಾಣಕ್ಕೆ ಮತದಾರ ಒಂದು ದಿಟ್ಟ ಹೆಜ್ಜೆ ಇಟ್ಟಂತೆಯೇ ಸರಿ.
ಪ್ರಸ್ತುತ ವಿದ್ಯುನ್ಮಾನಗಳನ್ನು ಗಮನಿಸಿಯೇ ಮತದಾರ ತಾನು ಚುನಾಯಿಸುವ ವ್ಯಕ್ತಿಯನ್ನು ನಿರ್ಧಾರ ಮಾಡಬೇಕಾದ್ದರಿಂದ ಪ್ರಸ್ತುತ ಮತದಾರನ ಎದುರು ಬೃಹತ್ ಗಾತ್ರದ ಪಠ್ಯವೇ ಇದೆ. ಇವುಗಳನ್ನೆಲ್ಲಾ ಅಳೆದು ತೂಗಿ ಅಭ್ಯರ್ಥಿಯನ್ನು ಅಧಿಕಾರದ ಗದ್ದುಗೆಗೆ ಏರಿಸುವುದು ಸುಲಭದ ಮಾತೇನಲ್ಲ.
ಹೀಗಾಗಿ ಮುಂದಿನ ಐದು ವರ್ಷ (ಪರೀಕ್ಷೆಯ ಫಲಿತಾಂಶ ಉತ್ತಮವಾಗಿದ್ದಲ್ಲಿ) ಕನ್ನಡ ನಾಡಿನ ಭವಿಷ್ಯವನ್ನು ರೂಪಿಸುವ ಪರೀಕ್ಷೆಗೆ ಮತದಾರ ಸನ್ನದ್ದನಾಗುತ್ತಿದ್ದಾನೆ. ಇದಕ್ಕೆ ಬೇಕಾದ ಪಠ್ಯವನ್ನು ಪ್ರತಿ ರಾಜಕೀಯ ಪಕ್ಷಗಳು ಬಂಡಾಯ ಅಭ್ಯರ್ಥಿಗಳು ತಮ್ಮದೇ ಆದ ಶೈಲಿಯಲ್ಲಿ ಪ್ರಣಾಳಿಕೆಯನ್ನು ರಚಿಸಿ ಮತದಾರನ ಮುಂದಿಡುವ ಪ್ರಕ್ರಿಯೆಯಲ್ಲಿ ಬಿಡುವಿಲ್ಲದೇ ಕೆಲಸ ಮಾಡತೊಡಗಿದ್ದಾರೆ. ಇದರ ಜೊತೆಗೆ ಮಾಧ್ಯಮಗಳೂ ಕೂಡ ಮತದಾರನಿಗೆ ಭರಪೂರ ಮಾಹಿತಿಯನ್ನು ನೀಡುತ್ತಲೇ ಬರುತ್ತಿವೆ. ಈ ಎಲ್ಲ ಸರಕುಗಳನ್ನು ಅವಲೋಕಿಸುವ ಮತದಾರ ತನ್ನ ಹಕ್ಕಿನ ಮತವನ್ನು ಜಾಣತನದಿಂದ ಜತನವಾಗಿರಿಸಿ ಮೇ.10ರಂದು ಮತಪೆಟ್ಟಿಗೆಯಲ್ಲಿ ದಾಖಲಿಸಲು ಸನ್ನದ್ದನಾಗುತ್ತಿದ್ದಾನೆ.
ಇದರ ನಡುವೆ ರಾಷ್ಟ್ರೀಯ ಪಕ್ಷಗಳಿಗೆ ತಮ್ಮ ಪ್ರತಿನಿಧಿಯನ್ನು ಆಯ್ಕೆ ಮಾಡುವುದೇ ದೊಡ್ಡ ಸವಾಲಾಗಿದೆ. ಅಯಾ ಪಕ್ಷಗಳೇ ವೈಭವೀಕರಗೊಳಿಸಿಕೊಂಡಿರುವ ಜಾತಿ, ಧರ್ಮ, ಪಂಗಡ, ಒಳಪಂಗಡ, ಮೀಸಲಾತಿ ಹೀಗೆ ಸಮಾಜವನ್ನು ಒಡೆದು ಆಳುವ ಯತ್ನದಲ್ಲಿ ಸಮೀಕರಣಗೊಳಿಸಲು ಹೊರಟಿರುವುದು ಕಪ್ಪೆಯನ್ನು ತೂಕ ಮಾಡಲು ಹೊರಟಿರುವಂತೆ ಗೋಚರಿಸತೊಡಗಿದೆ.
ಪಕ್ಷಸಿದ್ಧಾಂತಗಳನ್ನು ರಾಜಕಾರಣಿಗಳು ಅಂಗಿಯನ್ನು ಬದಲಿಸಿದಷ್ಟೇ ಸಲೀಸಾಗಿ ಬದಲಾಯಿಸಿಕೊಂಡು ಮುಂದೆ ಸಾಗಿದ್ದಾರೆ. ಅಲ್ಲದೆ ರಾಜಕಾರಣಿಗಳ ಬಂಡಾಯದ ಗಾಳಿ ಎಲ್ಲೆಲ್ಲಿಯೂ ಸುಳಿಯತೊಡಗಿದೆ. ಇತಿಹಾಸದಿಂದ ಪಾಠ ಕಲಿತಿರುವ ಮತ್ತು ಹೇಳಿಕೊಡಲು ಹೊರಟಿರುವ ರಾಜಕೀಯ ಪಕ್ಷಗಳು ಇತಿಹಾಸವನ್ನು ತಮ್ಮ ಬೇಳೆ ಬೇಯಿಸುವ ಸರಕಾಗಿ ಮಾರ್ಪಡಿಸಲು ಹೊರಟಿರುವುದನ್ನು ನಾವು ಕಾಲಕಾಲಕ್ಕೆ ನೋಡುತ್ತಲೇ ಇದ್ದೇವೆ.
ಸಮಾಜ ಸೇವೆಗಾಗಿ, ಜನರ ಅಭಿವೃದ್ಧಿಗಾಗಿ ನಿ(ಸ್ವಾರ್ಥ) ಸೇವೆಯಿಂದ ಶ್ರಮಿಸಲು ನಾಮುಂದು ತಾಮುಂದು ಎಂದು ಚುನಾವಣಾ ಸ್ಪರ್ಧೆಗೆ ಹುರಿಯಾಳುಗಳು ಸನ್ನದ್ದರಾಗಿದ್ದಾರೆ. ರಾಜಕೀಯ ಪಕ್ಷಗಳಿಂದ ವಿಧಾನಸಭೆಗೆ ಸ್ಪರ್ಧಿಸಲು ಟಿಕೆಟ್ ಗಾಗಿ ಹಾತೊರೆಯುತ್ತಿದ್ದಾರೆ. ಪಾಪ ಅಭ್ಯರ್ಥಿಗಳು ಸಮಾಜಸೇವೆಗಾಗಿ ಈ ಪರಿಯಾಗಿ ಪಕ್ಷದ ಟಿಕೆಟ್ ಮೊರೆ ಹೋಗಿರುವುದು ಇದೇ ಮೊದಲಲ್ಲ. ನನ್ನ ಹೆಸರು ಇಂದಿನ ಪಟ್ಟಿಯಲ್ಲಿ ಬಿಡುಗಡೆಯಾಗುತ್ತದೆ, ನಾಳೆ ಪಟ್ಟಿಯಲ್ಲಿ ಪ್ರಕಟವಾಗುತ್ತದೆ ಎಂದು ಚಾತಕ ಪಕ್ಷಿಯಂತೆ ಕಾಯುತ್ತಾ, ಪಕ್ಷ ಟಿಕೆಟ್ ಕೊಟ್ಟರೂ ಕೊಡದಿದ್ದರೂ ಪಕ್ಷದ ನಿಲುವಿಗೆ ಬದ್ಧರಾಗಿರುತ್ತೇವೆ ಎನ್ನುತ್ತಾ ಒಳಗೊಳಗೆ ತಮ್ಮ ತಮ್ಮ ಮೂಲಗಳಿಂದ ಟಿಕೆಟ್ ಗಾಗಿ ಪ್ರಯತ್ನ ಪಡುತ್ತಲೇ ಇದ್ದಾರೆ. ಮತ್ತೆ ಕೆಲವರು ಪಕ್ಷ ಟಿಕೆಟ್ ನೀಡದಿದ್ದರೆ ಪಕ್ಷ ತೊರೆದು ಮಗದೊಂದು ಪಕ್ಷ ಸೇರುವ ಮತ್ತೆ ಕೆಲವರು ಬಂಡಾಯ ಅಭ್ಯರ್ಥಿಯಾಗಿ ಚುನಾವಣಾ ಕಣಕ್ಕಿಳಿಯುವ ತಮ್ಮ ಒತ್ತಾಸೆಗಳನ್ನು ವ್ಯಕ್ತಪಡಿಸುತ್ತಲೇ ಇದ್ದಾರೆ. ಇನ್ನೇನು ನಾಮಪತ್ರ ಸಲ್ಲಿಕೆಯ ಕೊನೆಯ ದಿನದವರೆಗೂ ಈ ಕಸರತ್ತು ನಡೆಯುತ್ತಲೇ ಇರುತ್ತದೆ.
ಒಮ್ಮೆ ಅಧಿಕಾರ ಸಿಕ್ಕರೆ ತಮ್ಮ ಜೀವಮಾನವಿಡೀ ಅಧಿಕಾರದ ಗದ್ದುಗೆಗೆ ಅಂಟಿಕೊಳ್ಳುವ ಮನಸ್ಥಿತಿ ಇರುವ ರಾಜಕಾರಣಿಗಳೇ ಬಹುತೇಕಾರಾಗಿದ್ದಾರೆ. ಇದು ತಮ್ಮ ಹಗರಣಗಳನ್ನು ಮುಚ್ಚಿಕೊಳ್ಳಲು ಅಧಿಕಾರದಲ್ಲಿ ಮುಂದುವರೆಯುವ ತಂತ್ರವೋ ಅಧಿಕಾರದಾಹವೋ ಎಂದು ಮತದಾರ ಮಾತನಾಡಿಕೊಳ್ಳುವಂತಾಗಿದೆ.
ಪ್ರತಿ ಚುನಾವಣಾ ಸಂದರ್ಭದಲ್ಲಿಯೂ ರಾಜಕೀಯ ಪಕ್ಷಗಳು ಪ್ರಕಟಿಸುವ ಬೃಹತ್ ಪ್ರಣಾಳಿಕೆಗಳನ್ನು ಮತ್ತು ಅವು ಮತದಾರರ ಆಶೋತ್ತರಗಳನ್ನು ಈಡೇರಿಸಿರುವ ಬಗೆಯನ್ನು ಮತದಾರ ತುಲನೆ ಮಾಡುವ ಮೂಲಕ ಚುನಾವಣೆಯಲ್ಲಿ ತಮ್ಮ ಹಕ್ಕನ್ನು ದಾಖಲಿಸಲಿದ್ದಾನೆ.
ಮತಯಾಚನೆಗೆ ಬರುವ ಚುನಾವಣಾ ಅಭ್ಯರ್ಥಿ ಮತದಾರನ ಎದುರಿಗೆ ಕೊಡುಗೈದಾನಿಯಂತೆ ಕಂಗೊಳಿಸುವ ಶತಪ್ರುಯತ್ನದಲ್ಲಿ ತೊಡಗಿದ್ದಾನೆ. ಚುನಾವಣಾ ಅಭ್ಯರ್ಥಿಗಳು ನೀಡುವ ಯಾವುದೇ ಆಸೆ ಆಮಿಶಗಳಿಗೆ ಮತದಾರ ಬಲಿಯಾಗದೆ ಅವುಗಳನ್ನು ದಿಕ್ಕರಿಸಿ, ಶ್ರೇಶ್ಠ ಮತದಾನವನ್ನು ದಾಖಲಿಸಿದಲ್ಲಿ ಭ್ರಷ್ಟಾಚಾರಮುಕ್ತ ಸಮಾಜ ನಿರ್ಮಾಣಕ್ಕೆ ಮತದಾರ ಒಂದು ದಿಟ್ಟ ಹೆಜ್ಜೆ ಇಟ್ಟಂತೆಯೇ ಸರಿ.