ಬಡವರ ಅನ್ನಕ್ಕೆ ಕನ್ನ: ಕೇಂದ್ರದ ನಡೆಯ ವಿರುದ್ಧ ದಾವಣಗೆರೆಯಲ್ಲಿ ‘ಕೈ’ ಪ್ರತಿಭಟನೆ

ಸುದ್ದಿ360 ದಾವಣಗೆರೆ: ಅನ್ನಭಾಗ್ಯ ಯೋಜನೆಯಡಿ ರಾಜ್ಯ ಸರ್ಕಾರ ಬಡ ಜನರಿಗೆ ವಿತರಿಸುತ್ತಿದ್ದ ಅಕ್ಕಿಗೆ ಕೇಂದ್ರ ಸರ್ಕಾರ ಕನ್ನ ಹಾಕಿದೆ ಎಂದು ಆರೋಪಿಸಿ ಜಿಲ್ಲಾ ಕಾಂಗ್ರೆಸ್ ಕಾರ್ಯಕರ್ತರು, ಮುಖಂಡರು ಹಾಗೂ ಶಾಸಕರು ನಗರದ ಜಯದೇವ ವೃತ್ತದಲ್ಲಿ ಮಂಗಳವಾರ ಪ್ರತಿಭಟನೆ ನಡೆಸಿದರು.

ಅನ್ನಭಾಗ್ಯ ಯೋಜನೆಯಿಂದ ಕಾಂಗ್ರೆಸ್‌ಗೆ ಹೆಸರು ಬರುತ್ತದೆ ಎಂದು ಬೆದರಿರುವ ಕೇಂದ್ರ ಬಿಜೆಪಿ ಸರಕಾರ, ಕರ್ನಾಟಕಕ್ಕೆ ಅಕ್ಕಿ ಸರಬರಾಜು ಮಾಡದಂತೆ ಭಾರತೀಯ ಆಹಾರ ನಿಗಮಕ್ಕೆ (ಎಫ್‌ಸಿಐ) ಸೂಚನೆ ನೀಡುವ ಮೂಲಕ ರಾಜ್ಯದ ಬಡ ಜನತೆಗೆ ಅನ್ಯಾಯ ಮಾಡಿದ್ದಾರೆ ಎಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು.

ಪ್ರತಿಭಟನೆಯಲ್ಲಿ ಚನ್ನಗಿರಿ, ಹೊನ್ನಾಳಿ, ಮಾಯಕೊಂಡ ಕ್ಷೇತ್ರದ ಶಾಸಕರು ಭಾಗವಹಿಸಿ, ಕೇಂದ್ರದ ವಿರುದ್ಧ ಕಿಡಿಕಾರಿದರು.

ಕಾಂಗ್ರೆಸ್ ಜಿಲ್ಲಾಧ್ಯಕ್ಷ ಎಚ್.ಬಿ. ಮಂಜಪ್ಪ ಮಾತನಾಡಿ, ಬಡ ಕುಟುಂಬಗಳ ಹಸಿವು ನೀಗಿಸುವ ಅನ್ನಭಾಗ್ಯ ಜಾರಿಗೆ ಸರಕಾರ ಸಿದ್ಧತೆ ನಡೆಸುತ್ತಿರುವ ಸಮಯದಲ್ಲಿ ಕೇಂದ್ರ ಸರಕಾರ, ರಾಜ್ಯಕ್ಕೆ ಅಕ್ಕಿ ನೀಡದಂತೆ ಎಫ್‌ಸಿಐ ಮೂಲಕ ತಡೆ ಹಿಡಿದಿದೆ. ಕೇಂದ್ರ ಬಿಜೆಪಿಯ ಈ ರೀತಿಯ ಕುತಂತ್ರ, ವಂಚನೆಗಳಿಗೆ ಬೇಸತ್ತು ಕರ್ನಾಟಕದ ಜನತೆ ರಾಜ್ಯದಲ್ಲಿ ಕಾಂಗ್ರೆಸ್ ಬೆಂಬಲಿಸಿದ್ದಾರೆ. ಮುಂಬರುವ ಲೋಕಸಭೆ ಚುನಾವಣೆಯಲ್ಲಿ ರಾಜ್ಯದ ಜನತೆ ಬಿಜೆಪಿಯನ್ನು ಸೋಲಿಸುವ ಮೂಲಕ ತಕ್ಕ ಪಾಠ ಕಲಿಸಬೇಕು,” ಎಂದು ಕಿಡಿಕಾರಿದರು.

ರಾಜೀನಾಮೆ ನೀಡಲಿ:

ಚನ್ನಗಿರಿ ಶಾಸಕ ಶಿವಗಂಗಾ ಬಸವರಾಜು ಮಾತನಾಡಿ,  ರಾಜ್ಯ ಸರಕಾರದ  ಅನ್ನಭಾಗ್ಯ ಯೋಜನೆಗೆ ಎಫ್‌ಸಿಐ ಮೂಲಕ ನೀಡಲಾಗುವ ಅಕ್ಕಿ ಅತ್ಯಗತ್ಯ ಎಂದು ಅರಿತಿರುವ ಕೇಂದ್ರ ಬಿಜೆಪಿ ಸರಕಾರ ಉದ್ದೇಶ ಪೂರ್ವಕವಾಗಿಯೇ ಅಕ್ಕಿ ಸರಬರಾಜು ತಡೆದಿದೆ. ಇದು ಬಿಜೆಪಿಯ ಬಡವರ ವಿರೋಧಿ ನೀತಿಗೆ ಸಾಕ್ಷಿ. ಕೇಂದ್ರದಿಂದ ಅಕ್ಕಿ ಕೊಡಿಸಲು ಅಶಕ್ತರಾಗಿರುವ ರಾಜ್ಯದ ಬಿಜೆಪಿ ಶಾಸಕರು, ಸಂಸದರು ಕೂಡಲೇ ಸಾಮೂಹಿಕ ರಾಜೀನಾಮೆ ನೀಡುವಂತೆ ಆಗ್ರಹಿಸಿದರು.

ಕಾಂಗ್ರೆಸ್ ಚುನಾವಣೆಗೆ ಮುನ್ನ ನೀಡಿದ ಭರವಸೆಯಂತೆ ರಾಜ್ಯದ ಎಲ್ಲ ಬಡ ಕುಟುಂಬಗಳಿಗೆ ಅನ್ನಭಾಗ್ಯದಡಿ 10 ಕೆಜಿ ಅಕ್ಕಿಯನ್ನು ಉಚಿತವಾಗಿ ಕೊಟ್ಟೇ ಕೊಡುತ್ತೇವೆ. ಅಲ್ಲದೇ ಕೇಂದ್ರ ಸರಕಾರ ಅಕ್ಕಿ ಕೊಡುವವರೆಗೂ ನಮ್ಮ ಹೋರಾಟ ನಿಲ್ಲುವುದಿಲ್ಲ ಎಂದು ಚನ್ನಗಿರಿ ಶಾಸಕ ಶಿವಗಂಗಾ ಬಸವರಾಜ್ ಹೇಳಿದರು.

ಮಾಯಕೊಂಡ ಶಾಸಕ ಕೆ.ಎಸ್. ಬಸವಂತಪ್ಪ ಮಾತನಾಡಿ, ಕರ್ನಾಟಕದ ಬಡವರಿಗೆ ನೀಡುವ ಅನ್ನಭಾಗ್ಯದ ಅಕ್ಕಿಯನ್ನು ತಡೆಹಿಡಿದು ಜನರಿಗೆ ಅನ್ಯಾಯ ಮಾಡುತ್ತಿದೆ. ಇದಕ್ಕೆ ಜನ ಮುಂದಿನ ಲೋಕಸಭಾ ಚುನಾವಣೆಯಲ್ಲಿ ತಕ್ಕಪಾಠ ಕಲಿಸಲಿದ್ದಾರೆ ಎಂದರು.

ಪ್ರತಿಭಟನೆಯಲ್ಲಿ ಮಾಯಕೊಂಡ ಶಾಸಕ ಕೆ.ಎಸ್. ಬಸವಂತಪ್ಪ, ಹೊನ್ನಾಳಿ ಶಾಸಕ ಡಿ.ಜಿ. ಶಾಂತನಗೌಡ, ಕೆಪಿಸಿ ವಕ್ತಾರ ಡಿ. ಬಸವರಾಜ್, ಪ್ರಧಾನ ಕಾರ್ಯದರ್ಶಿಗಳಾದ ದಿನೇಶ್ ಕೆ. ಶೆಟ್ಟಿ, ಎಸ್. ಮಲ್ಲಿಕಾರ್ಜುನ್,  ಅನಿತಾ ಜಾಧವ್, ಪಾಲಿಕೆ ಸದಸ್ಯರಾದ ಕೆ. ಚಮನ್ ಸಾಬ್, ಎ. ನಾಗರಾಜ್, ಕೆ.ಜಿ. ಶಿವಕುಮಾರ್, ಹರೀಶ್ ಕೆ.ಎಲ್. ಬಸಾಪುರ, ಮೈನುದ್ದೀನ್ ಇತರರು ಇದ್ದರು.

admin

admin

Leave a Reply

Your email address will not be published. Required fields are marked *

error: Content is protected !!