ಬಸವ ತತ್ವ ಗುನುಗುತ್ತಿರುವ ದಾವಣಗೆರೆ ಮಹಾನಗರ ಪಾಲಿಕೆ – ಮೇಯರ್ ಗಿರಿ ನಮ್ಮದು – ನಮ್ಮದು ಎನ್ನುತ್ತಿರುವ ಉಭಯ ಪಕ್ಷಗಳು

ಇವನಾರವ ಇವನಾರವ  ಎಂದೆನಿಸದಿರಯ್ಯಾ – ಇವ ನಮ್ಮವ ಇವ ನಮ್ಮವ ಎಂದೆನಿಸಿರಯ್ಯಾ. . .

ಸುದ್ದಿ360 ದಾವಣಗೆರೆ ಮಾ. 4: ದಾವಣಗೆರೆ ಮಹಾನಗರ ಪಾಲಿಕೆಗೆ ಇಂದು ನಡೆದ ಮೇಯರ್ ಉಪಮೇಯರ್ ಚುನಾವಣೆಯಲ್ಲಿ ಹೈಡ್ರಾಮವೇ ನಡೆಯಿತು. ಈ ಸಂದರ್ಭದಲ್ಲಿ ನಡೆದ ಘಟನೆಗಳು ಮತ್ತು ಅಂತಿಮ ಫಲಿತಾಂಶದಿಂದ ಜನಸಾಮಾನ್ಯರಲ್ಲಿ ಮೂಡಿದ ಪ್ರಶ್ನೆ ಎಂದರೆ ಮೇಯರ್ ಸ್ಥಾನ ಈಗ ‘ಕೈ’ ನಲ್ಲಿದೆಯೋ ಅಥವಾ ಆಪರೇಷನ್ ಕಮಲದ ತೆಕ್ಕೆಗೆ ಜಾರಿತೋ ಎಂಬುದಾಗಿತ್ತು.

ಫಲಿತಾಂಶದ ನಂತರ ಕೈ ಮತ್ತು ಕಮಲ ಪಾಳಯದ ಸಾಮಾಜಿಕ ಜಾಲತಾಣದಲ್ಲಿ ಮೇಯರ್ ಗಿರಿಯ ಕ್ರೆಡಿಟ್ ಪಡೆಯಲು ಹಾತೊರೆಯುತ್ತಿರುವ ಪೋಸ್ಟ್ಗಳು ಹರಿದಾಡುತ್ತಿರುವುದು ಕಂಡುಬರುತ್ತಲಿದ್ದು. ಭಕ್ತಿ ಭಂಡಾರಿ ಬಸವಣ್ಣನವರ ವಚನ “ಇವನಾರವ ಇವನಾರವ  ಎಂದೆನಿಸದಿರಯ್ಯಾ – ಇವ ನಮ್ಮವ ಇವ ನಮ್ಮವ ಎಂದೆನಿಸಿರಯ್ಯಾ. . . “  ಎಂಬಂತೆ ಉಭಯ ಪಕ್ಷಗಳು ಇವ ನಮ್ಮವ  ಇವ ನಮ್ಮವ ಎಂದು ಹೇಳುತ್ತಿರುವುದು ಕಂಡುಬರುತ್ತಿದ್ದು, ಜನ ಸಾಮಾನ್ಯನ ಕಿವಿಗೆ ಯಾವ ಹೂವು ಇಟ್ಟಿವೆ ಎಂಬುದೇ ಅರಿಯದಂತಾಗಿದೆ.

ಒಟ್ಟು 45 ಸದಸ್ಯತ್ವ ಬಲದ ಮಹಾನಗರ ಪಾಲಿಕೆಯಲ್ಲಿ ಬಿಜೆಪಿ 24 ಸ್ಥಾನದೊಂದಿಗೆ ಬಹುಮತ ಹೊಂದಿತ್ತು. ಆದರೆ, ಪರಿಶಿಷ್ಟ ಪಂಗಡಕ್ಕೆ ಮೇಯರ್ ಸ್ಥಾನ ಮೀಸಲಾಗಿದ್ದರಿಂದ ಬಿಜೆಪಿಯಲ್ಲಿ ಅಭ್ಯರ್ಥಿ ಇರಲಿಲ್ಲ. ಇದರಿಂದಾಗಿ 20 ಸ್ಥಾನದ ಕಾಂಗ್ರೆಸ್ ಅಧಿಕಾರಕ್ಕೇರಲು ಸಿದ್ಧತೆ ಮಾಡಿಕೊಂಡಿತ್ತು.

ಈ ವೇಳೆ ಮೇಯರ್‌ಗಿರಿಯ ಕ್ರೆಡಿಟ್ ಪಡೆಯಲು ಕಾಂಗ್ರೆಸ್ ಮತ್ತು ಬಿಜೆಪಿ ಕಾರ್ಯಕರ್ತರು ಪರಸ್ಪರ ಘೋಷಣೆ ಕೂಗಿ ಪೈಪೋಟಿ ನಡೆಸಿದರು. ಆದರೆ, ಕೊನೆ ಕ್ಷಣದಲ್ಲಿ ಕಾಂಗ್ರೆಸ್ ನ ವಿನಾಯಕ ಪೈಲ್ವಾನ್ ಬಿಜೆಪಿ ಕಡೆ ಗುರುತಿಸಿಕೊಳ್ಳುವ ಮೂಲಕ ಪಾಲಿಕೆಯಲ್ಲಿ ಗದ್ದಲದ ವಾತಾವಣ ನಿರ್ಮಾಣವಾಗಿತ್ತು.

ಈ ವೇಳೆ ನಡೆದ ಹಲವು ಬೆಳವಣಿಗೆಯಿಂದಾಗಿ ಕಾಂಗ್ರೆಸ್‌ನಿಂದ ನಾಮಪತ್ರ ಸಲ್ಲಿಸಿದ್ದ ಸವಿತಾ ಗಣೇಶ್ ಹುಲುಮನಿ ತಮ್ಮ ಉಮೇದುವಾರಿಕೆ ವಾಪಸ್ ಪಡೆದರು. ಹೀಗೆ ನಡೆದ ಬೆಳವಣಿಗೆಯಿಂದ ವಿನಾಯಕ ಪೈಲ್ವಾನ್ ಮಹಾಪೌರರಾಗಿ ಅವಿರೋಧವಾಗಿ ಆಯ್ಕೆಯಾದರು. ಮಧ್ಯಾಹ್ನ ಬಿಜೆಪಿಗರೊಂದಿಗೆ ಪಾಲಿಕೆಗೆ ಹೋದವರು ಸಂಜೆ ಹೊತ್ತಿಗೆ ಕಾಂಗ್ರೆಸ್‌ನವರೊಂದಿಗೆ ಹೊರ ಬಂದರು.

ಉಪಮಹಾಪೌರರಾಗಿ ಯಶೋಧ ಯಗ್ಗಪ್ಪ

ಉಪ ಮೇಯರ್ ಸ್ಥಾನಕ್ಕೆ ಕಾಂಗ್ರೆಸ್‌ನ ಶಿವಲೀಲಾ ಮತ್ತು ಬಿಜೆಪಿಯ ಯಶೋಧ ಯಗ್ಗಪ್ಪ ನಾಮಪತ್ರ ಸಲ್ಲಿಸಿದ್ದರು. ಬಿಜೆಪಿ ಅಭ್ಯರ್ಥಿ ಯಶೋಧ ಯಗ್ಗಪ್ಪ ಅವರು 29 ಮತ ಪಡೆದು, ಉಪಮೇಯರ್ ಆಗಿ ಆಯ್ಕೆಯಾದರು.

ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ನೂತನ ಮೇಯರ್ ವಿನಾಯಕ ಪೈಲ್ವಾನ್, ಶಾಸಕ ಡಾ. ಶಾಮನೂರು ಶಿವಶಂಕರಪ್ಪ ಅವರ ಆಶೀರ್ವಾದ ಹಾಗೂ ಕಾಂಗ್ರೆಸ್ ಮತ್ತು ಬಿಜೆಪಿ ಸದಸ್ಯರ ಸಹಕಾರದಿಂದ ಕಾಂಗ್ರೆಸ್‌ನಿಂದಲೇ ನಾಮಪತ್ರ ಸಲ್ಲಿಸಿ ಮೇಯರ್ ಆಗಿ ಆಯ್ಕೆಯಾಗಿದ್ದೇನೆ ಎಂದರು.

ಶಾಸಕ ಡಾ.ಶಾಮನೂರು ಶಿವಶಂಕರಪ್ಪ ಮಾತನಾಡಿ, ವಿನಾಯಕ ಪೈಲ್ವಾನ್ ಕಾಂಗ್ರೆಸ್‌ನಿಂದ ಮಹಾಪೌರರಾಗಿ ಆಯ್ಕೆಯಾಗಿದ್ದು, ಅವರು ಮುಂದೆ ಕಾಂಗ್ರೆಸ್‌ನಲ್ಲಿಯೇ ಮುಂದುವರೆಯುತ್ತಾರೆ ಎಂದರು.

ಜಿ.ಎಂ. ಸಿದ್ದೇಶ್ವರ್ ಹೇಳಿದ್ದೇನು?

ಮೇಯರ್ ಚುನಾವಣೆಯಲ್ಲಿ ಕಾಂಗ್ರೆಸ್‌ನವರ ಮರ್ಯಾದೆ ಹೋಗುತ್ತೆ ಅಂತಾ, ಕಾಂಗ್ರೆಸ್‌ನ ಅಧಿಕೃತ ಅಭ್ಯರ್ಥಿ ಸವಿತಾ ಗಣೇಶ್ ಹುಲುಮನಿ ನಾಮಪತ್ರ ವಾಪಸ್ ತೆಗೆಸಿ, ನಮ್ಮ ಬೆಂಬಲದಿಂದ ನಿಂತಿದ್ದ ವಿನಾಯಕ ಪೈಲ್ವಾನ್ ಅವರನ್ನು ಕಾಂಗ್ರೆಸ್ ಸದಸ್ಯರು ಬೆಂಬಲಿಸಿದ್ದಾರೆ ಎಂದು ಸಂಸದ ಜಿ.ಎಂ. ಸಿದ್ದೇಶ್ವರ ಹೇಳಿದರು. ನಮ್ಮ ಕಡೆ ಇರುವ ಪಕ್ಷೇತರರು ವಿನಾಯಕ ಪೈಲ್ವಾನ್  ಸೂಚಕರಾಗಿದ್ದರು. ಆದರೆ, ಕೊನೆ ಕ್ಷಣದಲ್ಲಿ ಮರ್ಯಾದೆ ಹೋಗುತ್ತೆ ಅಂತಾ ಕಾಂಗ್ರೆಸ್ ಅಭ್ಯರ್ಥಿಯ ನಾಮಪತ್ರ ವಾಪಸ್ ತೆಗೆಸಿದ್ದಾರೆ ಎಂದು ಹೇಳಿದ ಸಿದ್ದೇಶ್ವರ್ ಸ್ವತಃ ಶಾಮನೂರು ಶಿವಶಂಕರಪ್ಪನವರೇ ನನ್ನನ್ನು ದಾವಣಗೆರೆಯ ಚಾಣುಕ್ಯ ಎಂದು ಕರೆದಿದ್ದಾರೆ ಎಂದರು.

ಊಭಯ ಪಕ್ಷಗಳು ಗುನುಗುತ್ತಿರುವ ಬಸವ ತತ್ವ ಜನಸೇವೆಯಲ್ಲಿಯೂ ಮುಂದುವರೆಯಲಿ ಎಂಬುದು ಜನತೆಯ ಆಶಯ.

admin

admin

Leave a Reply

Your email address will not be published. Required fields are marked *

error: Content is protected !!