ಮಂಗಳ ಗ್ರಹದ ಮೇಲೆ ವಸಹತು ಸ್ಥಾಪಿಸುವುದರಲ್ಲಿ ಯಾವುದೇ ಅನುಮಾನವಿಲ್ಲ!

ಬಾಹ್ಯಾಕಾಶ: ಮಕ್ಕಳ ಜ್ಞಾನದಾಹಕ್ಕೆ ನೀರೆರೆದ ಇಸ್ರೋ ಮಾಜಿ ಮುಖ್ಯಸ್ಥ ಕೆ.ಎಸ್. ಕಿರಣ್ ಕುಮಾರ್

ಸುದ್ದಿ360, ದಾವಣಗೆರೆ, ಜು.15: ಪ್ರಸಕ್ತ ಬಾಹ್ಯಾಕಾಶ ವಲಯದಲ್ಲಿ ಭಾರತ 5 ಇಲ್ಲವೇ ಆರನೇ ಸ್ಥಾನದಲ್ಲಿದೆ. ಭಾರತ ಬಾಹ್ಯಾಕಾಶ ವಲಯದಲ್ಲಿ ಮೊದಲ ಸ್ಥಾನಕ್ಕೆ ಬಂದರೆ ಮಂಗಳನ ಮೇಲೆ ನೆಲೆ ಕಾಣುವಂತಹ ಸಾಧನೆ ಮಾಡಲು ಸಾಧ್ಯ. ಇದಕ್ಕಾಗಿ ಈಗಿನ ವಿದ್ಯಾರ್ಥಿಗಳು ವಿಜ್ಞಾನ ಮತ್ತು ತಂತ್ರಜ್ಞಾನ ವಲಯದಲ್ಲಿ ಹೆಚ್ಚಾಗಿ ತೊಡಗಿಕೊಳ್ಳಬೇಕು ಎಂದು ಇಸ್ರೋ ಮಾಜಿ ಮುಖ್ಯಸ್ಥ ಕೆ.ಎಸ್. ಕಿರಣ್ ಕುಮಾರ್ ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.

ಲಿಂ. ಶ್ರೀ ಜಯದೇವ ಜಗದ್ಗುರುಗಳ ಸ್ಮರಣೋತ್ಸವ ಕಾರ್ಯಕ್ರಮದ ಅಂಗವಾಗಿ ಶಿವಯೋಗಾಶ್ರಮದಲ್ಲಿ ಆಯೋಜಿಸಲಾಗಿದ್ದ ವಿದ್ಯಾರ್ಥಿಗಳ ಸಂವಾದ ಕಾರ್ಯಕ್ರಮದಲ್ಲಿ ಅವರು ಮಾತನಾಡುತ್ತಿದ್ದರು.

ಮಂಗಳ ಗ್ರಹದ ಮೇಲೆ ನೆಲೆ ಸ್ಥಾಪಿಸಲು ಸಾಧ್ಯವೇ ಎಂಬ ವಿದ್ಯಾರ್ಥಿಯೋರ್ವನ ಪ್ರಶ್ನೆಗೆ ಉತ್ತರಿಸಿದ ಅವರು, ಮುಂದೊಂದು ದಿನ ಮಂಗಳ ಗ್ರಹದ ಮೇಲೆ ವಸಹತು ಸ್ಥಾಪಿಸುವುದರಲ್ಲಿ ಯಾವುದೇ ಅನುಮಾನವಿಲ್ಲ. ಇದಕ್ಕೆ ಅಗತ್ಯವಾದ ತಂತ್ರಜ್ಞಾನ ಹಾಗೂ ಆರ್ಥಿಕತೆ ಮುಂದಿನ ದಿನಗಳಲ್ಲಿ ದೊರೆಯಲಿದೆ. ಈಗಿನ ಸಮಾಜದ ಅಗತ್ಯಕ್ಕೆ ತಕ್ಕಂತೆ ಬಾಹ್ಯಾಕಾಶ ತಂತ್ರಜ್ಞಾನ ಬಳಸಲಾಗುತ್ತಿದೆ. ಮುಂದೊಂದು ದಿನ ಪರಿಸ್ಥಿತಿ ಬದಲಾಗಿ ಮಂಗಳ ಗ್ರಹದ ಮೇಲೆ ನೆಲೆ ಸ್ಥಾಪಿಸುವ ದಿನ ಬರಲಿದೆ. ಅದಕ್ಕೆ ನೀನೇ ಯೋಜನಾ ನಿರ್ದೇಶಕನೂ ಆಗಬಹುದು ಎಂದು ವಿದ್ಯಾರ್ಥಿಗೆ ಹೇಳಿದರು.

ಮರು ಬಳಕೆ ರಾಕೆಟ್‌ ಮೂಲಕ ಉಡಾವಣೆಯ ವೆಚ್ಚ ಕಡಿಮೆಯಾಗುತ್ತದೆ ಹಾಗೂ ಇಂಧನವನ್ನೂ ಉಳಿಸಬಹುದು. ಆದರೆ, ಈಗಿನ ರಾಕೆಟ್‌ಗಳು ಮರು ಬಳಕೆಗೆ ಸೂಕ್ತವಲ್ಲ. ಹೊಸ ರೀತಿಯ ರಾಕೆಟ್‌ಗಳನ್ನು ರೂಪಿಸಬೇಕಿದೆ. ಇಸ್ರೋ ಈ ತಿಂಗಳು ಮರುಬಳಕೆ ರಾಕೆಟ್ ಕುರಿತು ಪ್ರಯೋಗವೊಂದನ್ನು ನಡೆಸುತ್ತಿದೆ. ಇದರ ಜೊತೆಗೆ ರಾಕೆಟ್ ಹಾರುವಾಗಲೇ ಗಾಳಿಯಲ್ಲಿ ಸಿಗುವ ಹೈಡ್ರೋಜನ್ ಹಾಗೂ ಆಕ್ಸಿಜನ್ ಪಡೆಯುವ ಬಗ್ಗೆಯೂ ಸಂಶೋಧನೆಗಳು ನಡೆಯುತ್ತಿವೆ ಎಂದು ಕಿರಣ್ ಕುಮಾರ್ ಮತ್ತೊಂದು ಪ್ರಶ್ನೆಗೆ ಉತ್ತರಿಸಿದರು.

ಬಾಹ್ಯಾಕಾಶದಲ್ಲಿ ಗಣಿಗಾರಿಕೆ ಸಾಧ್ಯತೆಯ ಪ್ರಶ್ನೆಗೆ ಉತ್ತರಿಸಿದ ಅವರು, ಇದೆಲ್ಲವೂ ವೆಚ್ಚ ಹಾಗೂ ಆರ್ಥಿಕತೆಯನ್ನು ಅವಲಂಬಿಸಿದೆ. ರಾಕೆಟ್ ಉಡಾವಣೆಯ ವೆಚ್ಚ ಕಡಿಮೆ ಹಾಗೂ ಅವುಗಳ ಸಾಮರ್ಥ್ಯ ಹೆಚ್ಚಾದಲ್ಲಿ ಮುಂದಿನ ದಿನಗಳಲ್ಲಿ ಬಾಹ್ಯಾಕಾಶದಲ್ಲೂ ಗಣಿಗಾರಿಕೆ ನಡೆಯಲಿದೆ ಎಂದು ಹೇಳಿದರು.

ಮಂಗಳ ಗ್ರಹದ ಮೇಲೆ ಜೀವನ ನಡೆಸಲು ಸಾಧ್ಯವೇ? ಎಂಬ ಇನ್ನೊಂದು ಪ್ರಶ್ನೆಗೆ ಉತ್ತರಿಸಿದ ಅವರು, ಆ ಗ್ರಹದಲ್ಲಿ ಕಾರ್ಬನ್ ಡೈಆಕ್ಸೈಡ್ ಹೆಚ್ಚಾಗಿದೆ. ಹೀಗಾಗಿ ಮೊದಲು ರೋಬೋಟ್‌ಗಳನ್ನು ಅಲ್ಲಿಗೆ ಕಳಿಸಿ ಮನುಷ್ಯನಿಗೆ ಸೂಕ್ತ ವಾತಾವರಣ ಸೃಷ್ಟಿಸಬೇಕಿದೆ. ನಂತರವಷ್ಟೇ ಮನುಷ್ಯರು ಅಲ್ಲಿಗೆ ಹೋಗಬಹುದು ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ವಿರಕ್ತಮಠದ ಶ್ರೀ ಬಸವಪ್ರಭು ಸ್ವಾಮೀಜಿ, ವಿಜ್ಞಾನಿಗಳು ದೇಶದ ದೊಡ್ಡ ಆಸ್ತಿಯಾಗಿದ್ದಾರೆ. ಶ್ರೇಷ್ಠ ವಿಜ್ಞಾನಿಗಳನ್ನು ಮತ್ತೆ ಮತ್ತೆ ಪಡೆಯಲು ಸಾಧ್ಯವಿಲ್ಲ. ಅಬ್ದುಲ್ ಕಲಾಂ ಹಾಗೂ ಕಿರಣ್ ಕುಮಾರ್ ಅವರು ಅಂತಹ ಆಸ್ತಿಗಳಾಗಿದ್ದಾರೆ ಎಂದು ಹೇಳಿದರು.

admin

admin

Leave a Reply

Your email address will not be published. Required fields are marked *

error: Content is protected !!