ಸುದ್ದಿ360 ದಾವಣಗೆರೆ: ಮಧ್ಯಾಹ್ನ ಉಪಹಾರ ಯೋಜನೆ ಅಡಿಯಲ್ಲಿ ರಾಜ್ಯಾದ್ಯಂತ ಇರುವ ಶಾಲೆಗಳಲ್ಲಿಅಡುಗೆ ಕೆಲಸ ನಿರ್ವಹಿಸುತ್ತಿರುವ ಬಿಸಿಯೂಟ ತಯಾರಕರ ವೇತನವನ್ನು ಆರು ಸಾವಿರ ರೂ. ಗಳಿಗೆ ಹೆಚ್ಚಿಸುವಂತೆ ಬಿಸಿಯೂಟ ತಯಾರಕರ ಫೆಡರೇಷನ್ (ಎಐಟಿಯುಸಿ ಸಂಯೋಜಿತ) ರಾಜ್ಯ ಸಮಿತಿ ಕರೆಯ ಮೇರೆಗೆ ದಾವಣಗೆರೆ ಜಿಲ್ಲಾ ಸಮಿತಿ ಮುಖ್ಯಮಂತ್ರಿ ಸಿದ್ಧರಾಮಯ್ಯ ಹಾಗೂ ಪ್ರಾಥಮಿಕ ಹಾಗೂ ಪ್ರೌಢಶಿಕ್ಷಣ ಸಚಿವರಿಗೆ ಜಿಲ್ಲಾಧಿಕಾರಿಗಳ ಮೂಲಕ ಮನವಿ ಸಲ್ಲಿಸಿತು.
2023 ಜುಲೈ ತಿಂಗಳನಲ್ಲಿ ಮಂಡಿಸುವ ಬಜೆಟ್‌ನಲ್ಲಿ ರಾಜ್ಯ ಸರ್ಕಾರವು ಬಿಸಿಯೂಟ ತಯಾರಕರಿಗೆ ಅವರ ವೇತನವನ್ನು ಆರು ಸಾವಿರ ರೂಪಾಯಿಗಳಿಗೆ ಹೆಚ್ಚಿಸುವಂತೆ ಬಿಸಿಯೂಟ ತಯಾರಕರ ಫೆಡರೇಷನ್ ಸರ್ಕಾರದಲ್ಲಿ ಮನವಿ ಮಾಡಿದೆ.
2023ರ ಕರ್ನಾಟಕ ವಿಧಾನಸಭಾ ಚುನಾವಣೆ ಸಂದರ್ಭಲ್ಲಿ ಎಐಟಿಯುಸಿ ನಾಯಕರೊಂದಿಗೆ ಎಐಸಿಸಿ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕ ಗಾಂಧಿಯವರು ಬೆಳಗಾವಿ ಜಿಲ್ಲೆಯ ಖಾನಾಪುರದಲ್ಲಿ ಚರ್ಚಿಸಿ ಈ ಬಾರಿ ಕರ್ನಾಟಕದಲ್ಲಿ ಕಾಂಗ್ರೆಸ್ ಪಕ್ಷವನ್ನು ಬೆಂಬಲಿಸಿ ಅಧಿಕಾರಕ್ಕೆ ತಂದರೆ ನಮ್ಮ ಸರ್ಕಾರವು ಆರನೇ ಗ್ಯಾರಂಟಿಯಾಗಿ ಬಿಸಿಯೂಟ ತಯಾರಕರಿಗೆ ಈಗಿರುವ ವೇತನಕ್ಕೆ ಬದಲಾಗಿ ಆರು ಸಾವಿರ ರೂಪಾಯಿಗೆ ಹೆಚ್ಚಿಸಲಾಗುವುದು ಎಂದು ಘೋಷಿಸಿದ್ದರು. ಅದರಂತೆ 2023ರ ಜುಲೈ ತಿಂಗಳಲ್ಲಿ ಸರ್ಕಾರವು ಮಂಡಿಸುವ ಬಜೆಟ್‌ನಲ್ಲಿ ಬಿಸಿಯೂಟ ತಯಾರಕರಿಗೆ 6000/- ರೂಪಾಯಿಗೆ ವೇತನವನ್ನು ಹೆಚ್ಚಿಸಬೇಕೆಂದು ವಿನಂತಿಸುವುದಾಗಿ ಫೆಡರೇಷನ್ ಮನವಿಯಲ್ಲಿ ತಿಳಿಸಿದೆ.
ಈ ಸಂದರ್ಭದಲ್ಲಿ ಎಐಟಿಯುಸಿ ರಾಜ್ಯ ಪ್ರದಾನ ಕಾರ್ಯದರ್ಶಿ ಕಾಂ. ಆವರಗೆರೆ ಚಂದ್ರು, ಸಿ. ರಮೇಶ್, ಬಿ.ಸಿ. ಮಂಜುಳ, ಗದಿಗೇಶ್, ಪಾರ್ವತಮ್ಮ, ನೀಲಮ್ಮ, ಜಯಮ್ಮ, ಸರೋಜಮ್ಮ, ಶಾರದಮ್ಮ, ಇಂದ್ರಮ್ಮ, ಮಂಜುಳಾ, ಗೌರಮ್ಮ, ವಿಜಯಮ್ಮ, ಬಸಮ್ಮ ಸೇರಿದಂತೆ ಅನೇಕ ಬಿಸಿಯೂಟ ತಯಾರಕರು ಇದ್ದರು.