ಬೇಡಿಕೆಗಳ ಈಡೇರಿಕೆಗಾಗಿ ತೀವ್ರ ಹೋರಾಟದ ಅಗತ್ಯವಿದೆ : ಎಐಟಿಯುಸಿ ರಾಜ್ಯ ಉಪಾಧ್ಯಕ್ಷ ಎಂ ಸಿ ಡೋಂಗ್ರೆ

ಸುದ್ದಿ360 ಶಿವಮೊಗ್ಗ, ಜು.25: ಬೆಲೆ ಏರಿಕೆ ನಿಯಂತ್ರಿಸಲಾಗದೆ ಜನಸಾಮಾನ್ಯರ ಬದುಕು ದುಸ್ತರವಾಗಿಸಿರುವ ಸರ್ಕಾರಗಳ ಮುಂದೆ ತಮ್ಮ ಬೇಡಿಕೆಗಳನ್ನು ಈಡೇರಿಸಿಕೊಳ್ಳಲು ತೀವ್ರ ಹೋರಾಟದ ಅಗತ್ಯವಿದೆ. ಮತ್ತು ಅದಕ್ಕಾಗಿ ರೂಪರೇಷೆ ಸಿದ್ದಪಡಿಸಿಕೊಳ್ಳಬೇಕೆಂದು ಎಐಟಿಯುಸಿ ರಾಜ್ಯ ಸಮಿತಿ ಉಪಾಧ್ಯಕ್ಷರಾದ ಎಂ ಸಿ ಡೋಂಗ್ರೆ ಹೇಳಿದರು.

ಶಿವಮೊಗ್ಗ ನಗರದ ಭೋವಿಭವನದಲ್ಲಿ ಅಕ್ಷರ ದಾಸೋಹ ಬಿಸಿಯೂಟ ತಯಾರಕರ ಫೆಡರೇಶನ್(ಎಐಟಿಯುಸಿ ಸಂಯೋಜಿತ) ರಾಜ್ಯ ಸಮಿತಿ ಆಯೋಜಿಸಿದ್ದ ಬಿಸಿಯೂಟ ತಯಾರಕ ಮಹಿಳೆಯರಿಗಿರುವ ಸಮಸ್ಯೆಗಳು ಸವಾಲುಗಳು ಮತ್ತು ಪರಿಹಾರ ಕುರಿತು ಏರ್ಪಡಿಸಿದ್ದ ರಾಜ್ಯಮಟ್ಟದ ಸಂಘಟನಾ ಸಮಾವೇಶ ಉದ್ಘಾಟಿಸಿ ಅವರು ಮಾತನಾಡಿದರು.

ಪ್ರಸ್ತುತ ಪೆಟ್ರೋಲ್, ಡೀಸೆಲ್ ಸೇರಿದಂತೆ ಅಗತ್ಯ ವಸ್ತುಗಳ ಬೆಲೆ ಏರಿಕೆಯಿಂದಾಗಿ ದೇಶದ ಮಧ್ಯಮ ಮತ್ತು ಬಡಜನರ ಆರ್ಥಿಕ ಸ್ಥಿತಿ ಗಂಭೀರವಾಗಿದೆ ವಿದ್ಯಾವಂತರಿಗೆ ಹಾಗೂ ದುಡಿಯುವ ಕೈಗಳಿಗೆ ಕೆಲಸ ಇಲ್ಲದಂತಾಗಿದೆ ದೇಶ ಹಾಗೂ ಜನರು ಅನೇಕ ಸಮಸ್ಯೆಗಳಿಗೆ ಸಿಲುಕಿದ್ದರೂ ಜನರ ದಿಕ್ಕು ತಪ್ಪಿಸುವ ನಿಟ್ಟಿನಲ್ಲಿ ಅನಗತ್ಯ ವಿಷಯಗಳನ್ನು ಸೃಷ್ಟಿಸಿ ಜನರಲ್ಲಿ ಪರಸ್ಪರ ದ್ವೇಷಭಾವನೆ ಮೂಡಿಸುತ್ತಿರುವುದು ನಿಜಕ್ಕೂ ದುರಂತ ಎಂದರು.

ಈ ಹಿಂದೆ ಆಡಳಿತ ನಡೆಸಿದ ಸರ್ಕಾರಗಳಿಗೆ ಜನಪರ ಕಾಳಜಿ ಇತ್ತು, ಆದರೆ ಈ ಸರ್ಕಾರಕ್ಕೆ ಬಡಜನರ ಸಮಸ್ಯೆಗಳ ಬಗ್ಗೆ ಯಾವುದೇ ಅನುಕಂಪ ಇಲ್ಲ ಬೆಲೆ ಏರಿಕೆಯಿಂದಾಗಿ ಜನಸಾಮಾನ್ಯರು ಜೀವನ ನಡೆಸುವುದೇ ಕಷ್ಟವಾಗಿದೆ ಬಿಸಿಯೂಟ ತಯಾರಕ ಮಹಿಳೆಯರು ಸರ್ಕಾರ ನೀಡುತ್ತಿರುವ ಅಲ್ಪ ವೇತನದಲ್ಲಿ ಬದುಕಿನ ಬಂಡಿ ಸಾಗಿಸುವುದು ದೊಡ್ಡ ಸವಾಲಾಗಿದೆ. ಕಾರಣ ಸಂಘಟನೆಯ ಮುಖಂಡರೆಲ್ಲರೂ ಒಟ್ಟಾಗಿ ಹೋರಾಟದ ಬಗ್ಗೆ ಚರ್ಚೆ ನಡೆಸಬೇಕು ಅಲ್ಲದೆ ಅಸಂಘಟಿತರಾಗಿರುವ ಇತರೆ ಬಡ ಕೂಲಿ ಕಾರ್ಮಿಕರನ್ನು ಒಗ್ಗೂಡಿಸಿ ಅವರ ಸಮಸ್ಯೆಗಳನ್ನು ಪರಿಹರಿಸಲು ಚಳುವಳಿ ಕೈಗೊಳ್ಳುವಂತೆ ಕರೆ ನೀಡಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಬಿಸಿಯೂಟ ತಯಾರಕರ ಫೆಡರೇಷನ್ ರಾಜ್ಯ ಅಧ್ಯಕ್ಷರಾದ ಕಾಂ ಹೊನ್ನಪ್ಪ ಮರಿಯಮ್ಮನವರ್ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ಕಟ್ಟಡ ಕಟ್ಟುವ ಕಲ್ಲು ಒಡೆಯುವ ಕ್ವಾರಿ ಕಾರ್ಮಿಕರ ಸಂಘದ ರಾಜ್ಯಾಧ್ಯಕ್ಷರಾದ ಕಾಂ ಹೆಚ್ ಜಿ ಉಮೇಶ್ ಸೇರಿದಂತೆ ಮತ್ತಿರರು ಮಾತನಾಡಿದರು.

ವೇದಿಕೆ ಕಾರ್ಯಕ್ರಮಕ್ಕೂ ಮೊದಲು ಬಿಸಿಯೂಟ ತಯಾರಕರಿಂದ ಶಿವಮೊಗ್ಗ ನಗರದಲ್ಲಿ ಬೃಹತ್ ಹಕ್ಕೊತ್ತಾಯದ ಮೆರವಣಿಗೆ ನಡೆಸಲಾಯಿತು. ಎಐಟಿಯುಸಿ ಸಂಘಟನೆಗೆ 100 ವರ್ಷ ದಾಟಿರುವ ಹಿನ್ನೆಲೆಯಲ್ಲಿ ಧ್ವಜಾರೋಹಣವನ್ನು ಎಐಟಿಯುಸಿ ರಾಜ್ಯ ಉಪಾಧ್ಯಕ್ಷರು ಹಾಗೂ ಮಹಿಳಾ ಮುಖಂಡರಾದ ಕಾಂ ಎಂ ಜಯಮ್ಮ ನೆರವೇರಿಸಿದರು.

ಕಾರ್ಯಕ್ರಮದ ನಿರ್ವಹಣೆ ಮತ್ತು ಸ್ವಾಗತವನ್ನು ಫೆಡರೇಶನ್ ನ ರಾಜ್ಯ ಪ್ರಧಾನ ಕಾರ್ಯದರ್ಶಿಯಾದ ಕಾಂ ಅವರಗೆರೆ ಚಂದ್ರು ಮಾಡಿದರು. ವೇದಿಕೆಯಲ್ಲಿ ಬೆಳಲಗೆರೆ ರುದ್ರಮ್ಮ, ಶೈಲಜಾ, ಮಂಜುನಾಥ್, ಅಕ್ಕಮ್ಮ, ಪರಮೇಶ್ವರ ಹೊಸಕೊಪ್ಪ ಸೇರಿದಂತೆ ರಾಜ್ಯ ಸಮಿತಿಯ ಇತರ ಮುಖಂಡರು ಇದ್ದರು.

admin

admin

Leave a Reply

Your email address will not be published. Required fields are marked *

error: Content is protected !!