ಸುದ್ದಿ360 ದಾವಣಗೆರೆ ಜ.11: ಹಲವಾರು ವರ್ಷಗಳಿಂದ ನಮ್ಮ ಬೇಡಿಕೆಗಳು ಬೇಡಿಕೆಗಳಾಗೆ ಉಳಿದಿವೆ, ನಮ್ಮ ಬೇಡಿಕೆಗಳ ಕುರಿತಾಗಿ ಚರ್ಚಿಸಲು ಸಂಬಂಧಪಟ್ಟ ಅಧಿಕಾರಿಗಳೊಂದಿಗೆ ಆಯುಕ್ತರ ನೇತೃತ್ವದಲ್ಲಿ ತಕ್ಷಣ ಜಂಟಿ ಸಭೆ ಕರೆದು ಕ್ರಮ ಕೈಗೊಳ್ಳಬೇಕು ಎಂಬುದಾಗಿ ನಿವೇಶನ ಮತ್ತು ವಸತಿ ರಹಿತರ ಹೋರಾಟ ಸಮಿತಿ ಆಗ್ರಹಿಸಿದೆ,
ಮೂಲಭೂತ ಸೌಕರ್ಯಗಳೊಂದಿಗೆ ವಸತಿ/ನಿವೇಶನ ರಹಿತರಿಗೆ ವಸತಿ/ನಿವೇಶನ ಕಲ್ಪಿಸಲು ಸಿಪಿಐ(ಎಂ) ಪಕ್ಷದ ನೇತೃತ್ವದಲ್ಲಿ ನಿಟುವಳ್ಳಿ ದುರ್ಗಾಂಬಿಕಾ ದೇವಸ್ಥಾನದಿಂದ ಮೆರವಣಿಗೆ ಹೊರಟ ಪ್ರತಿಭಟನಾಕಾರರು ಮಹಾನಗರ ಪಾಲಿಕೆ ಆವರಣ ತಲುಪಿ ತಮ್ಮ ಬೇಡಿಕೆಗಳನ್ನು ಈಡೇರಿಸುವಂತೆ ಮನವಿ ಸಲ್ಲಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಸಮಿತಿಯ ಗೌರವಾಧ್ಯಕ್ಷ ಆನಂದರಾಜು ಕೆ.ಹೆಚ್. ನಗರದಲ್ಲಿ ವಾಸವಿರುವ ಮೂವತ್ತು ಸಾವಿರ ಕುಟುಂಬಗಳಿಗೆ ವಾಸಿಸಲು ಸ್ವಂತ ವಸತಿಯಾಗಲಿ ನಿವೇಶನವಾಗಲಿ ಇಲ್ಲ. ಈ ಸಂಬಂಧ ತಕ್ಷಣ ಕ್ರಿಯಾ ಯೋಜನೆ ಸಿದ್ಧಪಡಿಸಿ ವಸತಿ/ನಿವೇಶನ ಹಂಚುವ ಪ್ರಕ್ರಿಯೆ ಆರಂಭಿಸಬೇಕು. ಕಾರ್ಮಿಕರ ಹಿತದೃಷ್ಟಿಯಿಂದ ಇದ್ದಂತಹ ಸಂಜೆ ಕ್ಲಿನಿಕ್ ಗಳನ್ನು ಮುಚ್ಚಲಾಗಿದೆ ಇವು ಪುನಃ ಪ್ರಾರಂಭಿಸಬೇಕು. ಹೆಚ್ಚಿಸಿರುವ ನೀರಿನ ಕಂದಾಯವನ್ನು ಕಡಿಮೆ ಮಾಡಬೇಕು. ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತಯಾರಾಗಲು ವಿದ್ಯಾರ್ಥಿಗಳಿಗೆ ಪ್ರತಿ ವಾರ್ಡ್ ನಲ್ಲಿ ಸುಸಜ್ಜಿತವಾದ ಸಾರ್ವಜನಿಕ ಗ್ರಂಥಾಲಯ ನಿರ್ಮಿಸಬೇಕು ಸೇರಿದಂತೆ ಹಲವು ಬೇಡಿಕೆಗಳನ್ನು ಈಡೇರಿಸುವಂತೆ ಮನವಿ ಮಾಡಿದರು.
ನಮ್ಮ ಬೇಡಿಕೆಗಳನ್ನು ಈಡೇರಿಸಲು ತಕ್ಷಣ ಕ್ರಮಕೈಗೊಳ್ಳದೇ ಇದ್ದಲ್ಲಿ ಮುಂಬರುವ ದಿನಗಳಲ್ಲಿ ದೊಡ್ಡಮಟ್ಟದ ಹೋರಾಟ ರೂಪಿಸಲಾಗುವುದು ಎಂದು ಪ್ರತಿಭಟನಾ ನಿರತರು ಎಚ್ಚರಿಸಿದರು. ಈ ಸಂದರ್ಭದಲ್ಲಿ ಸಮಿತಿಯ ಅಧ್ಯಕ್ಷರಾದ ಸುಮಿತ್ರಬಾಯಿ, ಕಾರ್ಯದರ್ಶಿ ಅನಿತಾ, ಖಜಾಂಚಿ ಪುಷ್ಪಲತಾ ಎ. ಕೆ., ಉಪಾಧ್ಯಕ್ಷೆ ಪುಷ್ಪಾ ಬಿ., ಸಹ ಕಾರ್ಯದರ್ಶಿ ಷಂಶದ್, ಕಾಂ. ಶ್ರೀನಿವಾಸ್ ಇತರರು ಇದ್ದರು.