ಸುದ್ದಿ360, ಶಿವಮೊಗ್ಗ, ಜು.9: ಲಕ್ಕವಳ್ಳಿಯ ಭದ್ರಾ ಜಲಾಶಯದಿಂದ ನಾಳೆ (ಜು. 10) ರಾತ್ರಿಯಿಂದಲೇ ಬಲದಂಡೆ ಕಾಲುವೆಗೆ 1000 ಕ್ಯೂಸೆಕ್ ಹಾಗೂ ಎಡದಂಡೆಗೆ 150 ಕ್ಯೂಸೆಕ್ ನೀರು ಹರಿಸಲು ಕಾಡಾ ತೀರ್ಮಾನಿಸಿದೆ.
ಉತ್ತಮ ಮಳೆಯಾದ ಹಿನ್ನೆಲೆ ಭದ್ರಾ ಜಲಾಶಯಕ್ಕೆ 30 ಸಾವಿರ ಕ್ಯೂಸೆಕ್ ನೀರು ಹರಿದು ಬರುತ್ತಿದ್ದು, ಇಂದಿನ (ಜು.09) ನೀರಿನ ಮಟ್ಟ 168.8 ತಲುಪಿದೆ. ಹೀಗಾಗಿ ಬಲದಂಡೆ ಕಾಲುವೆಗೆ 1000 ಕ್ಯೂಸೆಕ್ ಹಾಗೂ ಎಡದಂಡೆಗೆ 150 ಕ್ಯುಸೆಕ್ ನೀರು ಹರಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಭದ್ರಾ ಕಾಡಾ ಅಧ್ಯಕ್ಷೆ ಪವಿತ್ರಾ ರಾಮಯ್ಯ ಮಾಹಿತಿ ನೀಡಿದ್ದಾರೆ.
ಜೂನ್ 29ರಂದು ನಡೆದ ಸಭೆಯಲ್ಲಿ ಜುಲೈ 15ರೊಳಗೆ ಜಲಾಶಯದಲ್ಲಿ ನೀರಿನ ಮಟ್ಟ 165 ಅಡಿಗೆ ತಲುಪಿದರೆ ತಕ್ಷಣ ಕಾಲುವೆಗೆ ನೀರು ಹರಿಸುವ ತೀರ್ಮಾನ ಕೈಗೊಳ್ಳಲಾಗಿತ್ತು. ಈಗ ಒಂದು ವಾರ ಮೊದಲೇ ಜಲಾಶಯದಲ್ಲಿ ನೀರಿನ ಮಟ್ಟ 165 ಅಡಿ ದಾಟಿದೆ. ಹೀಗಾಗಿ ನೀರು ಬಿಡುವ ತೀರ್ಮಾನ ಕೈಗೊಂಡಿದೆ.
ಹಿಂದಿನ ವರ್ಷ ಈ ದಿನ 155 ಅಡಿಯಷ್ಟು ನೀರು ಸಂಗ್ರಹವಾಗಿತ್ತು. ಈ ಬಾರಿ 10 ಅಡಿಯಷ್ಟು ನೀರು ಹೆಚ್ಚು ಸಂಗ್ರಹವಾಗುದೆ. ಈ ಬಾರಿಯ ಮುಂಗಾರು ಬೆಳೆಗಳಿಗೆ ಭದ್ರಾ ಜಲಾಶಯದಿಂದ ಎಡದಂಡೆ ನಾಲೆ, ಬಲದಂಡೆ ನಾಲೆ, ಆನವೇರಿ ಶಾಖಾ ನಾಲೆ, ದಾವಣಗೆರೆ ಶಾಖಾ ನಾಲೆ, ಮಲೇಬೆನ್ನೂರು ಶಾಖಾ ನಾಲೆ ಮತ್ತು ಹರಿಹರ ಶಾಖಾ ನಾಲೆಯ ಮೂಲಕ ನೀರು ಹರಿಸಬೇಕಿದೆ. ನೀರಿನ ಮಟ್ಟ ಹೆಚ್ಚಳದಿಂದ ಅಚ್ಚುಕಟ್ಟು ಪ್ರದೇಶದ ಭತ್ತ, ಅಡಿಕೆ ಬೆಳೆಗಾರರಲ್ಲಿ ಸಂತಸ ತಂದಿದೆ.