ಕಾಡಾ ಅಧ್ಯಕ್ಷೆ ಪವಿತ್ರಾ ರಾಮಯ್ಯ ಹರ್ಷ – ನದಿ ಪಾತ್ರದ ಜನರಿಗೆ ಎಚ್ಚರಿಕೆ ಸಂದೇಶ
ಸುದ್ದಿ360, ಬಿಆರ್ ಪಿ, ಜು.14: ಮುಂಗಾರು ಮಳೆ ಮುಂದುವರೆದಿದ್ದು, ಭದ್ರಾ ಜಲಾಶಯ ಬಹುತೇಕ ಭರ್ತಿಯಾಗಿದೆ. ಈ ಹಿನ್ನೆಲೆಯಲ್ಲಿ ಜಲಾಶಯದ ಸುರಕ್ಷತೆ ದೃಷ್ಟಿಯಿಂದ 12 ಸಾವಿರ ಕ್ಯೂಸೆಕ್ ನೀರನ್ನು ನದಿಗೆ ಬಿಡಲಾಗಿದೆ.
ಇಂದು (ಜು.14) ಜಲಾಶಯಕ್ಕೆ 43 ಸಾವಿರ ಕ್ಯೂಸೆಕ್ ನೀರು ಒಳ ಹರಿವಿದ್ದು, ಇಂದಿನ ನೀರಿನ ಮಟ್ಟ 183.2 ಅಡಿಗೆ ಏರಿಕೆಯಾಗಿದೆ. ಡ್ಯಾಂ ಭರ್ತಿಗೆ ಕೇವಲ ಮೂರು ಅಡಿ ಮಾತ್ರ ಬಾಕಿ ಇದೆ.
ಬೆಳಗ್ಗೆ 6 ಗಂಟೆ ವೇಳೆಗೆ ನೀರಿನ ಮಟ್ಟ 183.2 ಅಡಿಗೆ ತಲುಪಿದೆ. ಭದ್ರಾ ಡ್ಯಾಂ 186 ಅಡಿಯಷ್ಟು ನೀರು ಸಂಗ್ರಹ ಸಾಮರ್ಥ್ಯ ಹೊಂದಿದೆ. ಒಟ್ಟು 71 ಟಿಎಂಸಿ ಸಾಮರ್ಥ್ಯ ಹೊಂದಿದೆ. ಒಳ ಹರಿವು ಹೆಚ್ಚಳ ಹಿನ್ನೆಲೆ ಅರ್ಧ ಅಡಿಯಷ್ಟು ಗೇಟ್ ಮೇಲಕ್ಕೆ ಎತ್ತಲಾಗಿದ್ದು, ನಾಲ್ಕು ಗೇಟ್ ಗಳಿಂದ 12 ಸಾವಿರ ಕ್ಯೂಸೆಕ ನೀರನ್ನು ಇಂದು ಮಧ್ಯಾಹ್ನ ನದಿಗೆ ಬಿಡಲಾಯಿತು.
ಈ ವೇಳೆ ಕಾಡಾ ಅಧ್ಯಕ್ಷೆ ಪವಿತ್ರಾ ರಾಮಯ್ಯ ಸುದ್ದಿಗಾರರೊಂದಿಗೆ ಮಾತನಾಡಿ, ಭದ್ರಾ ಜಲಾಶಯ ಮುಂಗಾರಿನಲ್ಲಿ ಇಷ್ಟು ಬೇಗ ಭರ್ತಿಯಾಗಿರುವುದು ಖುಷಿಯ ವಿಚಾರ. ಇದೇ ಮೊದಲ ಸಲ ಇಷ್ಟು ಬೇಗ ನದಿಗೆ ನೀರು ಬಿಡಲಾಗಿದೆ. ಒಳ ಹರಿವು ಹೆಚ್ಚಳ ಆದಂತೆ ಹೊರ ಹರಿವು ಸಹ ಹೆಚ್ಚಿಸಲಾಗುವುದು ಎಂದರು. ಇದಕ್ಕೂ ಮೊದಲು ಪವಿತ್ರಾ ರಾಮಯ್ಯ ಜಲಾಶಯಕ್ಕೆ ಪೂಜೆ ಸಲ್ಲಿಸಿದರು. ನಂತರ ಕ್ರಸ್ಟ್ ಗೇಟ್ ಓಪನ್ ಮಾಡಲಾಯಿತು. ಗೇಟ್ ಓಪನ್ ಮಾಡುತ್ತಿದ್ದಂತೆ 4 ಗೇಟ್ಗಳಿಂದ ಹರಿದು ಬಂದ ಮನಮೋಹಕ ದೃಶ್ಯವನ್ನು ಜಮಾಯಿಸಿದ್ದ ಜನ ಶಿಳ್ಳೆ, ಚಪ್ಪಾಳೆ ತಟ್ಟುವ ಮೂಲಕ ಆಸ್ವಾದಿಸಿದರು.
ನದಿಪಾತ್ರದ ಅಧಿಕಾರಿ- ಸಿಬ್ಬಂದಿಗಳು ಜಾಗೃತರಾಗಿರುವಂತೆ ಮತ್ತು ಅಲ್ಲಿನ ಜನ ಜಾನುವಾರುಗಳು ನದಿ ಪ್ರದೇಶಕ್ಕೆ ತೆರಳದಂತೆ ಎಚ್ಚರಿಕೆ ವಹಿಸಲು ಕೋರಿದೆ.