ಸುದ್ದಿ360 ದಾವಣಗೆರೆ, ಆ.22: ಎಸ್‌ಡಿಪಿಐ, ಪಿಎಫ್‌ಐ ಸಂಘಟನೆಗಳು ಕರ್ನಾಟಕ ಸೇರಿ ದೇಶಾದ್ಯಂತ ತಮ್ಮ ಚಟುವಟಿಕೆ ವಿಸ್ತರಿಸಿದ್ದು, ಭಾರತವನ್ನು ಇಸ್ಲಾಮಿಕ್ ರಾಷ್ಟ್ರವನ್ನಾಗಿ ಮಾಡಲು ಹುನ್ನಾರ ನಡೆಸಿವೆ ಎಂದು ಹಿಂದೂ ರಾಷ್ಟ್ರಸೇನೆ ರಾಷ್ಟ್ರೀಯ ಸಂಸ್ಥಾಪಕ ಅಧ್ಯಕ್ಷ ಧನಂಜಯ ಜಯರಾಮ ದೇಸಾಯಿ ಆರೋಪಿಸಿದರು.
ನಗರದಲ್ಲಿ ಇಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕೇರಳದಲ್ಲಿ ಜನ್ಮ ತಳೆದಿರುವ ಈ ಸಂಘಟನೆಗಳು 2047ರ ವೇಳೆಗೆ ಭಾರತವನ್ನು ಸಂಪೂರ್ಣ ಇಸ್ಲಾಮಿಕ್ ರಾಷ್ಟ್ರವನ್ನಾಗಿ ಮಾಡಲು ನಿರಂತರವಾಗಿ ಪ್ರಯತ್ನಿಸುತ್ತಿವೆ. ಎಸ್‌ಡಿಪಿಐ ಸೇರಿದಂತೆ ಇತರೆ ಮುಸ್ಲಿಂ ಸಂಘಟನೆಗಳ ಈ ಪ್ರಯತ್ನಕ್ಕೆ ತಕ್ಕ ಉತ್ತರ ನೀಡುವ ಉದ್ದೇಶದಿಂದ ದಾವಣಗೆರೆ ಸೇರಿ ರಾಜ್ಯದ ಹಲವು ಜಿಲ್ಲೆಗಳಲ್ಲಿ ಹಿಂದೂ ರಾಷ್ಟ್ರ ಸೇನೆ ಘಟಕ ಆರಂಭಿಸಲಾಗಿದೆ. ಹಿಂದುತ್ವಕ್ಕೆ ಸಂಬಂಧಿಸಿದ ಯಾವುದೇ ಹೋರಾಟಗಳಿದ್ದರೂ ಸಂಘಟನೆ ಸಕ್ರಿಯವಾಗಿ ಪಾಲ್ಗೊಳ್ಳಲಿದೆ ಎಂದು ತಿಳಿಸಿದರು.
ಭಾರತವನ್ನು ಅಖಂಡ ಹಿಂದೂ ರಾಷ್ಟ್ರವನ್ನಾಗಿ ಉಳಿಸಿಕೊಳ್ಳುವ ನಿಟ್ಟಿನಲ್ಲಿ ದೇಶದ ಹಿಂದೂಗಳೆಲ್ಲಾ ಪ್ರಾಂತ, ಭಾಷೆ, ಜಾತಿ ಭೇದ ಮರೆತು `ಹಿಂದೂ’ ಶಕ್ತಿಯ ಹೆಸರಲ್ಲಿ ಒಂದಾಗಬೇಕಿದೆ ಎಂದ ಅವರು, ರೋಹಿಂಗ್ಯ ಮುಸ್ಲಿಮರು ಮಯನ್ಮಾರ್‌ನಲ್ಲಿ ಶಾಂತಿ ಕದಡಿ ಭಾರತದೊಳಗೆ ನುಸುಳಿದ್ದಾರೆ. ದಾವಣಗೆರೆ ಸೇರಿ ರಾಜ್ಯದ ವಿವಿಧ ನಗರಗಳಲ್ಲೂ ಅವರಿದ್ದಾರೆ. ದೇಶದಲ್ಲಿ ಅಶಾಂತಿ ಸೃಷ್ಟಿಸುವುದು ಅವರ ಮೂಲ ಉದ್ದೇಶ. ಅವರಿಗೆ ಭಾರತದ ನಾಗರಿಕತ್ವ ನೀಡಿದರೆ ದೇಶದ ಪ್ರಜೆಗಳಿಗೆ ಅನ್ಯಾಯ ಮಾಡಿದಂತಾಗುತ್ತದೆ ಎಂದು ಅಭಿಪ್ರಾಯಪಟ್ಟರು.
ಬಿಜೆಪಿ ವಿರುದ್ಧ ಹೋರಟಕ್ಕೂ ಸಿದ್ದ
ಎಲ್ಲಿಯವರೆಗೆ ಬಿಜೆಪಿ ಹಿಂದೂ ರಾಷ್ಟ್ರ, ಹಿಂದುತ್ವ ಹಾಗೂ ದೇಶದ ಸಂಸ್ಕೃತಿಗೆ ಸಂಬಂಧಿಸಿದಂತೆ ದಿಟ್ಟ ನಿಲುವು ತೆಗೆದುಕೊಳ್ಳುವುದೋ ಅಲ್ಲಿಯವರೆಗೂ ಸಂಘಟನೆಯ ಬೆಂಬಲ ಪಕ್ಷಕ್ಕೆ ಇರಲಿದೆ. ಏಕರೂಪ ನಾಗರಿಕ ಕಾಯ್ದೆ ಜಾರಿಗೆ ನಮ್ಮ ಬೆಂಬಲವಿದ್ದು, ಬಿಜೆಪಿಯವರು ಹಿಂದುತ್ವದ ಬಗೆಗಿನ ಒಲವು ಕಳೆದುಕೊಂಡರೆ ಬೆಂಬಲ ವಾಪಸ್ ಪಡೆಯುವ ಜತೆಗೆ ಅವರ ವಿರುದ್ಧವೇ ಹೋರಾಟ ಮಾಡಲು ಸಿದ್ಧರಿದ್ದೇವೆ ಎಂದು ದೇಸಾಯಿ ಎಚ್ಚರಿಸಿದರು.
ಸುದ್ದಿಗೋಷ್ಠಿಯಲ್ಲಿ ಸಂಘದ ರಾಜ್ಯ ಪ್ರವಕ್ತ ಕೆ.ಎನ್. ಸಂದೀಪ್, ಎಂ. ಶ್ರೀಕಾಂತ್, ಎ. ಕಿರಣ್, ಎಸ್.ಪಿ. ಸುರೇಶ್, ಬಿ.ಕೆ. ಗುರುಬಸಪ್ಪö, ಎಂ.ಎಸ್. ಪ್ರಭಾಕರ ಇತರರಿದ್ದರು.