ಸುದ್ದಿ360 ಕೊಪ್ಪಳ ಜು.24: ಕುಕನೂರು ತಾಲೂಕಿನ ಭಾನಾಪುರ ಬಳಿ ಶನಿವಾರ ತಡರಾತ್ರಿ ನಡೆದ ಭೀಕರ ರಸ್ತೆ ಅಪಘಾತದಲ್ಲಿ ಐದು ಮಂದಿ ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ಕುಕನೂರು ತಾಲೂಕಿನ ಬಿನ್ನಾಳ ಗ್ರಾಮದ ದೇವಪ್ಪ ಕೊಪ್ಪದ(62), ಮೃತರ ಸೊಸೆ ಗಿರಿಜಮ್ಮ(45), ಅಣ್ಣನ ಮಕ್ಕಳಾದ ಶಾಂತಮ್ಮ(35), ಪಾರ್ವತಮ್ಮ(32), ಸಂಬಂಧಿ ಕಸ್ತೂರಮ್ಮ(20) ಮೃತ ದುರ್ದೈವಿಗಳಾಗಿದ್ದಾರೆ.
ಕೊಪ್ಪಳದಲ್ಲಿ ನಡೆದ ಕುಟುಂಬದ ಕಾರ್ಯಕ್ರಮವೊಂದರಲ್ಲಿ ಪಾಲ್ಗೊಂಡು ಕುಕನೂರು ತಾಲೂಕಿನ ಬಿನ್ನಾಳ ಗ್ರಾಮಕ್ಕೆ ವಾಪಸ್ ಹೋಗುವಾಗ ಅವಘಡ ಸಂಭವಿಸಿದೆ.
ವಾಹನದಲ್ಲಿ ಒಟ್ಟು ಒಂಬತ್ತು ಪ್ರಯಾಣಿಕರು ಇದ್ದರು. ಚಾಲಕ ಹರ್ಷವರ್ಧನ, ಮಕ್ಕಳಾದ ಬಸವರಾಜ, ಪುಟ್ಟರಾಜ, ಭೂಮಿಕಾ ಅವರನ್ನು ಜಿಲ್ಲಾಸ್ಪತ್ರೆಗೆ ರವಾನೆ ಮಾಡಲಾಗಿದೆ. ಈ ಪೈಕಿ ಒಬ್ಬರ ಸ್ಥಿತಿ ಗಂಭೀರವಾಗಿದ್ದು, ಮೃತರ ಸಂಖ್ಯೆ ಹೆಚ್ಚಾಗುವ ಸಾಧ್ಯತೆ ಇದೆ.
ಹಿಟ್ ಆ್ಯಂಡ್ ರನ್ – ಚೆಕ್ ಪೋಸ್ಟ್, ಟೋಲ್ ಗಳ ಮೇಲೆ ನಿಗಾ
ಭಾನಾಪೂರ ಅಪಘಾತ ಪ್ರಕರಣಕ್ಕೆ ಸಂಬಂಧಿಸಿದಂತೆ ಹಿಟ್ ಆ್ಯಂಡ್ ರನ್ ಮಾಡಿದ ವಾಹನ ಸವಾರನ ಪತ್ತೆಗೆ ಕ್ರಮ ವಹಿಸಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅರುಣಾಂಕ್ಷಿ ಗಿರಿ ಹೇಳಿದರು.
ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿ, ಕೊಪ್ಪಳದಲ್ಲಿ ಜನ್ಮ ದಿನಾಚರಣೆ ಸಂಬಂಧ ಬಿನ್ನಾಳ ಗ್ರಾಮದಿಂದ 9 ಜನರು ಕೊಪ್ಪಳಕ್ಕೆ ಬಂದಿದ್ದರು. ಮರಳಿ ಸ್ವ ಗ್ರಾಮಕ್ಕೆ ತೆರಳುವಾಗ ಈ ದುರ್ಘಟನೆ ನಡೆದಿದೆ.
ಸ್ಕಾರ್ಪಿಯೋಗೆ ಎವಿ ಲಾರಿ ಅಥವಾ ಟಿಪ್ಪರ್ ಗುದ್ದಿ ಮುಂದೆ ಹೋಗಿರುವ ಶಂಕೆಯಿದೆ. ಗುದ್ದಿ ಹೋಗಿರುವ ವಾಹನದ ಬ್ಯಾಕ್ ಸೈಡ್ ಮೋಟಾರ್ ಗಾಡಿದು ಸ್ಪೇರ್ ಪಾರಗಟ್ ಸಿಕ್ಕಿದೆ. ಇದರ ಆಧಾರದ ಮೇಲೆ ಟೋಲ್ ಗೇಟ್ ಹಾಗೂ ಉಳಿದ ಜಿಲ್ಲೆಯ ನೈಟ್ ಪೊಲೀಸ್ ಸಿಬ್ಬಂದಿಗೂ ವಾಹನ ಪತ್ತೆಗೆ ಸೂಚನೆ ನೀಡಿದ್ದೇವೆ.
ಸಮಗ್ರ ತನಿಖೆಯದ ಈ ಅಪಘಾತ ಪ್ರಕರಣದಲ್ಲಿ ಯಾರದ್ದು ತಪ್ಪಿದೆ ಎಂಬುದು ಎಲ್ಲ ರೀತಿಯ ತನಿಖೆಯಿಂದ ತಿಳಿದು ಬರಲಿದೆ ಎಂದಿದ್ದಾರೆ.