ಭ್ರಷ್ಟ ರಾಜಕಾರಣ ಕೊನೆಗಾಣಿಸಲು ಜನಚೈತನ್ಯ ಯಾತ್ರೆ : ಕೆ ಆರ್ ಎಸ್ ರಾಜ್ಯಾಧ್ಯಕ್ಷ ರವಿ ಕೃಷ್ಣಾರೆಡ್ಡಿ

ಸುದ್ದಿ360, ದಾವಣಗೆರೆ, ಜು.16: ಕೆಆರ್ ಎಸ್ ಪಕ್ಷದಿಂದ ಎರಡನೇ ಹಂತದ ಜನ ಚೈತನ್ಯ ಯಾತ್ರೆ ಜು.15 ರಂದು ಚಿತ್ರದುರ್ಗ ಜಿಲ್ಲೆಯಿಂದ ಆರಂಭವಾಗಿದ್ದು, ಜುಲೈ ಅಂತ್ಯದವರೆಗೆ 16ಜಿಲ್ಲೆಗಳಲ್ಲಿ ಸಂಚರಿಸಿ, ಭ್ರಷ್ಟ, ಹಾಗೂ ಪರಮನೀಚ ರಾಜಕಾರಣ ಕೊನೆಗಾಣಿಸುವ ನಿಟ್ಟಿನಲ್ಲಿ ಜನರಲ್ಲಿ ಜಾಗೃತಿ ಮೂಡಿಸುವ ಕಾರ್ಯವನ್ನು ಪಕ್ಷ ಹಮ್ಮಿಕೊಂಡಿದೆ ಎಂದು ಪಕ್ಷದ ರಾಜ್ಯಾಧ್ಯಕ್ಷ ರವಿ ಕೃಷ್ಣಾರೆಡ್ಡಿ ತಿಳಿಸಿದರು.

ನಗರದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಜನಚೈತನ್ಯ ಯಾತ್ರೆಯ ಅಂಗವಾಗಿ ಇಂದು ದಾವಣಗೆರೆಯಲ್ಲಿ ಹಲವು ಜಾಗೃತಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ಯಾತ್ರೆಯುದ್ದಕ್ಕೂ ಬಹಿರಂಗ ಸಭೆಗಳು, ಪತ್ರಿಕಾಗೋಷ್ಠಿಗಳು, ಸರ್ಕಾರಿ ಕಛೇರಿಗಳಲ್ಲಿ ಲಂಚಮುಕ್ತ ಅಭಿಯಾನ ಮತ್ತು ಇತ್ಯಾದಿ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ.

ಆದೇಶ ವಾಪಸ್ಗೆ ಕೆಆರ್ ಎಸ್ ಸ್ವಾಗತ

ಸರ್ಕಾರಿ ಇಲಾಖೆಗಳ ಕಚೇರಿ ವೇಳೆಯಲ್ಲಿ ಖಾಸಗಿ ವ್ಯಕ್ತಿಗಳು ಫೋಟೋ ತೆಗೆಯಬಾರದು ಮತ್ತು ವಿಡಿಯೋ ಮಾಡಬಾರದು ಎಂಬ ಆದೇಶ ರಾಜ್ಯ ಸರ್ಕಾರ ವಾಪಸ್ ಪಡೆದಿರುವುದು ಸ್ವಾಗತಾರ್ಹ ಎಂದು ಕೆ ಆರ್ ಎಸ್ ರಾಜ್ಯಾಧ್ಯಕ್ಷ ರವಿಕೃಷ್ಣಾರೆಡ್ಡಿ ಹೇಳಿದರು.

ದಾವಣಗೆರೆಯಿಂದ ಹಾವೇರಿ, ಧಾರವಾಡ, ಬೆಳಗಾವಿ ಜಿಲ್ಲೆಗಳ ಮೂಲಕ ಯಾತ್ರೆ ಮುಂದುವರೆಯಲಿದೆ. ಇದೇ ಸಂದರ್ಭದಲ್ಲಿ ಜು. 21 ರಂದು ನವಲಗುಂದ ಮತ್ತು ನರಗುಂದದಲ್ಲಿ ರೈತ ಹುತಾತ್ಮರ ಸ್ಮರಣಾ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದ್ದು, ಈ ಕಾರ್ಯಕ್ರಮದಲ್ಲಿ ರಾಜ್ಯದ ವಿವಿಧ ಭಾಗಗಳ ಕೆ.ಆರ್.ಎಸ್. ಪಕ್ಷದ ರೈತ ಘಟಕದ ಪದಾಧಿಕಾರಿಗಳು ಹಾಗು ಸೈನಿಕರು ಭಾಗವಹಿಸಲಿದ್ದಾರೆ ಎಂದು ತಿಳಿಸಿದರು.

ರಾಜ್ಯದಲ್ಲಿ ಇಂದು ದುರಾಡಳಿತ ಮತ್ತು ದಿಕ್ಕೆಟ್ಟ ಪರಿಸ್ಥಿತಿಯಿದ್ದು, ಇದನ್ನು ಜನರಿಗೆ ತಿಳಿಸುವ ನಿಟ್ಟಿನಲ್ಲಿ ಮೊದಲ ಹಂತದ 28 ದಿನಗಳ ಯಾತ್ರೆ 11ಜಿಲ್ಲೆಗಳಲ್ಲಿ ಸಂಚರಿಸಿ, ತುಮಕೂರಿನಲ್ಲಿ ಸಮಾರೋಪ ಗೊಂಡಿದೆ.

ದಾವಣಗೆರೆ ಉತ್ತರಕ್ಕೆ ಡಿ.ಜಿ. ಮಾಲತೇಶ್

ದಾವಣಗೆರೆ ಉತ್ತರ ಕ್ಷೇತ್ರಕ್ಕೆ ಯುವ ಘಟಕದ ಜಿಲ್ಲಾಧ್ಯಕ್ಷ ಡಿ.ಜಿ. ಮಾಲತೇಶ್ ಅವರನ್ನು ಸಂಭಾವ್ಯ ಅಭ್ಯರ್ಥಿ ಎಂದು ಆಯ್ಕೆ ಮಾಡಲಾಗಿದೆ. ಇನ್ನುಳಿದ ವಿಧಾನಸಭಾ ಕ್ಷೇತ್ರಗಳಿಗೆ ಮುಂದಿನ ದಿನಗಳಲ್ಲಿ ಆಯ್ಕೆ ಮಾಡಲಾಗುವುದು ಎಂದು ರವಿ ಕೃಷ್ಣಾರೆಡ್ಡಿ ಮಾಹಿತಿ ನೀಡಿದರು.

ಪಕ್ಷವು ಮುಂದಿನ ವಿಧಾನಸಭಾ ಚುನಾವಣೆಗೆ ಸಿದ್ಧತೆ ಮಾಡಿಕೊಳ್ಳುತ್ತಿದ್ದು, ರಾಜ್ಯದ 224 ಕ್ಷೇತ್ರಗಳಲ್ಲಿಯೂ ಚುನಾವಣೆ ಎದುರಿಸಲಿದೆ. ಈಗಾಗಲೇ 60ಕ್ಕೂ ಹೆಚ್ಚು ಕ್ಷೇತ್ರಗಳಲ್ಲಿ ಸಂಭಾವ್ಯ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗಿದ್ದು, ಮುಂದಿನ ಆರು ತಿಂಗಳಲ್ಲಿ 150 ಕ್ಕೂ ಹೆಚ್ಚು ಕ್ಷೇತ್ರಗಳಲ್ಲಿ ಅಭ್ಯರ್ಥಿಗಳ ಪಟ್ಟಿ ಸಿದ್ಧವಾಗಲಿದೆ ಎಂದರು.

ಸಮಾನ ಮನಸ್ಕ ಪಕ್ಷಗಳು ಒಂದಾಗಿ ಚುನಾವಣೆಗೆ

ಬೆಂಗಳೂರಿನಲ್ಲಿ ಕೆಆರ್ ಎಸ್  ಪಕ್ಷ ಜೆಡಿಯು ಮತ್ತು ಡಬ್ಲ್ಯೂಪಿಐ ಮೂರು ಪಕ್ಷಗಳು ಒಕ್ಕೂಟವಾಗಿ ಬಿಬಿಎಂಪಿ ಚುನಾವಣೆ ಎದುರಿಸುತ್ತಿದ್ದೇವೆ. ಹಾಗೆಯೇ ಆಮ್ ಆದ್ಮಿಪಕ್ಷ, ಸ್ವರಾಜ್ ಇಂಡಿಯಾ, ಉತ್ತಮ ಪ್ರಜಾಕೀಯ ಪಕ್ಷ, ನಾಲ್ಕೈದು ಕಮ್ಯುನಿಸ್ಟ್ ಪಕ್ಷಗಳು ಸೇರಿದಂತೆ ಸಮಾನ ಮನಸ್ಕ ಪಕ್ಷಗಳು ಒಟ್ಟಾಗಿ ಚುನಾವಣೆ ಎದುರಿಸುವ ಯೋಜನೆ ಪ್ರಗತಿಯಲ್ಲಿದೆ ಎಂದು ಹೇಳಿದರು.

ಕನಿಷ್ಟ ರೂ. 100 ನೀಡಿ ಸ್ವಯಂ ಪ್ರೇರಿತವಾಗಿ ಸದಸ್ಯತ್ವ ಪಡೆದಿರುವ ಹತ್ತು ಸಾವಿರಕ್ಕೂ ಹೆಚ್ಚು ಕಾರ್ಯಕರ್ತರು ಪಕ್ದಲ್ಲಿದ್ದು, ಹೆಚ್ಚು ಹೆಚ್ಚು ಸಂಘಟನಾತ್ಮಕವಾಗಿ ಪಕ್ಷ ಬೆಳಯುತ್ತಿದೆ. ಜನರು ಸಹ ಉದಾರವಾಗಿ ದೇಣಿಗೆ ನೀಡಿ ಬೆಂಬಲಿಸಿದ್ದಾರೆ. ಪಕ್ಷದ ಬಗ್ಗೆ ಜನರು ವಿಶ್ವಾಸ ಹೊಂದಿದ್ದು, ಪಾರದರ್ಶಕವಾಗಿ ಕಾರ್ಯ ನಿರ್ವಹಿಸುತ್ತಿದೆ ಎಂದರು.

ಸುದ್ದಿಗೋಷ್ಠಿಯಲ್ಲಿ ಪಕ್ಷದ ಡಿ.ಜಿ. ಮಾಲತೇಶ್, ಮಂಜುನಾಥ ಹಳ್ಳಿಕೇರಿ, ರಘು ಜಾಣಗರೆ, ಅಭಿಷೇಕ್ ಹಾಗೂ ಕಾರ್ಯಕರ್ತರು ಹಾಜರಿದ್ದರು.

ಜನಚೈತನ್ಯ ಯಾತ್ರೆ ನಿಮಿತ್ತ ಇಂದು ದಾವಣಗೆರೆಗೆ ಆಗಮಿಸಿದ್ದ ಕೆಆರ್ ಎಸ್ ಪಕ್ಷದ ರಾಜ್ಯಾಧ್ಯಕ್ಷ ರವಿ ಕೃಷ್ಣಾರೆಡ್ಡಿಯವರನ್ನು ಜಯದೇವ ವೃತ್ತದಲ್ಲಿ ನಡೆದ ಜನಜಾಗೃತಿ ಕಾರ್ಯಕ್ರಮದಲ್ಲಿ ಪಕ್ಷದ ಜಿಲ್ಲಾಧ್ಯಕ್ಷ ಮಂಜುನಾಥ್ ಹಳ್ಳಿಕೇರಿ ಮಾಲಾರ್ಪಣೆ ಮಾಡುವುದರ ಮೂಲಕ ಸ್ವಾಗತಿಸಿದರು.
admin

admin

Leave a Reply

Your email address will not be published. Required fields are marked *

error: Content is protected !!