ಮಕ್ಕಳ ರಜೆಯ ಮೋಜಿಗೆ ಬೀದಿ ನಾಯಿಗಳ ಅಡ್ಡಿ – ದಾವಣಗೆರೆ ಮಹಾನಾಗರ ಪಾಲಿಕೆ ಮಕ್ಕಳ ರಜೆಗೆ ರಂಗು ನೀಡಬಹುದೆ?

-ಕೂಡ್ಲಿ ಸೋಮಶೇಖರ್

ಬೇಸಿಗೆ ರಜೆ ಬಂತೆಂದರೆ ಮಕ್ಕಳ ಆಟೋಪಾಟಕ್ಕೆ ಎಣೆಯುಂಟೆ? ಶಾಲಾ ದಿನಗಳಲ್ಲೇ ಅವರನ್ನು ನಿಯಂತ್ರಿಸಲು ಹರಸಾಹಸ ಪಡುವ ಪೋಷಕರು ರಜಾದಿನಗಳಲ್ಲಿ ಅವರನ್ನು ಸಂಬಾಳಿಸುವುದು ಹೇಗಪ್ಪಾ ಅನ್ನೋ ಪೇಚಿಗೆ ಸಿಲುಕುವುದು ಸರ್ವೆ ಸಾಮಾನ್ಯ.

ಹೇಗೋ ಮನೆಯಾಚೆ ಸ್ನೇಹಿತರೊಡಗೂಡಿ ಆಟವಾಡಿಕೊಂಡು ಬರಲಿ ಎಂದು ಮನೆಯಾಚೆ ಕಳಿಸಿದರೆ ನಾಯಿಗಳ ಹಿಂಡೇ ಮಕ್ಕಳ ಮೇಲೆ  ಎರಗುವ ಪ್ರಕರಣಗಳು ನಗರದ ಕೆಲವೆಡೆ ಆಗೊಮ್ಮೆ ಈಗೊಮ್ಮೆ ವರದಿಯಾಗುತ್ತಲೇ ಇದೆ.

-ಸಾಂದರ್ಭಿಕ ಚಿತ್ರ

ನಗರದ ದೇವರಾಜ ಅರಸು ಬಡಾವಣೆ ಬಿ ಬ್ಲಾಕ್ನಲ್ಲಿಯೂ ಕೂಡ ಇಂತಹ ಪ್ರಕರಣಗಳು ಹೆಚ್ಚಾಗುತ್ತಲಿದ್ದು, ಪೋಷಕರು ಮಕ್ಕಳನ್ನು ಹೊರಗೆ ಆಟವಾಡಲು ಬಿಡದೆ ನಾಲ್ಕುಗೋಡೆಯ ಮಧ್ಯೆಯೇ ಕುಳ್ಳರಿಸುವ ಪರಿಸ್ಥಿತಿ ಇದೆ. ಆದರೆ ಮಕ್ಕಳು ಕೇಳಬೇಕಲ್ಲಾ. . . ನ್ಯೂಕ್ಲಿಯರ್ ಫ್ಯಾಮಿಲಿಯ ಈ ದಿನಗಳಲ್ಲಿ ಮಕ್ಕಳು ಶಾಲೆಗೆ ಹೊರಟರೆ ಪೋಷಕರು ಒಂದು ರೀತಿಯ ನಿರಾಳ. ಮಕ್ಕಳಿಗೆ  ಮೊಬೈಲ್, ಟಿ.ವಿ. ಲ್ಯಾಪ್ಟಾಪ್ ಹೀಗೆ ವಿದ್ಯುನ್ಮಾನ ಉಪಕರಣಗಳನ್ನು ಎಷ್ಟೊತ್ತು ಎಂದು ನೀಡುವುದು. ಇದರಿಂದ ಉಪಯೋಗಕ್ಕಿಂತ  ಉಪದ್ರವೇ ಹೆಚ್ಚು. ಸಮ್ಮರ್ ಕ್ಯಾಂಪುಗಳಿಗೆ ಎಲ್ಲ ಪೋಷಕರೂ ಕಳಿಸಲು ಆಗೋದಿಲ್ಲ. ದೈಹಿಕ ಚಟುವಟಿಕೆಯಲ್ಲಿ ತೊಡಗಿಸಲು ಮಕ್ಕಳನ್ನು ಮನೆಯಿಂದ ಹೊರಗಡೆ ಹೋಗಿ ಆಟವಾಡಿ ಎಂದು ಹೇಗೋ ಪುಸಲಾಯಿಸಿ ಅಕ್ಕಪಕ್ಕದ ಮನೆಯ ಮಕ್ಕಳೊಂದಿಗೆ ಆಟಕ್ಕೆ ಕಳುಹಿಸೋದು ಉಂಟು. ಒಂದಷ್ಟು ಹೊತ್ತು  ದೇಹಕ್ಕೆ ಉತ್ತಮ ವ್ಯಾಯಾಮ ದೊರೆತು, ಮನಸ್ಸೂ ಹಗುರಾಗಿಸಿಕೊಂಡು ಮಕ್ಕಳು ಮನೆಗೆ ತೆರಳಿದರೆ ಪೋಷಕರು ಮಕ್ಕಳು ಇಬ್ಬರಿಗೂ ಒಂದು ರೀತಿಯ ಸಮಾಧಾನ. ಪೋಷಕರು ಅಬ್ಬಾ ರಜೆಯ ಈ ಒಂದು ದಿನ ಹೇಗೋ ಮುಗಿಯಿತು ಎಂದು ಶಾಲೆಯ ಆರಂಭಕ್ಕೆ ಉಳಿದ ದಿನಗಳ ಎಣಿಕೆಗೆ ಮುಂದಾಗೋದು ಸಹಜ. ಅಂತದ್ದರಲ್ಲಿ ಈ ನಾಯಿಗಳ ಕಾಟದಿಂದ ಈಗ ಮಕ್ಕಳ ರಜೆಯ ಮೋಜಿಗೂ ಕತ್ತರಿ ಬಿದ್ದಂತಾಗಿದೆ.

ಮಕ್ಕಳು ಆಟವಾಡುವ ಸಂದರ್ಭದಲ್ಲಿ ಆಸುಪಾಸಿನಲ್ಲಿ ಸುಳಿದಾಡುವ ನಾಯಿಗಳು ದಿಢೀರನೇ ಮಕ್ಕಳ ಮೇಲೆ ಎರಗಲು ಮುಂದಾಗುವ ಪ್ರಸಂಗಗಳು ಪದೇ ಪದೇ ಮರುಕಳಿಸುತ್ತಲೇ ಇದೆ. ಮಕ್ಕಳು ಕಿರುಚಿದರೂ ಕೊಂಚವೂ ಅಳುಕದೇ ಬೆನ್ನುಹತ್ತುವ ನಾಯಿಗಳ ಉಪಟಳದಿಂದ ಮಕ್ಕಳು ಬಿದ್ದು ಎದ್ದು ಓಡುವುದು ಮತ್ತು  ಅಲ್ಲಿ ಸುಳಿದಾಡುವ ಯಾರಾದರೂ ನಾಯಿಗಳಿಗೆ ಬೆದರಿಸಿದ ಮೇಲೆಯೇ ಅವುಗಳು ಚದುರುವುದು. ಅಲ್ಲದೆ‌ ಈ ಭಾಗದ ಅರಣ್ಯ ಇಲಾಖೆ ಕಚೇರಿಯ ಮುಂದಿನ ರಸ್ತೆಯಲ್ಲಿ ಸಂಚರಿಸುವ ದ್ವಿಚಕ್ರ ವಾಹನ‌ ಸವಾರರಿಗೂ ಕೂಡ ಈ ನಾಯಿಗಳು ಉಪಟಳ ನೀಡಿದ್ದಿದೆ. ವಾಹನ ಸವಾರರ ಬೆನ್ನತ್ತಿ ಓಡಿದ್ದೂ ಇದೆ. ಇಂತಹ ಘಟನೆಗಳಿಂದ ಇಲ್ಲಿನ ನಿವಾಸಿಗಳು ಹೈರಾಣಾಗಿ ಹೋಗಿದ್ದಾರೆ.

ಇದಕ್ಕೆ ಸಂಬಂಧಿಸಿದ ಮಹಾನಾಗರ ಪಾಲಿಕೆ ಅಧಿಕಾರಿಗಳು ಇತ್ತ ಗಮನಹರಿಸಿ ನಾಯಿಗಳ ಉಪಟಳದಿಂದ ಸಾರ್ವಜನಿಕರಿಗೆ ಮುಕ್ತಿ ನೀಡಬೇಕಿದೆ. ಯಾವುದೇ ಅಹಿತಕರ ಘಟನೆ ನಡೆಯುವ ಮೊದಲು ದಾವಣಗೆರೆ ಮಹಾನಗರ ಪಾಲಿಕೆ ಕ್ರಮಕೈಗೊಳ್ಳಲಿ ಎಂಬುದು ಇಲ್ಲಿನ ನಿವಾಸಿಗಳ ಆಗ್ರಹ.

ಚುನಾವಣೆಯ ಕಾರ್ಯದಲ್ಲೇ ಮಿಂದೆದ್ದಿರುವ ಅಧಿಕಾರಿಗಳು ಕೊಂಚ ಇತ್ತ ಗಮನಿಸಿ ಮಕ್ಕಳ ರಜೆಗೆ ರಂಗು ತುಂಬಬಹುದೇ…?

admin

admin

Leave a Reply

Your email address will not be published. Required fields are marked *

error: Content is protected !!