ಸುದ್ದಿ360 ದಾವಣಗೆರೆ, ಜು.16: ದೊಡ್ಡ ಸಾಮಾಜಿಕ ಪಿಡುಗಾಗಿ ಬೆಳೆಯುತ್ತ ಯುವಜನರನ್ನು ಬಲಿ ತೆಗೆದುಕೊಳ್ಳುತ್ತಿರುವ ಡ್ರಗ್ಸ್ ವಿರುದ್ಧ ಬೃಹತ್ ಕಾಲ್ನಡಿಗೆ ಜಾಥಾ ಬೆಣ್ಣೆನಗರಿಯಲ್ಲಿ ಶನಿವಾರ ಜರುಗಿತು.
ವಿಜಯ ಕರ್ನಾಟಕ ದಿನಪತ್ರಿಕೆ ಜಿಲ್ಲಾ ಪೊಲೀಸ್ ಇಲಾಖೆ ಸಹಯೋಗದಲ್ಲಿ ಆಯೋಜಿಸಿದ್ದ ಮಾದಕ ವಸ್ತುಗಳ ವಿರುದ್ಧದ ಬೃಹತ್ ಕಾಲ್ನಡಿಗೆ ಜಾಥಾಕ್ಕೆ ನಗರದ ಗುಂಡಿ ಚೌಲ್ಟ್ರಿ ವೃತ್ತದಲ್ಲಿ ಡಿಸಿ ಶಿವಾನಂದ ಕಾಪಾಶಿ ‘ಮಾದಕ ವಸ್ತುಗಳ ವಿರುದ್ಧದ ಹೋರಾಟಕ್ಕೆ ಪೊಲೀಸರಿಗೆ ಸಹಕಾರ ನೀಡಿ’ ಎಂಬ ಘೋಷವಾಕ್ಯದ ಪ್ಲೇ ಕಾರ್ಡ್‌ನ್ನು ವಿದ್ಯಾರ್ಥಿಗಳಿಗೆ ನೀಡುವ ಮೂಲಕ ಕಾಲ್ನಡಿಗೆ ಜಾಥಾಗೆ ಚಾಲನೆ ನೀಡಿದರು.
ಡ್ರಗ್ಸ್ ವಿರುದ್ಧದ ಘೋಷಣೆ ಕೂಗುತ್ತಾ ಸಾಗಿದ ಕಾಲೇಜು ವಿದ್ಯಾರ್ಥಿಗಳಿಗೆ ಯುವಜನತೆ, ಸಂಘ ಸಂಸ್ಥೆಗಳ ಪದಾಕಾರಿಗಳು, ಅಧಿಕಾರಿಗಳು, ಜನಪ್ರತಿನಿಧಿಗಳು ಜಾಥಾದಲ್ಲಿ ಹೆಜ್ಜೆ ಹಾಕಿ ಡ್ರಗ್ಸ್ ವಿರುದ್ಧ ಸಂದೇಶಕ್ಕೆ ಸಾತ್ ನೀಡಿದರು.
ಕಾಲ್ನಡಿಗೆ ಜಾಥಾಗೆ ಕಲಾ ತಂಡಗಳು ಮೆರುಗು ನೀಡಿದವು. ಕನ್ನಡ ಸಂಸ್ಕೃತಿ ಇಲಾಖೆ ಸಹಕಾರದಲ್ಲಿ ಭಾಗವಹಿಸಿದ್ದ ನಾಸಿಕ್ ಡೋಲು, ವೀರಗಾಸೆ ಜಾಥಾದ ವಿಶೇಷ ಆಕರ್ಷಣೆ ಆಗಿದ್ದವು.
ಗುಂಡಿ ಚೌಲ್ಟ್ರಿ ವೃತ್ತದಿಂದ ಆರಂಭವಾದ ಜಾಥಾ ಚಿಗಟೇರಿ ಆಸ್ಪತ್ರೆ ಮುಂಭಾಗದ ಶಾಮನೂರು ರಸ್ತೆ ಹಾದು ಹದಡಿ ರಸ್ತೆ ತಲುಪಿ ವಿದ್ಯಾರ್ಥಿ ಭವನ ಸರ್ಕಲ್, ಅಂಬೇಡ್ಕರ್ ವೃತ್ತದ ಮೂಲಕ ಸಭಾ ಕಾರ್ಯಕ್ರಮ ನಡೆದ ಜಯದೇವ ವೃತ್ತದಲ್ಲಿ ಸಮಾಪ್ತಿಯಾಯಿತು. ಜಾಥಾದ ಉದ್ದಕ್ಕೂ ಡ್ರಗ್ಸ್ ಸೇರಿದಂತೆ ಕುಡಿತ, ಮದ್ಯಪಾನ, ಧೂಮಪಾನದ ವಿರುದ್ಧ ಘೋಷಣೆಗಳು ಮೊಳಗಿದವು. ಜಯದೇವ ವೃತ್ತದಲ್ಲಿ ಜಮಾಯಿಸಿದ ವಿದ್ಯಾರ್ಥಿಗಳಿಗೆ ಶಾಸಕ ಎಸ್.ಎ. ರವೀಂದ್ರನಾಥ್, ಸಮಾಜದ ಜವಾಬ್ಧಾರಿಯುತ ನಾಗರೀಕನಾಗಿ ಡ್ರಗ್ಸ್‌ನಿಂದ ದೂರವಿರುವ ಪ್ರತಿಜ್ಞಾ ವಿಧಿ ಬೋಧಿಸಿದರು.
ಡ್ರಗ್ಸ್ ವಿರುದ್ಧದ ಸಂದೇಶ ಸಾರಲು ಪಣತೊಟ್ಟ ವಿದ್ಯಾರ್ಥಿಗಳು ಬಿಟ್ಟು ಬಿಟ್ಟು ಬರುತ್ತಿದ್ದ ಮಳೆಯಲ್ಲಿಯೇ ಕೆಲವರು ಮಳೆಯನ್ನು ಆಸ್ವಾದಿಸುತ್ತಾ ಮತ್ತೆ ಕೆಲವರು ಛತ್ರಿಯ ಮೊರೆ ಹೋಗುವುದರ ಮೂಲಕ ಜಾಗೃತಿ ಜಾಥಾದಲ್ಲಿ ಪಾಲ್ಗೊಂಡರು. ಗಮ್ಯಸ್ಥಾನವನ್ನು ತಲುಪಿ ವೇದಿಕೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಗಣ್ಯರ ನುಡಿಗಳನ್ನು ಆಲಿಸಿದರು.
ಜಾಥಾದಲ್ಲಿ ಬಿಐಇಟಿ, ಜೈನ್ ಮಹಾವಿದ್ಯಾಲಯ, ಬಾಪೂಜಿ ಡೆಂಟಲ್ ಕಾಲೇಜು, ಮೋತಿ ವೀರಪ್ಪ, ಜಿಎಂಐಟಿ, ಮಹಿಳಾ ಕದಳಿ ವೇದಿಕೆ, ಸಮಾಜ ಕಲ್ಯಾಣ ಇಲಾಖೆ, ಎಆರ್‌ಜಿ, ಡಿಆರ್‌ಎಂ, ವಿನ್ನರ್ಸ್ ಕ್ಲಬ್, ತಪೋವನ ಕಾಲೇಜು, ಸರಕಾರಿ ನರ್ಸಿಂಗ್ ಮತ್ತು ಪ್ಯಾರಮೆಡಿಕಲ್ ಕಾಲೇಜು ವಿದ್ಯಾರ್ಥಿಗಳು, ಉಪನ್ಯಾಸಕರು ಪಾಲ್ಗೊಂಡಿದ್ದರು.
ಡಿಸಿ ಶಿವಾನಂದ ಕಾಪಶಿ, ಎಎಸ್ಪಿ ರಾಮಗೊಂಡ ವಿ.ಬಸರಗಿ, ಡಿವೈಎಸ್ಪಿ ಬಸವರಾಜ್, ಮಾಜಿ ಮೇಯರ್, ಹಾಲಿ ಸದಸ್ಯ ಅಜಯ್ ಕುಮಾರ್, ಪ್ರತಿ ಪಕ್ಷ ನಾಯಕ ಗಡಿಗುಡಾಳ್ ಮಂಜುನಾಥ್, ದೊಡ್ಡಬಾತಿ ತಪೋವನ ಸಮೂಹ ಸಂಸ್ಥೆಗಳ ಚೇರ‌್ಮನ್ ಡಾ. ಶಶಿಕುಮಾರ್ ಮೆಹರ್ವಾಡೆ, ಡಿಎಚ್‌ಒ ಡಾ, ನಾಗರಾಜ್, ಮಹಾನಗರ ಪಾಲಿಕೆ ಆಯುಕ್ತ ವಿಶ್ವನಾಥ್ ಮುದಜ್ಜಿ, ಅಬಕಾರಿ ಡಿಸಿ ಶಿವಪ್ರಸಾದ್, ಸಾಮಾಜಿಕ ಕಾರ್ಯಕರ್ತ ಶ್ರೀಕಾಂತ್, ಜಿಲ್ಲಾ ಯೋಗ ಒಕ್ಕೂಟದ ವಾಸುದೇವ ರಾಯ್ಕರ್, ವಿನ್ನರ್ಸ್ ಅಕಾಡೆಮಿಯ ಶಿವರಾಜ ಕಬ್ಬೂರು, ದೂಡಾ ವ್ಯವಸ್ಥಾಪಕ ಕೃಷ್ಣಾ, ಜಿಲ್ಲಾ ಸಶಸ್ತ್ರ ಪಡೆ ಕಿರಣ್, ಕದಳಿ ವೇದಿಕೆಯ ಸೌಮ್ಯ ಸತೀಶ್, ಕೊಟ್ರಮ್ಮ, ಸತೀಶ್‌ಕುಮಾರ್, ಶಾಂತ, ಡಿಆರ್‌ಎಂ ಕಾಲೇಜ ಮಂಜುರಾಜ್, ಪೊಲೀಸ್ ಅಕಾರಿಗಳಾದ ಮಾಳಮ್ಮ, ಪ್ರಶಾಂತ್, ಉಪನ್ಯಾಸಕರಾದ ಡಾ. ಓಂಕಾರಪ್ಪಘ, ಡಾ. ಬಸವರಾಜಪ್ಪ, ವೀರೇಶ್‌ಕುಮಾರ್, ಪ್ರಗತಿ ಗ್ರಾಮೀಣ ಬ್ಯಾಂಕ್, ಬರೋಡಾ ಬ್ಯಾಂಕ್ ಅಧಿಕಾರಿಗಳು ಇದ್ದರು.