ಮಳೆ ಯಾವ ಪಕ್ಷವನ್ನೂ ನೋಡಿ ಬರೋಲ್ಲ – ಪ್ರವಾಹದ ವಿಚಾರದಲ್ಲಿ ರಾಜಕೀಯ ಬೇಡ: ಬಸವರಾಜ ಬೊಮ್ಮಾಯಿ

shimoga-riots-were-the-result-of-the-governments-appeasement-policy-basavaraj-bommai

ಸುದ್ದಿ360 ಬೆಂಗಳೂರು, ಸೆ.06: ಮಳೆ ಪ್ರವಾಹದ ವಿಚಾರದಲ್ಲಿ ರಾಜಕೀಯ ಬೇಡ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.

ಅವರು ಇಂದು ಮೈಸೂರಿನಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿ, ಮಳೆ, ಪ್ರವಾಹದ ವಿಷಯದಲ್ಲಿ ರಾಜಕೀಯವಾಗುತ್ತಿರುವುದು ದುರ್ದೈವದ ಸಂಗತಿ. ಮಳೆ ತಂದಿರುವ ಸಂಕಷ್ಟದ ಸಂದರ್ಭದಲ್ಲಿ ಎಲ್ಲರೂ ಯುದ್ಧೋಪಾದಿಯಲ್ಲಿ  ಒಗ್ಗಟ್ಟಿನಿಂದ ಕೆಲಸ ಮಾಡಬೇಕು. ಮಳೆ ಯಾವ ಪಕ್ಷವನ್ನೂ ನೋಡಿ ಬರುವುದಿಲ್ಲ. ಇಡೀ ರಾಜ್ಯದಲ್ಲಿ ಎಲ್ಲ ಕೆರೆಗಳೂ ತುಂಬಿದ್ದು, ದಾಖಲೆಯ ಮಳೆಯಾಗಿದೆ. ಚಿಕ್ಕಬಳ್ಳಾಪುರ ಹಾಗೂ ದೊಡ್ಡಬಳ್ಳಾಪುರದಲ್ಲಿ ಹೆಚ್ಚು ಮಳೆಯಾಗಿದೆ. ಬೆಂಗಳೂರಿನಲ್ಲಿ ಕೆರೆಗಳೆಲ್ಲಾ ತುಂಬಿ ಹರಿಯುತ್ತಿದೆ. ಜಲಪ್ರವಾಹದ ವಿರುದ್ದ ನಾವು ಸಮರ ಸಾರಿದ್ದೇವೆ. ಈ ಸವಾಲನ್ನು ಒಗ್ಗಟ್ಟಾಗಿ ಎದುರಿಸಬೇಕಾಗಿದೆ. ಈ ವಿಷಯದಲ್ಲಿ ರಾಜಕೀಯ ಮಾಡುವುದು ಸಣ್ಣ ಪ್ರವೃತ್ತಿಯಾಗಿದೆ ಎಂದು ತಿಳಿಸಿದರು.

ಇಡೀ ರಾಜ್ಯದಲ್ಲಿ ಮಳೆ ನಿರ್ವಹಣೆಗೆ 300 ಕೋಟಿ ರೂ :

ಇಡೀ ರಾಜ್ಯದಲ್ಲಿ ಮಳೆ ನಿರ್ವಹಣೆಗೆ 300 ಕೋಟಿ ರೂ.ಗಳನ್ನು ಒದಗಿಸಲಾಗುವುದು ಎಂದು ಮುಖ್ಯಮಂತ್ರಿಗಳು ತಿಳಿಸಿದರು.

ಇಡೀ ಬೆಂಗಳೂರು ಮುಳುಗಿಲ್ಲ

ಬೆಂಗಳೂರಿನಲ್ಲಿ 90 ವರ್ಷ ಆಗದಿರುವ ಮಳೆಯಾಗಿದೆ. ಇಡೀ ಬೆಂಗಳೂರು ಮುಳುಗಿಲ್ಲ. ಆ ರೀತಿ ಬಿಂಬಿಸುವ ಅವಶ್ಯಕತೆ ಇಲ್ಲ. ಬೆಂಗಳೂರಿನಲ್ಲಿ  8 ವಲಯಗಳಿವೆ. ಅವುಗಳಲ್ಲಿ 2 ವಲಯಗಳಲ್ಲಿ ತೊಂದರೆಯಾಗಿದೆ.  ಅದರಲ್ಲಿ ಬೊಮ್ಮನಹಳ್ಳಿ ವಲಯ ಸಂಪೂರ್ಣ ನಿಯಂತ್ರಣದಲ್ಲಿದೆ. ಮತ್ತೊಂದು ವಲಯದಲ್ಲಿ 69 ಕೆರೆಗಳಿದ್ದು, ಅವುಗಳೆಲ್ಲವೂ ತುಂಬಿ, ನಿರಂತರವಾಗಿ ಮಳೆಯಾಗಿ ನೀರು ಹರಿಯುತ್ತಿದೆ. ಅನಿರೀಕ್ಷಿತ ಮಳೆಯಾಗಿದ್ದು, ಯಾವ ಚರಂಡಿಯನ್ನೂ ಈ ರೀತಿಯ ಮಳೆಗೆ ವಿನ್ಯಾಸಗೊಳಿಸಿರಲಿಲ್ಲ. ಮಹದೇವಪುರದಲ್ಲಿ ಒತ್ತುವರಿಯಾಗಿದೆ ಎಂದರು.

ಬೆಂಗಳೂರಿನಲ್ಲಿ 164 ಕೆರೆಗಳೂ ತುಂಬಿದೆ. ಅನಿರೀಕ್ಷಿತ ಮಳೆಯಾಗಿದ್ದು, ದೊಡ್ಡ ಪ್ರಮಾಣದ ಒತ್ತುವರಿಯಾಗಿದೆ. ರಾಜಕಾಲುವೆಗಳನ್ನು, ಚರಂಡಿಗಳನ್ನು ಮುಚ್ಚಲಾಗಿದೆ. ಆದ್ದರಿಂದ ಮಳೆ ನೀರು ಬಡಾವಣೆಗಳು, ಐಟಿಪಾರ್ಕ್ ಗಳ ಮುಂದೆ ಬಂದು ನಿಂತಿದೆ. ನಮ್ಮ ಸಿಬ್ಬಂದಿ ಹಗಲು ರಾತ್ರಿ ಕೆಲಸ ಮಾಡುತ್ತಿದ್ದಾರೆ. ನೀರು ತೆರವು ಕಾರ್ಯಾಚರಣೆಯನ್ನು ಮಾಡಲಾಗುತ್ತಿದ್ದು, ಸವಾಲಿನ ಕೆಲಸವಾಗಿದೆ. ಮೋಟರ್ ಬಳಸಿ ನೀರು ಖಾಲಿ ಮಾಡಿಸಬೇಕಾದರೂ, ನೀರು ಹೋಗಲು ಜಾಗವಿಲ್ಲ. ವರ್ತೂರು ಕೆರೆ ಮತ್ತು ಬೆಳ್ಳಂದೂರು ಕೆರೆ ಅವುಗಳಲ್ಲಿ ಈಗಾಗಲೇ ನೀರು ತುಂಬಿ ಹರಿಯುತ್ತಿರುವುದರಿಂದ, ಹೆಚ್ಚಿನ ನೀರು ಹೋಗಲು ಸಾಧ್ಯವಾಗುತ್ತಿಲ್ಲ. ಒತ್ತುವರಿಗಳನ್ನು ತೆರವು ಮಾಡಲಾಗುತ್ತಿದ್ದು, ವರ್ತೂರು ಮತ್ತು ಬೆಳಂದೂರು ಕೆರೆಗಳಲ್ಲಿ ನೀರಿನ ಹರಿವನ್ನು ನಿಯಂತ್ರಿಸಲಾಗುತ್ತಿದೆ. ನಾಳೆ ಸಂಜೆಯೊಳಗೆ ಈ ಕಾರ್ಯವನ್ನು ಸಂಪೂರ್ಣ ಮುಗಿಸಲಾಗುತ್ತದೆ. ನಾನೇ ಖುದ್ದು ಪರಿಶೀಲನೆ ಮಾಡುತ್ತಿದ್ದೇನೆ. ಯಾರೇ ಒತ್ತುವರಿ ಮಾಡಿದ್ದರೂ ಕೂಡ, ಅದನ್ನು ನಿರ್ದಾಕ್ಷಿಣ್ಯವಾಗಿ ತೆರವು ಮಾಡುವ ಸೂಚನೆ ನೀಡಲಾಗಿದ್ದು, ತೆರವು ಕಾರ್ಯಾಚರಣೆ ನಿರಂತರವಾಗಿ ನಡೆಯುತ್ತಿದೆ. ಎರಡು ಎಸ್ ಡಿ ಆರ್ ಎಫ್ ತಂಡವನ್ನು ನಿಯೋಜಿಸಲಾಗಿದೆ. ಬಿಬಿಎಂಪಿ. ಜಲಮಂಡಳಿ, ಬಿಡಿಎ ಸಿಬ್ಬಂದಿಗಳು ಹಗಲು ರಾತ್ರಿ ಕೆಲಸ ಮಾಡುತ್ತಿದ್ದಾರೆ. ನಾಳೆ ಸಂಜೆಯೊಳಗೆ ಈ ಕೆಲಸವನ್ನು ಪೂರ್ಣಗೊಳಿಸಲಾಗುವುದು. ಬೆಂಗಳೂರಿನ ಮಳೆ ನಿರ್ವಹಣೆ ಹಾಗೂ ಮೂಲಸೌಲಭ್ಯಗಳ ನಿರ್ವಹಣೆಗೆ 300 ಕೋಟಿ ರೂ.ಗಳನ್ನು ಬಿಡುಗಡೆ ಮಾಡಲಾಗಿದೆ ಎಂದು ತಿಳಿಸಿದರು.

admin

admin

Leave a Reply

Your email address will not be published. Required fields are marked *

error: Content is protected !!