ಬೆಂಗಳೂರು, ಮಾರ್ಚ್ 16: ಗಡಿ ಕನ್ನಡಿಗರಿಗೆ ಆರೋಗ್ಯ ವಿಮೆ ಯೋಜನೆಯ ಮಹಾರಾಷ್ಟ್ರ ಸಚಿವ ಸಂಪುಟದ ನಿರ್ಣಯವನ್ನು ತೀವ್ರವಾಗಿ ಖಂಡಿಸುವುದಾಗಿ ಮುಖ್ಯ ಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.
ಅವರು ಇಂದು ತಮ್ಮ ನಿವಾಸದ ಬಳಿ ಮಾಧ್ಯಮದವರೊಂದಿಗೆ ಮಾತನಾಡಿದರು.
ಕರ್ನಾಟಕ ಗಡಿ ಭಾಗದ ಜನರಿಗೆ ಆರೋಗ್ಯ ಯೋಜನೆ ವಿಮೆ ಯೋಜನೆಯನ್ನು ಮಹಾರಾಷ್ಟ್ರದ ಸಂಪುಟ ನಿರ್ಣಯ ಘೋಷಿಸಿರುವುದು ಅಕ್ಷಮ್ಯ ಅಪರಾಧ. ಕೇಂದ್ರ ಗೃಹ ಸಚಿವ ಅಮಿತ್ ಷಾ ಅವರೊಂದಿಗೆ ಮಾತನಾಡಿದಾಗ ಸುಪ್ರೀಂಕೋರ್ಟ್ ಆದೇಶ ಬರುವವರೆಗೆ ಕಾಯಬೇಕು. ಯಾವುದೇ ಪ್ರಚೋದನೆ ಯಾಗಬಾರದೆಂದು ಒಪ್ಪಲಾಗಿತ್ತು. ಈಗ ಅದರ ಉಲ್ಲಂಘನೆಯಾಗಿದೆ. ಕೂಡಲೇ ಆಜ್ಞೆಯನ್ನು ಹಿಂದೆಗೆದುಕೊಳ್ಳಬೇಕು.
ಈ ವಿಚಾರವನ್ನು ಗೃಹ ಸಚಿವರ ಗಮನಕ್ಕೂ ತರಲಾಗುವುದು. ಈ ರೀತಿಯ ಯೋಜನೆಗಳನ್ನು ನಾವೂ ಕೂಡ ಪ್ರಕಟಿಸಬಹುದು. ಹಲವಾರು ತಾಲ್ಲೂಕುಗಳು, ಗ್ರಾಮ ಪಂಚಾಯಿತಿ ಗಳು ಮಹಾರಾಷ್ಟ್ರದಲ್ಲಿ ನಮಗೆ ನ್ಯಾಯ ಸಿಗುತ್ತಿಲ್ಲ, ಕರ್ನಾಟಕಕ್ಕೆ ಸೇರಬೇಕು ಎಂದು ಈಗಾಗಲೇ ನಿರ್ಣಯ ಮಾಡಿದ್ದಾರೆ. ಇಂಥ ಪರಿಸ್ಥಿತಿಯಲ್ಲಿ ಇದ್ದಾಗ ಮಹಾರಾಷ್ಟ್ರದ ಸರ್ಕಾರ ಬಹಳ ಜವಾಬ್ದಾರಿಯಿಂದ ನಡೆದುಕೊಳ್ಳಬೇಕು ಎಂದರು.