ಮಹಿಳೆ – ಬಣ್ಣ – ಬದುಕು

ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಹಾಗೂ ಹೋಳಿ ಹಬ್ಬದ ನಿಮಿತ್ತ ಈ ಒಂದು ಲೇಖನ ಮಹಿಳೆಯರನ್ನು ಗೌರವಿಸುವ ಹಾಗೂ ಪ್ರಕೃತಿಯನ್ನು ಜೋಪಾನ ಮಾಡುವ ಪ್ರತಿಯೊಬ್ಬರ ಪರವಾಗಿ…

– ಕೂಡ್ಲಿ ಸೋಮಶೇಖರ್

ಬದುಕು ವರ್ಣಮಯವಾಗಿರಬೇಕು ಎಂಬುದು ಎಲ್ಲರ ಆಶಯ, ಹಾರೈಕೆ ಕೂಡ. ವರ್ಣಮಯವಾದ ಈ ಪ್ರಕೃತಿಯಲ್ಲಿ ಮಾನವ ಜೀವಿ ಒಂದು ಸಣ್ಣ ತುಣುಕು ಮಾತ್ರವೇ ಎಂಬುದನ್ನು ಅರಿತರೆ ಬಹುಶಃ ಮಾನವ ತನ್ನ ಉದ್ಧಾರದೊಂದಿಗೆ ಸಕಲ ಜೀವರಾಶಿಯ ಉದ್ಧಾರಕ್ಕೂ ಮುಂದಾಗುತ್ತಾನೆ.

ತಾನು ವಾಸಿಸುವ ಪ್ರಕೃತಿಯ ಮೇಲೆ ಅನಾದಿಕಾಲದಿಂದಲೂ ದೌರ್ಜನ್ಯ ವೆಸಗುತ್ತ ಬಂದ ಮನುಜ ಎಲ್ಲವನ್ನೂ ಸಹಿಸಿಕೊಂಡ ಪ್ರಕೃತಿಯನ್ನು ಸ್ತ್ರೀಗೆ ಹೋಲಿಸಿ ನಿರಾಳನಾದ. ಹೀಗೆ ಹೋಲಿಸಿದರಿಂದಲೋ ಏನೋ ಸ್ತ್ರೀ ತನ್ನ ಸಹಿಷ್ಣುತೆಯನ್ನು ಮತ್ತಷ್ಟು ಹೆಚ್ಚಿಸಿಕೊಂಡಂತಿದೆ. ಪುರುಷ ಸಮಾಜ ಸ್ತ್ರೀಯನ್ನು ಮಮತಾಮಯಿ, ಕರುಣಾಮಯಿ, ಕ್ಷಮಯಾಧರಿತ್ರಿ, ಮನೆಯನ್ನು ಬೆಳಗುವವಳು, ಹೆಣ್ಣೆಂದರೆ ಪ್ರಕೃತಿ ಹೀಗೆ ವರ್ಣಿಸುತ್ತಲೇ ಹೋದರೂ ಹೆಣ್ಣಿನ ಮೇಲಿನ ದೌರ್ಜನ್ಯ ಕಡಿಮೆಗೊಳ್ಳಲಿಲ್ಲ.

ಪುರಾಣ ಪುಣ್ಯಕಥೆಗಳಲ್ಲೂ ನಾರಿಯರ ಮೇಲಿನ ದೌರ್ಜನ್ಯವನ್ನು ನಾವು ಓದುತ್ತೇವೆ. ಇಂದಿಗೂ ದೌರ್ಜನ್ಯಕ್ಕೊಳಗಾದ ಮಹಿಳೆಯ ಕೂಗು ಅರಣ್ಯರೋಧನವಾಗಿಯೇ ಉಳಿದಿದೆ.

ಇಂದು (2023ರ ಮಾರ್ಚ್ 08) ಹೋಳಿ ಹಬ್ಬ ಅಂತೆಯೇ ಅಂತಾರಾಷ್ಟ್ರೀಯ ಮಹಿಳಾ ದಿನವೂ ಕೂಡ. ಹೋಳಿ ದುಷ್ಟರ ಮೇಲಿನ ಶಿಷ್ಟರ ವಿಜಯ, ಕೆಟ್ಟದ್ದರ ವಿರುದ್ಧ ಒಳ್ಳೆಯದರ ವಿಜಯ ಎಂದೇ ಆಚರಿಸಲಾಗುವ ಹಬ್ಬ. ಬದುಕಿಗೆ ಬಣ್ಣಗಳ ಮೆರಗು ನೀಡುವ ಹಬ್ಬ. ಬಣ್ಣವಿರದ ಪ್ರಕೃತಿಯನ್ನು ನಾವು ಊಹಿಸಲೂ ಅಸಾಧ್ಯ. ಹಾಗೇನಾದರೂ ಪ್ರಕೃತಿ ಬಣ್ಣ ಕಳೆದುಕೊಂಡಿತೆಂದರೆ ಅದು ಸಕಲ ಜೀವರಾಶಿಯ ನಾಶವೇ ಅಲ್ಲವೇ?

ಚಿತ್ರ- ಅಂತರ್ಜಾಲ ಕೃಪೆ

ನಾವು ಕಾಣುವ  ಎಲ್ಲ ಬಣ್ಣಗಳೂ ಪ್ರಕೃತಿಯಿಂದಲೇ ಬಂದವುಗಳಾಗಿವೆ ಅಲ್ಲವೇ?  ಸ್ತ್ರೀಯನ್ನು ಪ್ರಕೃತಿಗೆ ಹೋಲಿಸಿದ ನಾವು ಪ್ರಕೃತಿಯಿಂದ ಪಡೆದ ಬಣ್ಣವನ್ನು ವಿಕೃತಗೊಳಿಸದೇ ಕಾಪಾಡುವ. ದೀಪದಿಂದ ದೀಪವ ಹಚ್ಚುವ ಮೂಲಕ ಬೆಳಕನ್ನು ಪಸರಿಸುವಂತೆ. ಬಣ್ಣದಿಂದ ಬಣ್ಣವನ್ನು ಪಸರಿಸಿ ಪ್ರಕೃತಿಯ ಆರ್ಥಾತ್ ಮಹಿಳೆಯರ ಬದುಕಿಗೆ ಮೆರಗು ನೀಡುವ  ಜೊತೆಗೆ ಮನುಕುಲದ  ಉದ್ಧಾರಕ್ಕೆ ದಿಟ್ಟ ಹೆಜ್ಜೆಯನ್ನಿಡುವ ಕಾರ್ಯ ಎಲ್ಲರಿಂದ ಆಗಬೇಕಿದೆ.

ಮನುಕುಲದ ಕುಡಿಯನ್ನು ಕಾಪಿಟ್ಟು ಸಲಹುವವಳು ಹೆಣ್ಣು, ತನ್ನ ಕುಡಿ ಹೆಣ್ಣಾಗಲೀ ಗಂಡಾಗಲಿ ಅದರ ಶ್ರೇಯೋಭಿವೃದ್ಧಿಗಾಗಿ ದುಡಿಯುವುದರಲ್ಲಿ ಹೆಣ್ಣಿನ ಪಾತ್ರ ಮಹತ್ವದ್ದು.

ಹೆ್ಣ್ಣನ್ನು ಗೌರವಿಸುವ, ಅವಳ ನೋವು ನಲಿವುಗಳಿಗೆ ಸ್ಪಂದಿಸುವ ಮನಸ್ಸನ್ನು ನಾವು ನಮ್ಮ ಮನೆಯ ವಾತಾವರಣದಲ್ಲಿ ಮಕ್ಕಳಿಗೆ ಬಾಲ್ಯದಿಂದಲೇ ಕಲಿಸುವಂತಾಗಬೇಕು. ಇದು ಮಹಿಳೆಯರ ಮೇಲಿನ ದೌರ್ಜನ್ಯದ ವಿರುದ್ಧ  ಉತ್ತಮ ಫಲಿತಾಂಶ ತಂದುಕೊಡುತ್ತದೆ ಎನ್ನವುದು ಅನೇಕರ ಅಭಿಪ್ರಾಯ ಕೂಡ ಆಗಿದೆ.

ಹೋಳಿಯ ಹಬ್ಬದ ದಿನವೇ ಮಹಿಳಾ ದಿನಾಚರಣೆ ಬಂದಿದ್ದು, ಮಾತೆಯರನ್ನು ಬರಿಯ ಮಾತಿನಲ್ಲಿ ಬಣ್ಣಿಸದೆ ಅವರಿಗೆ ಉತ್ತಮ ಸ್ಥಾನ ಮಾನ ದೊರಕಿಸುವತ್ತ ಮನುಕುಲ ಶ್ರಮಿಸಬೇಕಿದೆ.

ಮಹಿಳೆಯರ ಮೇಲಿನ ದೌ ರ್ಜನ್ಯವನ್ನು ಖಂಡಿಸುವ ಮತ್ತು ಅವರ ದನಿಗೆ ದನಿಯಾಗುವ ಮನೋಭಿಲಾಷೆಯೊಂದಿಗೆ ಉತ್ತಮ ಸಮಾಜದ ನಿರ್ಮಾಣಕ್ಕೆ ಕಾರಣರಾಗುವ ಎಲ್ಲರಿಗೂ ಹೋಳಿ ಹಬ್ಬದ ಶುಭಾಶಯಗಳು.

admin

admin

Leave a Reply

Your email address will not be published. Required fields are marked *

error: Content is protected !!