ಸುದ್ದಿ360, ವಿಜಯನಗರ (ಹೊಸಪೇಟೆ): ಇಲ್ಲೊಬ್ಬ ಪಾಗಲ್ ಪ್ರೇಮಿ ಮಾಜಿ ಪ್ರೇಯಸಿಯ ರುಂಡ ಕಡಿದು ಪೊಲೀಸ್ ಠಾಣೆಗೆ ಬಂದು ಶರಣಾಗಿದ್ದಾನೆ. ಘಟನೆ ಜಿಲ್ಲೆಯ ಕೂಡ್ಲಿಗಿ ತಾಲೂಕಿನ ಕನ್ನಬೋರನಯ್ಯನ ಹಟ್ಟಿಯಲ್ಲಿ ಗುರುವಾರ ನಡೆದಿದೆ.
ನಿರ್ಮಲಾ( 23 ) ಭೀಕರವಾಗಿ ಹತ್ಯೆಯಾದ ಯುವತಿ ಎಂದು ಗುರುತಿಸಲಾಗಿದೆ. ಬಿಎಸ್ಸಿ ನರ್ಸಿಂಗ್ ವಿಧ್ಯಾಭ್ಯಾಸ ಮಾಡುತ್ತಿದ್ದ ನಿರ್ಮಲಾ ಪರೀಕ್ಷೆಗಾಗಿ ಓದಲು ಊರಿಗೆ ಬಂದಿದ್ದಳು.
ಬೋಜರಾಜ ಎನ್ನುವ ಪಾಗಲ್ ಪ್ರೇಮಿ ಇಂತಹ ದುಷ್ಕೃತ್ಯ ನಡೆಸಿದ್ದಾನೆ. ಈ ಮೊದಲು ನಿರ್ಮಲಾಳನ್ನು ತನಗೆ ಮದುವೆ ಮಾಡಿಕೊಂಡುವಂತೆ ಯುವತಿಯ ಮನೆಯವರನ್ನು ಕೇಳಿದ್ದು, ಯುವತಿಯ ಮನೆಯವರು ಒಪ್ಪದ ಪರಿಣಾಮ ಬೇರೆ ಯುವತಿಯೊಂದಿಗೆ ಬೋಜರಾಜನ ಮದುವೆಯಾಗಿತ್ತು.
ಕಳೆದ 2 ತಿಂಗಳ ಹಿಂದೆ ಬೇರೆ ಯುವತಿಯನ್ನ ಮದುವೆಯಾಗಿದ್ದ ಬೋಜರಾಜ, ಪರೀಕ್ಷೆಗಾಗಿ ಓದಲು ಊರಿಗೆ ಬಂದಿದ್ದ ತನ್ನ ಮಾಜಿ ಪ್ರೇಯಸಿಯ ತೆಲೆ ಕಡಿದು ರುಂಡದೊಂದಿಗೆ ಕೂಡ್ಲಿಗಿ ತಾಲೂಕಿನ ಖಾನಾಹೊಸಹಳ್ಳಿ ಠಾಣೆಗೆ ಶರಣಾಗಿದ್ದಾನೆ. ಸ್ಥಳಕ್ಕೆ ಹಿರಿಯ ಪೊಲೀಸ್ ಅಧಿಕಾರಿಗಳು ದೌಡಾಯಿಸಿ ಪರಿಶೀಲನೆ ನಡೆಸಿದ್ದಾರೆ.