ಸುದ್ದಿ360, ದಾವಣಗೆರೆ, ಜು.07: ಮಾದಕ ವಸ್ತು ನಿಯಂತ್ರಿಸುವ ನಿಟ್ಟಿನಲ್ಲಿ ಮಾದಕ ಸೇವಿಸುವವರ ಮೇಲೆಯೂ ಕಠಿಣ ಕ್ರಮ ಜರುಗಿಸಲು ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಕಾನೂನು ಮತ್ತು ಸುವ್ಯವಸ್ಥೆ ಹೆಚ್ಚುವರಿ ಪೊಲೀಸ್ ಮಹಾ ನಿರ್ದೇಶಕ ಅಲೋಕ್ ಕುಮಾರ್ ಹೇಳಿದರು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕಚೇರಿಯಲ್ಲಿ ದಾವಣಗೆರೆ ಹಾಗೂ ಚಿತ್ರದುರ್ಗ ಪೊಲೀಸ್ ಅಧಿಕಾರಿಗಳ ಸಭೆ ನಡೆಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈ ಮೊದಲು ನೌಕರರು, ವಿದ್ಯಾರ್ಥಿಗಳು ಆಗಿರುತ್ತಾರೆ ಎಂಬ ಕಾರಣದಿಂದ ಮಾದಕ ದ್ರವ್ಯ ಸೇವಿಸುವವರ ಮೇಲೆ ಮೃದು ಧೋರಣೆಯನ್ನು ಹೊಂದಲಾಗಿತ್ತು. ಆದರೆ ಈಗ ಸೂಕ್ತ ಕ್ರಮ ಜರುಗಿಸಲು ಸೂಚನೆ ನೀಡಲಾಗಿದೆ. ಅಲ್ಲದೆ ಈ ಮೊದಲು ಮಾದಕ ವಸ್ತುಗಳನ್ನು ಸರಬರಾಜು ಮಾಡುತ್ತಿದ್ದವರ ಡೇಟಾವನ್ನು ತೆಗೆದು ಅವರು ಈಗ ಏನು ಮಾಡುತ್ತಿದ್ದಾರೆ ಮತ್ತು ಅವರ ಸಂಪರ್ಕದ ಮೇಲೆ ನಿಗಾ ಇಡಲಾಗುವುದು. ಶಾಲಾ ಕಾಲೇಜುಗಳಿಗೆ ಭೇಟಿ ನೀಡಿ ಇದರ ಕುರಿತಾಗಿ ಮಾಹಿತಿ ಸಂಗ್ರಹಿಸಲಾಗುವುದು. ಸಣ್ಣ ತರಗತಿಯ ಆರು ಏಳು ತರಗತಿ ಓದುತ್ತಿರುವ ಮಕ್ಕಳಿಗೆ ಚೆನ್ನಾಗಿ ಮಾತನಾಡಿಸಿದರೆ ಅವರಿಂದ ಮಾಹಿತಿ ಸಿಗುತ್ತದೆ ದೊಡ್ಡ ತರಗತಿಯ ಮಕ್ಕಳನ್ನು ಕೇಳಿದರೆ ಮಾಹಿತಿ ಸಿಗುವುದು ಕಷ್ಟ ಎಂದು ಎಡಿಜಿಪಿ ಅಲೋಕ್ ಕುಮಾರ್ ತಿಳಿಸಿದರು.