ಡಿ.ಜಿ.ರೇವಣಸಿದ್ದಪ್ಪ ಅವರ ಚೊಚ್ಚಲ ಕೃತಿ
ಸುದ್ದಿ360 ದಾವಣಗೆರೆ ಮಾ.17: ಹಿರಿಯ ಪ್ರಯೋಗ ಶಾಲಾ ತಂತ್ರಜ್ಞರಾಗಿ ಸೇವೆ ಸಲ್ಲಿಸಿ ನಿವೃತ್ತಗೊಂಡಿರುವ ಡಿ.ಜಿ.ರೇವಣಸಿದ್ದಪ್ಪ ಅವರ ಚೊಚ್ಚಲ ಕೃತಿ ‘ಸಂಪಾದನಾ ಸೂಕ್ತಿಗಳು’ ಬಿಡುಗಡೆ ಸಮಾರಂಭ ಮಾ. 19 ರಂದು ನಗರದ ಕುವೆಂಪು ಕನ್ನಡ ಭವನದಲ್ಲಿ ನಡೆಯಲಿದೆ ಎಂದು ಸಾಹಿತಿ ಓಂಕಾರಯ್ಯ ತವನಿಧಿ ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ದಾವಣಗೆರೆ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಮತ್ತು ರೇಣುಕಾ ಪ್ರಕಾಶನ ಇವರ ಸಹಯೋಗದಲ್ಲಿ ಕೃತಿ ಲೋಕಾರ್ಪಣಾ ಸಮಾರಂಭ ಹಮ್ಮಿಕೊಳ್ಳಲಾಗಿದೆ. ಡಿ.ಜಿ.ರೇವಣಸಿದ್ದಪ್ಪ ಸಾವಯವ ಕೃಷಿಕರಾಗಿದ್ದು, ಸಾಹಿತ್ಯ ಕ್ಷೇತ್ರದಿಂದ ಬಂದವರಲ್ಲದಿದ್ದರೂ, ತಮ್ಮ ಅನುಭವವನ್ನು ಅಕ್ಷರಗಳಲ್ಲಿ ಹಿಡಿದಿಡುವ ಪ್ರಯತ್ನ ಮಾಡಿದ್ದಾರೆ. ಜತೆಗೆ ವಿವಿಧ ಪತ್ರಿಕೆಗಳಲ್ಲಿ ಪ್ರಕಟಗೊಂಡ ಸೂಕ್ತಿಗಳ ಸಂಗ್ರಹಿಸಿ ಅತ್ಯಮೂಲ್ಯ ಕೃತಿ ನೀಡಿದ್ದಾರೆ ಎಂದು ತಿಳಿಸಿದರು.
ಅಂದು ಬೆಳಗ್ಗೆ 11ಕ್ಕೆ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷ ಬಿ.ವಾಮದೇವಪ್ಪ ಸಮಾರಂಭ ಉದ್ಘಾಟಿಸಲಿದ್ದಾರೆ. ನಿಕಟ ಪೂರ್ವ ಅಧ್ಯಕ್ಷ ಡಾ.ಎಚ್.ಎಸ್. ಮಂಜುನಾಥ್ ಕುರ್ಕಿ ಅಧ್ಯಕ್ಷತೆ ವಹಿಸುವರು. ಸಾಹಿತಿ ಡಾ.ಆನಂದ ಋಗ್ವೇದಿ ಕೃತಿ ಬಿಡುಗಡೆ ಮಾಡಲಿದ್ದಾರೆ. ಕೃತಿ ಕುರಿತು ಎಸ್. ಓಂಕಾರಯ್ಯ ತವನಿಧಿ ಮಾತನಾಡುವರು. ಮುಖ್ಯ ಅತಿಥಿಗಳಾಗಿ ಕೆ.ಟಿ.ಮಹೇಶ್ ಭಾಗವಹಿಸುವರು ಎಂದು ತಿಳಿಸಿದರು.
ಕೃತಿಯ ಲೇಖಕ ಜಿ. ರೇವಣಸಿದ್ದಪ್ಪ ಮಾತನಾಡಿ, ನಾನು ಇಂತಹದೊಂದು ಕೃತಿ ರಚನೆಗೆ ಎಂದೂ ಯೋಚಿಸಿದವನಲ್ಲ. ನನ್ನ ಜೀವನದ ಒಂದು ಹಂತದಲ್ಲಿ ಅನಾರೋಗ್ಯದಿಂದಾಗಿ ನಾನು ಎದುರಿಸಿದ ಕೆಲವು ಸನ್ನಿವೇಶಗಳು ಮತ್ತು ಅದರಿಂದ ಹೊರಬರಲು ನಾನು ಕಂಡುಕೊಂಡ ಮಾರ್ಗಗಳು ನನ್ನನ್ನು ಸಾವಿನಂಚಿನಿಂದ ಹೊರಗೆ ತಂದವು. ನಾನು ಕಂಡುಕೊಂಡ ಆರೋಗ್ಯ, ಧ್ಯಾನ, ಆಧ್ಯಾತ್ಮ, ಸಾಂಸಾರಿಕ ಸಮಸ್ಯೆಗಳ ನಿವಾರಣೆ ಇವುಗಳ ಕುರಿತು ಬರೆದರೆ ಒಂದಷ್ಟು ಜನರಿಗೆ ಅನುಕೂಲವಾಗಬಹುದು ಎಂಬ ಉದ್ದೇಶದಿಂದ ಕೃತಿ ರಚನೆಗೆ ಮುಂದಾದೆ ಎಂದರು. ಕೃತಿಯಲ್ಲಿ ಮೂಡಿಬಂದಿರುವುದು ನನ್ನ ಅನುಭವದ ನುಡಿಗಳೇ ಆಗಿವೆ ಎಂದರು. ಸುದ್ದಿಗೋಷ್ಟಿಯಲ್ಲಿ ನಿವೃತ್ತ ಪಿಎಸ್ ಐ ಜಿ.ಎಸ್.ನಾಗರಾಜ್, ನಿವೃತ್ತ ಮುಖ್ಯ ಶಿಕ್ಷಕ ಪಿ.ಎಸ್. ಜಯಕುಮಾರ್ ಇದ್ದರು.