ಮಾ.9: ಬಿಜೆಪಿಯ ಭ್ರಷ್ಟಾಚಾರ ವಿರೋಧಿಸಿ ಕಾಂಗ್ರೆಸ್‍ನಿಂದ ಸಾಂಕೇತಿಕ ಬಂದ್

ಸಾರ್ವಜನಿಕ ಜೀವನಕ್ಕೆ ತೊಂದರೆಯಾಗದಂತೆ ಬಂದ್‍ಗೆ ಕರೆ

ಸುದ್ದಿ360 ದಾವಣಗೆರೆ, ಮಾ.08: ರಾಜ್ಯಕ್ಕೆ ಕರಪ್ಷನ್ ಕ್ಯಾಪಿಟಲ್ ಕರ್ನಾಟಕ ಕಳಂಕ ತಂದಿರುವ ರಾಜ್ಯ ಸರ್ಕಾರದ ವಿರುದ್ಧ ರಾಜ್ಯ ಕಾಂಗ್ರೆಸ್ ಮಾರ್ಚ್ 9ರಂದು ಬೆಳಗ್ಗೆ 9ರಿಂದ 11ರವರೆಗೆ 2 ಗಂಟೆಗಳ ಕಾಲ ಕರ್ನಾಟಕ ಬಂದ್‍ಗೆ ಕರೆ ನೀಡಿದ್ದು, ಸಾರ್ವಜನಿಕರು ಬೆಂಬಲಿಸುವಂತೆ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಹೆಚ್.ಬಿ. ಮಂಜಪ್ಪ ತಿಳಿಸಿದರು.

ಈ ಕುರಿತು ಸುದ್ದಿಗೊಷ್ಠಿಯಲ್ಲಿ ಮಾತನಾಡಿದ ಅವರು, ಅಂದು ಬೆಳಗ್ಗೆ 8ಗಂಟೆಗೆ ನಗರದ ಜಯದೇವ ವೃತ್ತದಲ್ಲಿ ಪ್ರತಿಭಟನಾ ಮೆರವಣಿಗೆ ನಡೆಸಿ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲಾಗುವುದು.

ಶಾಲಾ-ಕಾಲೇಜು ಮಕ್ಕಳಿಗೆ ಪರೀಕ್ಷೆಗಳು ನಡೆಯುತ್ತಿದ್ದು, ಕೆಪಿಸಿಸಿ ಆದೇಶದ ಮೇರೆಗೆ ಶಿಕ್ಷಣ ಹಾಗೂ ಆರೋಗ್ಯ ಕ್ಷೇತ್ರಕ್ಕೆ ಯಾವುದೇ ತೊಂದರೆಯಾಗದಂತೆ ಬಂದ್ ಮಾಡಲಾಗುವುದು. ಸಾರ್ವಜನಿಕರು, ವರ್ತಕರು ಬೆಂಬಲಿಸುವಂತೆ ಕೋರಿದ್ದಾರೆ.

ಪ್ರತಿಬಾರಿ ಭ್ರಷ್ಟಾಚಾರಕ್ಕೆ ಪುರಾವೆ ಕೇಳುತ್ತಿದ್ದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರಿಗೆ ಕೆಎಸ್‍ಡಿಎಲ್ ಭ್ರಷ್ಟಾಚಾರ ಪ್ರಕರಣ ಬಲವಾದ ಸಾಕ್ಷ್ಯ ಒದಗಿಸಿದೆ. ಮುಖ್ಯಮಂತ್ರಿಗಳು ನೈತಿಕ ಹೊಣೆ ಹೊತ್ತು ರಾಜೀನಾಮೆ ನೀಡಲಿ ಎಂದು ಒತ್ತಾಯಿಸಿದರು.

ಪ್ರತಿ ಕಾಮಗಾರಿಯಲ್ಲೂ ಭ್ರಷ್ಟಾಚಾರ ಅವ್ಯಾಹತವಾಗಿ ನಡೆಯುತ್ತಿದೆ. ಇದರಿಂದ ಗುತ್ತಿಗೆದಾರರು ಬಲಿಯಾಗಿದ್ದಾರೆ. ಇನ್ನೆಷ್ಟು ಜನ ಬಲಿಯಾಗಬೇಕು. ಸಮಾಧಿಯ ಮೇಲೆ ಅಧಿಕಾರ ನಡೆಸುತ್ತಿರುವ ಬೆಜೆಪಿಯನ್ನು ಅಧಿಕಾರದಿಂದ ತೊಲಗಿಸಬೇಕು. ಈ ಹಿನ್ನೆಲೆಯಲ್ಲಿ ಸಾರ್ವಜನಿಕರು ಸಂಪೂರ್ಣ ಸಹಕಾರ ನೀಡುವಂತೆ ಮನವಿ ಮಾಡಿದರು.

ಸುದ್ದಿಗೋಷ್ಠಿಯಲ್ಲಿ ದಿನೇಶ್‍ ಕೆ ಶೆಟ್ಟಿ, ಎ ನಾಗರಾಜ್, ಅನಿತಾಬಾಯಿ ಮಾಲತೇಶ್ , ಸುಷ್ಮಾ ಪಾಟೀಲ್, ಆಯೂಬ್ ಪೈಲ್ವಾನ್, ಪ್ರಕಾಶ್ ಪಾಟೀಲ್, ಮಲ್ಲಿಕಾರ್ಜುನ್, ಕೆ.ಜಿ. ಶಿವಕುಮಾರ್, ಮೊಹಮ್ಮದ್ ಜಿಕ್ರಿಯಾ, ಮೈನುದ್ದೀನ್ ಇತರರು ಇದ್ದರು.

Leave a Comment

error: Content is protected !!