ಎಸ್ ಸಿ-ಎಸ್ ಟಿ ಸಂಘಟನೆಗಳ ಒಕ್ಕೂಟದ ಮುಖಂಡ ಡಾ. ಎನ್. ಮೂರ್ತಿ ಹೇಳಿಕೆ
ಸುದ್ದಿ360 ದಾವಣಗೆರೆ, ಜು.02: ರಾಜ್ಯದಲ್ಲಿ ಎಲ್ಲ ದಲಿತ ಸಂಘಟನೆಗಳೂ ಒಂದಾಗಿವೆ. ವಾಲ್ಮೀಕಿ ಪ್ರಸನ್ನಾನಂದ ಮಹಾಸ್ವಾಮಿಜಿಗಳು ಎಸ್ ಸಿ, ಎಸ್ ಟಿಯ ಎಲ್ಲ ಸ್ವಾಮೀಜಿಗಳನ್ನು ಒಂದುಗೂಡಿಸುವಲ್ಲಿ, ದಲಿತ ಸಂಘಟನೆಗಳನ್ನು ಸಮಷ್ಠಿ ಶಕ್ತಿಯನ್ನಾಗಿಸುವಲ್ಲಿ ಯಶಸ್ವಿಯಾಗಿದ್ದಾರೆ. ಇದು ಸರ್ಕಾರಕ್ಕೆ ಎಚ್ಚರಿಕೆಯ ಗಂಟೆಯಾಗಿದೆ ಎಂದು ಕರ್ನಾಟಕ ಎಸ್ ಸಿ-ಎಸ್ ಟಿ ಸಂಘಟನೆಗಳ ಒಕ್ಕೂಟ ಮತ್ತು ಮೀಸಲಾತಿ ಹೆಚ್ಚಳ ಹೋರಾಟ ಕ್ರಿಯಾಸಮಿತಿಯ ಮುಖಂಡ ಹಾಗೂ ದಲಿತ ಸಂಘರ್ಷ ಸಮಿತಿಯ ರಾಜ್ಯಾಧ್ಯಕ್ಷ ಡಾ. ಎನ್. ಮೂರ್ತಿ ಹೇಳಿದರು.
ನಗರದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ನ್ಯಾ.ಎಚ್ ಎನ್ ನಾಗಮೋಹನ್ ದಾಸ್ ವರದಿಯನ್ನು ಸರ್ಕಾರ ಶೀಘ್ರ ಅನುಷ್ಠಾನಕ್ಕೆ ತರಬೇಕು. ಪರಿಶಿಷ್ಟ ಜಾತಿಗೆ ಶೇ.15 ರಿಂದ ಶೇ.17ಕ್ಕೂ ಹಾಗೂ ಪರಿಶಿಷ್ಟ ಪಂಗಡಕ್ಕೆ ಶೇ.3ರಿಂದ ಶೇ.7 ಮೀಸಲಾತಿ ಪ್ರಮಾಣವನ್ನು ಹೆಚ್ಚಿಸಬೇಕು ಎಂದು ಆಗ್ರಹಿಸಿದರು.
ನ್ಯಾ.ಎಚ್ ಎನ್ ನಾಗಮೋಹನ್ ದಾಸ್ ವರದಿಯನ್ನು ಜಾರಿಗೊಳಿಸುವಲ್ಲಿ ವಿಳಂಬ ನೀತಿ ಅನುಸರಿಸುತ್ತಿರುವ ಸರ್ಕಾರವನ್ನು ಎಚ್ಚರಿಸುವ ಸಲುವಾಗಿ ಶ್ರೀ ವಾಲ್ಮೀಕಿ ಪ್ರಸನ್ನಾನಂದ ಮಹಾಸ್ವಾಮಿಜಿಗಳು ಧರಣಿ ಸತ್ಯಾಗ್ರಹ ಕೂತು ಇಂದಿಗೆ 144 ದಿನಗಳು ಕಳೆದಿವೆ. ಇದುವರೆಗೂ ಕ್ರಮ ಕೈಗೊಳ್ಳದೆ ಉದಾಸೀನ ಮಾಡುತ್ತಿರುವುದನ್ನು ನಾವು ಖಂಡಿಸುತ್ತೇವೆ. ಮತ್ತು ಇದು ಹೀಗೆಯೇ ಮುಂದುವರೆದಲ್ಲಿ ಒಂದುಗೂಡಿರುವ ನಮ್ಮ ಎಲ್ಲ 150 ಜಾತಿಗಳು ಮುಂದಿನ ರಾಜಕೀಯ ನಿರ್ಧಾರಗಳನ್ನು ಮಾಡುವ ಮೂಲಕ ಸರ್ಕಾರವನ್ನು ಧೂಳೀಪಟ ಮಾಡುತ್ತೇವೆ ಎಂದರು.
ನೆರೆ ರಾಜ್ಯಗಳಲ್ಲಿ ಮೀಸಲಾತಿಯನ್ನು ಹೆಚ್ಚಿಸಿದ್ದಾರೆ. ರಕ್ಷಣೆ ಕೊಟ್ಟಿದ್ದಾರೆ. ಒಂದೇ ಸಂವಿಧಾನದಡಿ ಬರುವ ರಾಜ್ಯಗಳಲ್ಲಿ ಈ ತಾರತಮ್ಯ ಏಕೆ ಎಂದು ಪ್ರಶ್ನಿಸಿದರು.
ಮೇಲ್ಜಾತಿಯ ಸಮಾಜಕ್ಕೆ ಯಾವುದೇ ಬೇಡಿಕೆ ಇಲ್ಲದಿದ್ದರೂ ಮೀಸಲಾತಿಯನ್ನು ಹೆಚ್ಚಿಸಿದ್ದೀರಿ. ಆದರೆ ಹಸಿದವರ ಬಗ್ಗೆ ಕಳಕಳಿ ಇಲ್ಲದ ಸರ್ಕಾರಕ್ಕೆ ಪರಿಶಿಷ್ಟ ವರ್ಗಗಳಿಗೆ ಮೀಸಲಾತಿ ಹೆಚ್ಚಿಸಲು ಇಚ್ಚಾಶಕ್ತಿ ಇಲ್ಲ ಎಂದು ಆರೋಪಿಸಿದರು.
ಜು.11ರಂದು ಜಿಲ್ಲಾಧಿಕಾರಿ ಕಚೇರಿಗೆ ಮುತ್ತಿಗೆ
ನ್ಯಾ. ನಾಗಮೋಹನ್ ವರದಿ ಜಾರಿಗೆ ಒತ್ತಾಯಿಸಿ ಹಂತ ಹಂತವಾಗಿ ಒತ್ತಾಯಿಸುತ್ತಾ ಬರಲಾಗಿದೆಯಾದರೂ ಕಣ್ಣು-ಕಿವಿ ಇಲ್ಲದ ಜಡ ಸರ್ಕಾರ ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ. ಕಾರಣ ಜು.11ರಂದು ಜಲ್ಲಾಧಿಕಾರಿ ಕಚೇರಿಗೆ ಮುತ್ತಿಗೆ ಹಾಕಲು ಸಂಘಟನೆಗಳು ನಿರ್ಧರಿಸಿದ್ದು, ಇದಕ್ಕೆ ಸರ್ಕಾರ ಅನುವು ಮಾಡಿಕೊಡದೆ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ದಾವಣಗೆರೆ ಜಿಲ್ಲಾ ಭೋವಿ ಸಮಾಜದ ಅಧ್ಯಕ್ಷ ಬಿ.ಟಿ. ಸಿದ್ದಪ್ಪ ತಿಳಿಸಿದರು.
ಬೊಮ್ಮಾಯಿಯವರ ಸರ್ಕಾರ ಪರಿಶಿಷ್ಟರ ಒಟ್ಟಿಗೆ ಸಭೆ, ಚರ್ಚೆಯನ್ನು ಮಾಡುತ್ತಿಲ್ಲ. ನಮ್ಮನ್ನು ಮೂರನೇ ದರ್ಜೆಯ ಪ್ರಜೆಗಳನ್ನಾಗಿ ಸರ್ಕಾರ ನೋಡುತ್ತಿದೆ. ನಾವು ಹಳ್ಳಿ ಹಳ್ಳಿಗೆ ಹೋಗಿ ಅಭಿಯಾನ ಮಾಡುತ್ತಿದ್ದೇವೆ. ಎಸ್ ಸಿ-ಎಸ್ ಟಿ ಸಮುದಾಯದವರು ಕೂಡ ಎಚ್ಚೆತ್ತುಕೊಳ್ಳಬೇಕು ಎಂದು ಸಮುದಾಯದವರಿಗೆ ಅವರು ಮನವಿ ಮಾಡಿದರು.
ಎಲ್ಲ ಸ್ವಾಮೀಜಿಗಳನ್ನು ಸರ್ಕಾರ ಒಂದೇ ರೀತಿಯಲ್ಲಿ ನೋಡಬೇಕು. ಪರಿಶಿಷ್ಟ ವರ್ಗದ ಸ್ವಾಮೀಜಿಗಳಲ್ಲದೆ ಬೇರೆ ಯಾವ ಸ್ವಾಮೀಜಿಯಾದರೂ ಈ ರೀತಿ ಧರಣಿ ಸತ್ಯಾಗ್ರಹ ಕೂತಿದ್ದರೆ ಸರ್ಕಾರ ಹೀಗೆಯೇ ನಡೆಸಿಕೊಳ್ಳುತ್ತಿತ್ತಾ. ಇದೂ ಕೂಡ ಅಸ್ಪೃಶ್ಯತಾ ಆಚರಣೆಯೇ ಅಲ್ಲವಾ ಎಂದು ಡಾ. ಎನ್. ಮೂರ್ತಿ ಪ್ರಶ್ನಿಸಿದರು.
ಸುದ್ದಿಗೋಷ್ಠಿಯಲ್ಲಿ ಸಮಾಜದ ವಿವಿಧ ಸಮುದಾಯಗಳ ಮುಖಂಡರಾದ ಬಿ.ವೀರಣ್ಣ, ಹನುಮಂತಪ್ಪ, ರಾಜು ಪಾಟೀಲ್, ಮಲ್ಲೇಶ್ ಕುಕ್ಕುವಾಡ, ಹದಡಿ ಹಾಲಪ್ಪ, ಆನಂದಪ್ಪ, ರಾಜಶೇಖರಪ್ಪ, ಜಯಣ್ಣ, ಬಿ.ಟಿ. ಸಿದ್ದಪ್ಪ, ಎಸ್ ನಂಜಾನಾಯ್ಕ, ಶ್ರೀನಿವಾಸಮೂರ್ತಿ, ಪಿ. ಗೋಪಾಲ್, ಎಸ್. ಕೃಷ್ಣಮೂರ್ತಿ, ಆಂಜನೇಯ ಗುರೂಜಿ, ಹೊದಿಗೆರೆ ರಮೇಶ್ ಇತರರು ಇದ್ದರು.