ಮೂರು ಹೆಣ್ಣು ಮಕ್ಕಳಿಗೆ ವಿಷವುಣಿಸಿ ತಾನೂ ವಿಷ ಕುಡಿದು ಪ್ರಾಣ ಬಿಟ್ಟ ತಾಯಿ

ಸುದ್ದಿ360, ಬಾಗಲಕೋಟೆ ಜ.11: ಮೂರು ಹೆಣ್ಣು ಮಕ್ಕಳಿಗೆ ವಿಷವುಣಿಸಿದ ತಾಯಿ ಕೊನೆಗೆ ತಾನೂ ವಿಷ ಕುಡಿದು ಪ್ರಾಣ ಬಿಟ್ಟಿರುವ ಧಾರುಣ ಘಟನೆ ಬಾಗಲಕೋಟೆ ತಾಲ್ಲೂಕಿನ ತಿಮ್ಮಾಪುರ ಗ್ರಾಮದಲ್ಲಿ ನಡೆದಿದೆ.

ರೇಖಾ ಬಗಲಿ(28) ತಾಯಿ, ಮಕ್ಕಳಾದ ಸನ್ನಿಧಿ(೮), ಸಮೃದ್ದಿ(5), ಶ್ರೀನಿಧಿ(3) ಹೀಗೆ ಮೃತಪಟ್ಟವರಾಗಿದ್ದಾರೆ. ರೇಖಾ ಇತ್ತೀಚೆಗೆ ಮಾನಸಿಕ ಸ್ಥಿಮಿತ ಕಳೆದುಕೊಂಡಿದ್ದಳು ಎಂದು ಹೇಳಲಾಗಿದ್ದು, ಮೂರು ಜನ ಹೆಣ್ಣು ಮಕ್ಕಳಿದ್ದ ಕಾರಣ ಮಕ್ಕಳ‌ ವಿದ್ಯಾಭ್ಯಾಸ , ಮದುವೆ ಬಗ್ಗೆ  ಚಿಂತಿಸಿ‌ ಮಾನಸಿಕವಾಗಿ ಬಳಲಿದ್ದಳು ಎಂಬ ಮಾಹಿತಿ ಕೇಳಿಬರುತ್ತಿದೆ.

ಜ್ಯೂಸ್ ಬಾಟಲ್‌ನಲ್ಲಿ ವಿಷ ಹಾಕಿ ಮಕ್ಕಳಿಗೆ ಕುಡಿಸಿದ್ದ ತಾಯಿ ರೇಖಾ, ಕೊನೆಗೆ ತಾನೂ ವಿಷ ಕುಡಿದು ಪ್ರಾಣಬಿಟ್ಟಿದ್ದಾಳೆ. ಮೃತ ರೇಖಾಳನ್ನು ಬೀಳಗಿ ತಾಲ್ಲೂಕಿನ ಸುನಗ ಗ್ರಾಮದ ಅರ್ಜುನಗೆ ಮದುವೆ ಮಾಡಿ ಕೊಡಲಾಗಿತ್ತು. ಕಳೆದ 7 ವರ್ಷಗಳಿಂದ ತವರು ಮನೆಗೆ ಬಂದಿದ್ದ ರೇಖಾ ಹಾಗೂ ಕುಟುಂಬ. ತಿಮ್ಮಾಪುರ ಗ್ರಾಮದಲ್ಲಿ ಬಾಡಿಗೆ ಮನೆಯಲ್ಲಿ ವಾಸವಿದ್ದರು. ರೇಖಾ ಗಂಡ‌ ಅರ್ಜುನ ಕಬ್ಬು ಕಟಾವು ಮಾಡುವ ಕೆಲಸ ಮಾಡುತ್ತಿದ್ದ.

ಸ್ಥಳದಲ್ಲಿ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿತ್ತು. ಬಾಗಲಕೋಟೆ ಗ್ರಾಮೀಣ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. ಮೃತರು ಮಾಜಿ ಸಚಿವ ಎಚ್.ವೈ.ಮೇಟಿ ಅವರ ದೂರದ ಸಂಬಂಧಿಗಳು ಎಂದು ಹೇಳಲಾಗಿದೆ.

Leave a Comment

error: Content is protected !!