ಸುದ್ದಿ360 ಬೆಂಗಳೂರು ಜ.10: ಮೆಟ್ರೊ ಕಾಮಗಾರಿ ದುರಂತಕ್ಕೆ ಕಾರಣರಾದ ಹಿರಿಯ ಅಧಿಕಾರಿಗಳು, ಮುಖ್ಯಸ್ಥರ ಮೇಲೆ ಕ್ರಮಕೈಗೊಳ್ಳಲು ಸೂಚಿಸಿದ್ದು, ಗುತ್ತಿಗೆದಾರ ಮೇಲೆ ಪ್ರಕರಣ ದಾಖಲಿಸುವುದರ ಜೊತೆಗೆ ಉನ್ನತ ಮಟ್ಟದ ತನಿಖೆ ಮಾಡುವಂತೆಯೂ ಸೂಚಿಸಲಾಗಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ.
ಮಂಗಳವಾರ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಪ್ರಶ್ನೆ ಇರುವುದು ಇಷ್ಟು ಅಸುರಕ್ಷಿತವಾಗಿ ಹೇಗೆ ಕೆಲಸ ಮಾಡಿದರು ಎನ್ನುವುದನ್ನು ಪತ್ತೆ ಹಚ್ಚಿ, ಮುಂದೆ ಹೀಗಾಗದಂತೆ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಬೇಕು. ತನಿಖೆ ಹಾಗೂ ತಾಂತ್ರಿಕ ಲೋಪದ ಏನು ಎಂಬುದರ ಬಗ್ಗೆ ಕ್ರಮ ಕೈಗೊಳ್ಳಲು ಸೂಚಿಸಲಾಗಿದೆ ಎಂದರು.
ಮೆಟ್ರೋ ದುರಂತದಲ್ಲಿ ಮೃತಪಟ್ಟವರ ಕುಟುಂಬಕ್ಕೆ ನಮ್ಮ ಮೆಟ್ರೋ ವತಿಯಿಂದ 20 ಲಕ್ಷ ಘೋಷಣೆ ಮಾಡಿದ್ದು, ನಾನೂ ಕೂಡ 10 ಲಕ್ಷ ಘೋಷಣೆ ಮಾಡಿದ್ದೇನೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.
ಘಟನೆ: ಬೆಂಗಳೂರಿನ ನಾಗವಾರ-ಕೊಟ್ಟಿಗೆರೆ ಮಾರ್ಗದಲ್ಲಿ ಮೆಟ್ರೋ ಕಾಮಗಾರಿಯ ವೇಳೆ ಪಿಲ್ಲರ್ ಕುಸಿತದಿಂದಾಗಿ ಬೈಕ್‍ನಲ್ಲಿ ಹೊರಟಿದ್ದವರ ಮೇಲೆ ಪಿಲ್ಲರ್ ಬಿದ್ದು ಅವಘಡ ಸಂಭವಿಸಿತ್ತು.
ಮೃತ ತೇಜಸ್ವಿನಿ ಅವರು ಪತಿ ಹಾಗೂ ತನ್ನಿಬ್ಬರು ಅವಳಿ ಮಕ್ಕಳೊಂದಿಗೆ ಬೈಕನಲ್ಲಿ ಹೊರಟಿದ್ದರು. ಈ ಅವಘಡದಿಂದಾಗಿ ಮಹಿಳೆ ಹಾಗೂ ಮಗು ವಿಹಾನ್ ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಯಿತಾದರೂ. ಬದುಕುಳಿಯಲಿಲ್ಲ.