ಸುದ್ದಿ360 ದಾವಣಗೆರೆ, ಆ.26: ವಿದ್ಯಾರ್ಥಿಗಳು ಪರೀಕ್ಷೆಯಲ್ಲಿ ಮೆರಿಟ್ ಹೊಂದುವುದರ ಜೊತೆಗೆ ವಿಶೇಷ ಕೌಶಲ್ಯಗಳನ್ನು ಹೊಂದುವುದು ಇಂದು ಅತ್ಯಗತ್ಯವಾಗಿದ್ದು ಆ ನಿಟ್ಟಿನಲ್ಲಿ ಮುಂದುವರೆಯುವಂತೆ ದಾವಣಗೆರೆ ವಿಶ್ವವಿದ್ಯಾಲಯದ ಪರೀಕ್ಷಾಂಗ ಕುಲಸಚಿವ ಡಾ.ಕೆ. ಶಿವಶಂಕರ್ ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು.
ನಗರದ ಎಆರ್‌ಜಿ ಕಲಾ ಹಾಗೂ ವಾಣಿಜ್ಯ ಕಾಲೇಜಿನಲ್ಲಿ ಇಂದು ನಡೆದ ಎಆರ್‌ಜಿ ವೈಭವ 2022 ಕಾರ್ಯಕ್ರಮದಲ್ಲಿ ಮಾತನಾಡಿ, ಹಿಂದೆ ಉದ್ಯೋಗ ನೀಡುವಾಗ ಕೇವಲ ಮೆರಿಟ್ ನೋಡುತ್ತಿದ್ದರು. ಆದರೆ ಇಂದು, ಉತ್ತಮ ಅಂಕಗಳ ಜತೆ ವೃತ್ತಿಗೆ ಅಗತ್ಯವಿರುವ ಕೌಶಲ್ಯ ಹೊಂದಿದವರನ್ನು ಉದ್ಯೋಗಕ್ಕೆ ಪರಿಗಣಿಸಲಾಗುತ್ತಿದೆ ಎಂದರು.
ಸರಕಾರಿ ವ್ಯವಸ್ಥೆಯಲ್ಲಿ ಅಧಿಕಾರಿಗಳ ಕೇಡರ್‌ಗಳು ಇರುತ್ತವೆ. ಜಿಲ್ಲೆಗೆ ಜಿಲ್ಲಾಧಿಕಾರಿಯೇ ಉನ್ನತ ಅಧಿಕಾರಿಯಾಗಿರುತ್ತಾರೆ. ಅವರ ನಂತರ ಎಡಿಸಿ ಮತ್ತಿತರರು ಬರುತ್ತಾರೆ. ಹುದ್ದೆ ಆಕಾಂಕ್ಷಿಗಳು ಹೊಂದಿರುವ ವಿದ್ಯಾರ್ಹತೆ, ಅವರು ಪಡೆದಿರುವ ವಿಶೇಷ ಜ್ಞಾನ ಹಾಗೂ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಗಳಿಸಿದ ರ್ಯಾಂಕ್ ಆಧಾರದಲ್ಲಿ ಅವರು ಯಾವ ಹಂತದ ಹುದ್ದೆಗೆ ಅರ್ಹರು ಎಂಬುದನ್ನು ನಿರ್ಧರಿಸಲಾಗುತ್ತದೆ. ಆದ್ದರಿಂದ ವಿದ್ಯಾರ್ಥಿಗಳು ನಿರಂತರ ಕಲಿಕೆಗೆ ಒತ್ತು ನೀಡಬೇಕು ಎಂದು ಸಲಹೆ ನೀಡಿದರು.
ಯುವಜನತೆ ಪುನೀತ್ ರಾಜ್‌ಕುಮಾರ್ ಅವರಂತೆ ಸೇವಾ ಕಾರ್ಯಗಳಲ್ಲಿ ತೊಡಗಿಕೊಳ್ಳಬೇಕು. ಪುನೀತ್ ರಾಜ್‌ಕುಮಾರ್ ಜೀವಂತವಾಗಿದ್ದಾಗ ಅವರ ಮೇಲೆ ಇಷ್ಟೊಂದು ಅಭಿಮಾನ ಇತ್ತೋ ಇಲ್ಲವೋ ಗೊತ್ತಿಲ್ಲ. ಆದರೆ ಅವರ ಆಗಲಿಕೆ ಬಳಿಕ ಅವರು ಮಾಡಿರುವ ಸಮಾಜಮುಖಿ, ಸೇವಾ ಕಾರ್ಯಗಳು ಬೆಳಕಿಗೆ ಬಂದವು. ಇದರಿಂದ ನಮ್ಮ ಯುವಜನತೆ ಪುನೀತ್ ರನ್ನು ಮಾದರಿ ವ್ಯಕ್ತಿಯಾಗಿ ಪರಿಗಣಿಸಿದ್ದಾರೆ. ಇದೊಂದು ಉತ್ತಮ ಬೆಳವಣಿಗೆ ಎಂದು ಡಾ. ಶಿವಶಂಕರ್ ಹೇಳಿದರು.
ಕಾಲೇಜು ಪ್ರಾಂಶುಪಾಲ ಪ್ರೊ.ಕೆ.ಎಸ್. ಬಸವರಾಜಪ್ಪ ಮಾತನಾಡಿ, ವಿದ್ಯಾರ್ಥಿಗಳು ಆಧುನಿಕ ಉಡುಗೆ ತೊಡೆಗೆ, ಆಧುನಿಕ ಜೀವನಶೈಲಿ ಮೊರೆಹೋಗಿದ್ದು, ಪಾರಂಪರಿಕ ಉಡುಪುಗಳು ಕಣ್ಮರೆ ಆಗುತ್ತಿವೆ. ಇದಕ್ಕೆ ನಾವು ಅವಕಾಶ ನೀಡಬಾರದು. ಈ ಹಿನ್ನೆಲೆಯಲ್ಲಿ ಕಾಲೇಜಿನಲ್ಲಿ ಮೂರು ದಿನಗಳ ವೈಭವ ಹಮ್ಮಿಕೊಳ್ಳಲಾಗಿದೆ. ಮೊದಲ ದಿನ ಆಹಾರ ಉತ್ಸವ, ಎರಡನೇ ದಿನ ರಕ್ತದಾನ ಶಿಬಿರ ನಡೆದಿದ್ದು, ವಿದ್ಯಾರ್ಥಿಗಳು ಸಕ್ರಿಯವಾಗಿ ಪಾಲ್ಗೊಂಡಿದ್ದರು ಎಂದು ತಿಳಿಸಿದರು.
ಅಪರ ಜಿಲ್ಲಾಧಿಕಾರಿ ಪಿ.ಎನ್. ಲೋಕೇಶ್ ಕಾರ್ಯಕ್ರಮ ಉದ್ಘಾಟಿಸಿದರು. ಇತಿಹಾಸ ವಿಭಾಗದ ಮುಖ್ಯಸ್ಥ ಡಾ.ಜೆ.ಕೆ. ಮಲ್ಲಿಕಾರ್ಜುನಪ್ಪ, ವಾಣಿಜ್ಯ ವಿಭಾಗದ ಮುಖ್ಯಸ್ಥೆ ಪ್ರೊ.ಜೆ. ಅನಿತಾಕುಮಾರಿ, ರಾಷ್ಟ್ರೀಯ ಸೇವಾ ಯೋಜನೆ ಕಾರ್ಯಕ್ರಮಾಕಾರಿ ಡಾ.ಎಚ್.ಆರ್. ತಿಪ್ಪೇಸ್ವಾಮಿ, ಪ್ರೊ.ಪಿ. ರಶ್ಮಿ, ಡಾ. ಚಮನ್‌ಸಾಬ್ ಇತರರು ಇದ್ದರು.