ಸುದ್ದಿ360 ದಾವಣಗೆರೆ.ಜು.03: ಯಾವುದೇ ಕೆಲಸದಲ್ಲಿ ಯಶಸ್ವಿಗಳಾಗಬೇಕಾದರೆ ಏಕಾಗ್ರತೆ ಬಹಳ ಮುಖ್ಯ. ಯೋಗ ಏಕಾಗ್ರೆಯನ್ನು ತಂದು ಕೊಡುತ್ತೆ, ಏಕಾಗ್ರತೆ ಜೀವನದಲ್ಲಿ ಯಶಸ್ಸನ್ನು ತಂದುಕೊಡುತ್ತದೆ. ಅಲ್ಲದೆ ಯೋಗದಿಂದ ಒಳ್ಳೆಯ ಭಾವನೆ ಮೂಡುತ್ತದೆ ಆ ಮೂಲಕ ಸಮಾಜ ಸ್ವಾಸ್ತ್ಯದಿಂದ ಕೂಡಿರುತ್ತದೆ ಎಂದು ವಿರಕ್ತಮಠದ ಶ್ರೀ ಬಸವಪ್ರಭು ಸ್ವಾಮೀಜಿ ಅಭಿಪ್ರಾಯಪಟ್ಟರು.
ಅವರು ಭಾನುವಾರ ಸಪ್ತರಿಷಿ ಯೋಗಾಸನ ಸ್ಪೋರ್ಟ್ಸ್ ಅಕಾಡೆಮಿ, ದಾವಣಗೆರೆ-ಹರಿಹರ ಇವರ ವತಿಯಿಂದ ನಗರದಲ್ಲಿ ಮೊದಲ ಬಾರಿಗೆ ನಡೆದ ನೋಬೆಲ್ ವರ್ಲ್ಡ್ ರೆಕಾರ್ಡ್ ಯೋಗಾಸನ ಕಾರ್ಯಕ್ರಮವನ್ನು ಗಿಡಕ್ಕೆ ನೀರೆರೆಯುವ ಮೂಲಕ ಉದ್ಘಾಟಿಸಿ ಮಾತನಾಡಿದರು.
ಇಂದು ಬಹಳಷ್ಟು ಜನರಲ್ಲಿ ಒಳ್ಳೆಯ ಭಾವನೆಗಳೇ ಇಲ್ಲದೆ, ಕೊಲೆ, ಮೋಸ, ಜಗಳ, ಕಳ್ಳತನದಂತಹ ಕೃತ್ಯಗಳು ನಡೆಯುತ್ತವೆ ಅಲ್ಲದೇ ರಾಷ್ಟ್ರ ರಾಷ್ಟ್ರಗಳ ಮದ್ಯೆ ಯುದ್ಧಕ್ಕೂ ನಾಂದಿಯಾಗುತ್ತದೆ. ಯೋಗದಿಂದ ಮನುಷ್ಯರಲ್ಲಿ ಒಳ್ಳೆಯ ಭಾವನೆ ಮೂಡುವುದರಿಂದ ಮನುಷ್ಯರಲ್ಲಿ ಬಾಂಧವ್ಯ ವೃದ್ಧಿಸುತ್ತದೆ.
ಯೋಗದಿಂದ ಆರೋಗ್ಯ ಸುಧಾರಣೆಯಾಗುತ್ತದೆ. ಇಂದಿನ ಅವಸರದ ಜೀವನದಲ್ಲಿ ಕೆಲವರು ಆತಂಕ, ಒತ್ತಡ, ಗಾಬರಿಗೆ ಒಳಗಾಗುತ್ತಾರೆ. ಇದರಿಂದ ಒತ್ತಡ ಹುಟ್ಟುತ್ತದೆ. ಒತ್ತಡಕ್ಕೆ ಪರಿಹಾರ ಯೋಗ ಆಗಿದೆ. ಒಂದು ಕಾಲದಲ್ಲಿ ಪಾರಮಾರ್ಥಿಕ, ಆಧ್ಯಾತ್ಮಿಕ ಪ್ರಪಂಚದಲ್ಲಿ ಯೋಗಿಗಳು, ಸ್ವಾಮಿಗಳು ಮಾತ್ರ ಯೋಗವನ್ನು ಮಾಡುತ್ತಿದ್ದರು. ಇಂದು ಉತ್ತಮ ಆರೋಗ್ಯಕ್ಕಾಗಿ ಪ್ರತಿಯೊಬ್ಬರೂ ಯೋಗ ಮಾಡಬೇಕು ಯೋಗದಿಂದ ಬದುಕಿನಲ್ಲಿ ಸುಯೋಗ ಲಭಿಸುತ್ತದೆ.
ನಿರಂತರ ಯೋಗಾಭ್ಯಾಸದಲ್ಲಿ ತೊಡಗಿಕೊಳ್ಳುವುದರಿಂದ ರೋಗ ರುಜಿನಗಳಿಂದ ದೂರವಾಗುವುದಲ್ಲದೆ, ಆಸ್ಪತ್ರೆಗೆ ಹಣ ತೆರುವ ಅವಶ್ಯಕತೆಯೂ ಇರುವುದಿಲ್ಲ. ಮನೆಯೂ ನೆಮ್ಮದಿಯ ಗೂಡಾಗುತ್ತದೆ ಎಂದು ಹೇಳಿದರು. ಯೋಗದಿಂದ ಮುಖದಲ್ಲಿ ಕಾಂತಿ ತೇಜಸ್ಸು ಮೂಡಿಸುತ್ತದೆ ಯೋಗದಿಂದ ಯೋಗ್ಯತೆ, ಯೋಗ್ಯತೆ ಇದ್ದಲ್ಲಿ ಉತ್ತಮ ಸ್ಥಾನಮಾನಗಳು ಅರಸಿಕೊಂಡು ಬರುತ್ತವೆ ಎಂದು ಹೇಳಿದರು.
ಜಿಲ್ಲಾ ಆಯುಷ್ ಅಧಿಕಾರಿ ಡಾ.ಶಂಕರಗೌಡ ಮಾತನಾಡಿ, ದಾವಣಗೆರೆಯಲ್ಲಿ ಉತ್ತಮ ಯೋಗದ ವಾತಾವರಣವಿದ್ದು, ರಾಜ್ಯದಲ್ಲಿ ಮೈಸೂರು ಬಿಟ್ಟರೆ ದಾವಣಗೆರೆ ಎರಡನೇ ಸ್ಥಾನದಲ್ಲಿದೆ. ಯೋಗದಿಂದ ಉತ್ತಮ ಆರೋಗ್ಯ ವೃದ್ಧಿಯಾಗುವುದಲ್ಲದೆ, ರೋಗನಿರೋಧಕ ಶಕ್ತಿಯೂ ಹೆಚ್ಚಾಗುತ್ತದೆ. ಯೋಗದಿಂದ ಮನಸ್ಸಿನ ಹತೋಟಿಯೂ ಸಾಧ್ಯವಿದೆ ಎಂದು ತಿಳಿಸಿದರು.
ಇಂದಿನ ಆಧುನಿಕ ಜೀವನಶೈಲಿಯಲ್ಲಿ ಮಕ್ಕಳು ದೊಡ್ಡವರಾದಿಯಾಗಿ ಜಂಕ್ ಫುಡ್ ಗೆ ಮಾರು ಹೋಗಿದ್ದಾರೆ. ಉತ್ತಮ ಆಹಾರ ಪದ್ಧತಿಯನ್ನು ರೂಢಿಸಿಕೊಳ್ಳುವುದರ ಜೊತೆಗೆ ಯೋಗಾಭ್ಯಾಸವನ್ನು ದೈನಂದಿನ ಚಟುವಟಿಕೆಯ ಭಾಗವಾಗಿಸಿಕೊಂಡರೆ ಆರೋಗ್ಯವಂತ ಜೀವನ ನಡೆಸಲು ಸಾಧ್ಯ. ರೋಗ ರುಜಿನ ಗಳಿಂದ ದೂರ ಉಳಿದು, ರೋಗಮುಕ್ತ ಸಮಾಜ ನಿರ್ಮಾಣ ಸಾಧ್ಯವಾಗುತ್ತದೆ ಎಂದರು. ಈ ನಿಟ್ಟಿನಲ್ಲಿ ಸಪ್ತರಿಷಿ ಯೋಗಾಸನ ಸ್ಪೋರ್ಟ್ಸ್ ಅಕಾಡೆಮಿ ಯಿಂದ ಹಮ್ಮಿಕೊಂಡಿರುವ ನೋಬಲ್ ವರ್ಲ್ಡ್ ರೆಕಾರ್ಡ್ ಯೋಗಾಸನ ಕರ್ಯಕ್ರಮ ಪ್ರಶಂಸನಾರ್ಹ ಎಂದರು.
ಜಿಲ್ಲಾ ವರದಿಗಾರರ ಕೂಟದ ಅಧ್ಯಕ್ಷ ಕೆ. ಏಕಾಂತಪ್ಪ ಮಾತನಾಡಿ, ಯೋಗಕ್ಕೆ ಯಾವುದೇ ವಯಸಿನ ನಿರ್ಭಂಧವಿಲ್ಲ. ಚಿಕ್ಕ ಮಕ್ಕಳಿಂದ ಹಿಡಿದು ವಯೋವೃದ್ಧರೂ ಸಹ ಯೋಗದಲ್ಲಿ ತೊಡಗಿಸಿಕೊಂಡು ತಾವು ಉತ್ತಮ ಆರೋಗ್ಯ ಪಡೆಯುವುದರ ಜೊತೆಗೆ ಆರೋಗ್ಯವಂತ ಸಮಾಜ ನಿರ್ಮಿಸಬಹುದಾಗಿದೆ ಎಂದರು. ಅಲ್ಲದೆ ಜಲಯೋಗದಿಂದ ನೈಸರ್ಗಿಕ ವಿಕೋಪಗಳು ಸಂಭವಿಸಿದಾಗ ಸಂಕಷ್ಟಕ್ಕೆ ಸಿಲುಕಿದವರ ರಕ್ಷಣೆಗೆ ಧಾವಿಸಿ ಸಂಭವಿಸಬಹುದಾದ ಅನಾಹುತವನ್ನು ತಪ್ಪಿಸಬಹುದಾಗಿದೆ ಎಂದರು.
ಕಾರ್ಯಕ್ರಮದಲ್ಲಿ ಪಂಜಾಬ್ ನಿಂದ ಆಗಮಿಸಿದ್ದ ಅಂತಾರಾಷ್ಟ್ರೀಯ ಯೋಗಪಟು ನೇಹಾ, ಕರ್ನಾಟಕ ರಾಜ್ಯ ನೋಬಲ್ ವರ್ಲ್ಡ್ ರೆಕಾರ್ಡ್ ಗಂಗಾವತಿಯ ಬಾಬುಸಾಬ್, ಅಂತಾರಾಷ್ಟ್ರೀಯ ಯೋಗಪಟು, ಯೋಗಾಚಾರ್ಯ ಡಾ.ಎನ್. ಪರಶುರಾಮ್, ಅಕಾಡೆಮಿಯ ಅಧ್ಯಕ್ಷ ಡಾ.ಕೆ.ಜೈಮುನಿ, ಯೋಗಾಚಾರ್ಯ ವೈದ್ಯ ತೀರ್ಥರಾಜ್ ಹೋಲೂರ್ ಇತರರು ಇದ್ದರು. ಅಕಾಡೆಮಿಯ ಪ್ರಧಾನ ಕಾರ್ಯದರ್ಶಿ ಡಾ. ಡಿ. ಪ್ರಾನ್ಸಿಸ್ ಕ್ಸೇವಿಯರ್ ಕಾರ್ಯಕ್ರಮ ನಿರೂಪಿಸಿದರು.