ರಾಜಕೀಯ ಕಾರಣಕ್ಕೆ ಕೊಲೆಗಳಾಗುತ್ತಿರುವುದು ನಮ್ಮ ದೌರ್ಬಾಗ್ಯ: ಸಚಿವ ಜೆ.ಸಿ. ಮಾಧುಸ್ವಾಮಿ

ಚುನಾವಣಾ ವರ್ಷವಾದ್ದರಿಂದ ಪ್ರಚೋದನೆಗಳು ಹೆಚ್ಚಾಗಿವೆ. ಕಾನೂನು ಸುವ್ಯವಸ್ಥೆ ಕಾಪಾಡುವಲ್ಲಿ ಸರ್ಕಾರ ದಿಟ್ಟ ಕ್ರಮ ಕೈಗೊಳ್ಳಲಿದೆ ಎಂದು ಕಾನೂನು ಸಂಸದೀಯ ಹಾಗೂ ಸಣ್ಣ ನೀರಾವರಿ ಸಚಿವ ಜೆ.ಸಿ. ಮಾಧುಸ್ವಾಮಿ ಹೇಳಿದರು.

ಸುದ್ದಿ360, ದಾವಣಗೆರೆ ಜು.30: ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಕುಸಿದಿಲ್ಲ. ಕೆಲವೇ ಘಟನೆ ಹೊರತುಪಡಿಸಿದರೆ, ಕಾಂಗ್ರೆಸ್ ಕಾಲದಲ್ಲಿ ನಡೆದಷ್ಟು ಪ್ರತಿಭಟನೆ, ಹೋರಾಟ, ಬಿಜೆಪಿ ಸರ್ಕಾರದ ಅವಧಿಯಲ್ಲಿ ಆಗಿಲ್ಲ ಎಂದು ಕಾನೂನು ಸಂಸದೀಯ ಹಾಗೂ ಸಣ್ಣ ನೀರಾವರಿ ಸಚಿವ ಜೆ.ಸಿ. ಮಾಧುಸ್ವಾಮಿ ಹೇಳಿದರು.

ನಗರದಲ್ಲಿ ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿ, ಕೊಲೆಗಳಾಗಿದ್ದಕ್ಕೆ ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಸರಿಯಿಲ್ಲ ಎಂದು ಹೇಳಲು ಸಾಧ್ಯವಿಲ್ಲ. ಮಾಜಿ ಸಿಎಂ ಸಿದ್ದರಾಮಯ್ಯನವರ ಕಾಲದಲ್ಲಿಯೂ 38 ಕೊಲೆಗಳು ನಡೆದಿದ್ದವು. ಕೆಲವೇ ಘಟನೆ ಹೊರತುಪಡಿಸಿದರೆ, ಕಾಂಗ್ರೆಸ್ ಕಾಲದಲ್ಲಿ ನಡೆದಷ್ಟು ಪ್ರತಿಭಟನೆ, ಹೋರಾಟ, ಬಿಜೆಪಿ ಸರ್ಕಾರದ ಅವಧಿಯಲ್ಲಿ ಆಗಿಲ್ಲ. ಪ್ರವೀಣ್ ಹತ್ಯೆ ವಿಚಾರದಲ್ಲಿ ಅನೇಕ ಮಾತುಗಳು ಕೇಳಿ ಬರುತ್ತಿವೆ.  ಆತನ ಅಂಗಡಿಯಲ್ಲೇ ಕೆಲಸ ಮಾಡುತ್ತಿದ್ದವರೇ ಮಾಡಿರುವುದು ಎಂಬುದಾಗಿಯೂ ಹೇಳ್ತಾರೆ. ಪ್ರಕರಣವನ್ನು ಈಗಾಗಲೇ ಎನ್‌ಐಎ ತನಿಖೆಗೆ ವಹಿಸಲಾಗಿದೆ. ಆ ಭಾಗದಲ್ಲಿ ಇಂಟಲ್‌ಜೆನ್ಸಿ, ಸೆಕ್ಯುರಿಟಿ ಜಾಸ್ತಿ ಮಾಡುತ್ತೇವೆ ಎಂದರು.

ರಾಜಕೀಯ ಕಾರಣಕ್ಕೆ ಕೊಲೆಗಳು ನಡೆಯುತ್ತಿರುವುದು  ನಮ್ಮ ದೌರ್ಭಾಗ್ಯ. ಏನು ಹೇಳಬೇಕೊ ಗೊತ್ತಾಗುತ್ತಿಲ್ಲ. ಯಾವ ಸರ್ಕಾರನೂ ಈ ಘಟನೆಗಳನ್ನು ಸಹಿಸುವುದಿಲ್ಲ. ಬಹಳ ಕೆಟ್ಟದಾಗಿ ಕೊಲೆಗಳು ನಡೆದಿವೆ. ಯಾರು ಸಾವನ್ನಪ್ಪಿದರೂ ಯಾರಿಗೂ ಪ್ರಯೋಜನವಿಲ್ಲ ಎಂದು ನಾವು ಮನವಿ ಮಾಡುತ್ತಿದ್ದೇವೆ ಎಂದು ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿದರು.

ಜನರ ಮಧ್ಯೆ ಒಂದು ತಪ್ಪು ಸಂದೇಶ ಇದೆ. ಇದನ್ನು ಕೂತು ಸರಿ ಮಾಡಬೇಕು. ಮನಸ್ಸುಗಳನ್ನು ತಿಳಿ ಮಾಡದಿದ್ದರೆ ಸಾಕಷ್ಟು ತಾಪತ್ರಯಗಳಾಗುತ್ತವೆ. ಈ ವರ್ಷ ಚುನಾವಣೆ ಇರುವುದರಿಂದ ಪ್ರಚೋದನೆಗಳು ಹೆಚ್ಚಾಗಿವೆ. ಹೀಗಾಗಿ ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡುವಲ್ಲಿ ಸರ್ಕಾರ ದಿಟ್ಟ ಕ್ರಮ ತೆಗೆದುಕೊಳ್ಳುತ್ತದೆ ಎಂದು ತಿಳಿಸಿದರು.

ಬಿಜೆಪಿ ಯುವ ಮೋರ್ಚಾದಿಂದ ಸಾಲು ಸಾಲು ರಾಜೀನಾಮೆ ವಿಚಾರ ಕುರಿತು ಪ್ರತಿಕ್ರಿಯಿಸಿದ ಸಚಿವರು, ನಮಗೂ ಬೇಸರವಿದೆ. ಆದರೆ ರಾಜ್ಯ ಸರ್ಕಾರದವರಾದ ನಾವು, ಎಲ್ಲರಿಗೂ ರಕ್ಷಣೆ ಕೊಡಬೇಕು. ಎಲ್ಲರೂ ರಾಜ್ಯದ ಪ್ರಜೆಗಳೆ. ನಮಗೂ ಭಾವನೆಗಳಿವೆ. ಆದರೆ ತೀಕ್ಷಣವಾಗಿ ಪ್ರತಿಕ್ರಿಯಿಸಲು ಸಾಧ್ಯವಿಲ್ಲ ಎಂದರು.

ಫಾಜಿಲ್ ಹತ್ಯೆಯಾದಾಗ ಸಿಎಂ ಹೋಗಲಿಲ್ಲ ಎಂದು ವಿಪಕ್ಷದವರ ಆರೋಪಕ್ಕೆ ಪ್ರತಿಕ್ರಿಯಿಸಿದ ಮಾಧುಸ್ವಾಮಿ, ಮುಖ್ಯಮಂತ್ರಿಗಳು ಮಂಗಳೂರು ಏರ್‌ಪೋರ್ಟ್ನಲ್ಲಿದ್ದಾಗ ಫಾಜಿಲ್ ಹತ್ಯೆ ಘಟನೆಯ ಮಾಹಿತಿ ಬಂದಿದೆ. ಆಗ ಮಂಗಳೂರಿನಿಂದ 25 ಕಿ.ಮೀ. ದೂರದಲ್ಲಿದ್ದರು. ಆ ಕಾರಣದಿಂದ ಸಿಎಂ ಹೋಗಲಿಲ್ಲ ಸ್ಥಳಕ್ಕೆ ಭೇಟಿ ಮಾಡಲು ಆಗಲಿಲ್ಲ  ಎಂದರು.

ಮುಖ್ಯಮಂತ್ರಿಗಳು ಯುಪಿ ಮಾದರಿ ಬಗ್ಗೆ ಮಾತನಾಡಿರುವ ಬಗ್ಗೆ ಪತ್ರಕರ್ತರು ಕೇಳಿದ ಪ್ರಶ್ನೆಗೆ, ನಾನು ಕೂಡ ಆ ಸಂದರ್ಭದಲ್ಲಿ ಅಲ್ಲೇ ಇದ್ದೆ. ಅವರ ತಲೆಯಲ್ಲಿ ಯುಪಿ ಮಾದರಿ ಬಗ್ಗೆ ಯಾವ ಆಲೋಚನೆಯೂ ಇರಲಿಲ್ಲ. ಯುಪಿನೇ ಬೇರೆ, ಕರ್ನಾಟಕವೇ ಬೇರೆ ಎಂದು ಸಿಎಂ ಹೇಳಿದ್ದರು. ಅನಿವಾರ್ಯವಾದರೆ ಯುಪಿ ಮಾದರಿ ಮಾಡಬೇಕಾಗುತ್ತದೆ ಎಂದು ಹೇಳಿದ್ದಾರೆ. ಆದರೆ ಮಾಧ್ಯಮಗಳು ಬೇರೆಲ್ಲವನ್ನು ಬಿಟ್ಟು ಅದೊಂದನ್ನೇ ಹೈಲೆಟ್ ಮಾಡಿವೆ ಎಂದು ಉತ್ತರಿಸಿದರು.

admin

admin

Leave a Reply

Your email address will not be published. Required fields are marked *

error: Content is protected !!