ರಾಷ್ಟ್ರೀಯ  ತನಿಖಾ ದಳಕ್ಕೆ ಪ್ರವೀಣ್ ಹತ್ಯೆ ಪ್ರಕರಣ: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ

ಸುದ್ದಿ360 ಬೆಂಗಳೂರು, ಜು. 29: ಸುಳ್ಯದ ಬಿಜೆಪಿ ಮುಖಂಡ  ಪ್ರವೀಣ್ ನೆಟ್ಟಾರು ಅವರ ಹತ್ಯೆ ಪ್ರಕರಣದ ತನಿಖೆಯನ್ನು ರಾಷ್ಟ್ರೀಯ  ತನಿಖಾ ದಳಕ್ಕೆ (NIA) ವಹಿಸಲು ತೀರ್ಮಾನಿಸಲಾಗಿದೆ  ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.

ಅವರು ಇಂದು ಬೆಂಗಳೂರಿನ  ಶಕ್ತಿಭವನದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿ, ಪ್ರವೀಣ್ ಹತ್ಯೆ ವ್ಯವಸ್ಥಿತವಾಗಿ ಆಗಿದೆ ಹಾಗೂ ಇದೊಂದು  ಅಂತರರಾಜ್ಯ ವಿಚಾರವಾಗಿದೆ. ಡಿಜಿ, ಐಜಿ ಅವರ ಬಳಿ ಚರ್ಚಿಸಲಾಗಿದ್ದು, ಅದರ ಸಂಪೂರ್ಣ ಮಾಹಿತಿಯನ್ನು ಪಡೆಯಲು ಸೂಚಿಸಲಾಗಿದೆ. ತನಿಖೆ ತೀವ್ರಗತಿಯಲ್ಲಿ ನಡೆಯುತ್ತಿದ್ದು, ಮಾಹಿತಿ ಪಡೆದ ನಂತರ ಗೃಹ ಇಲಾಖೆ ಪತ್ರ ಬರೆಯಲಿದೆ. ಕೇರಳ ಗಡಿಯಲ್ಲಿ ಎರಡು ರಾಜ್ಯಗಳ ಸಂಪರ್ಕಿಸುವ ಪ್ರಮುಖ ಸ್ಥಳಗಳಲ್ಲಿ  ಸಿಸಿಟಿವಿ ಕ್ಯಾಮರಾಗಳನ್ನು ಅಳವಡಿಸಿ, ಚೆಕ್ ಪೋಸ್ಟ್ ಗಳನ್ನು ಹಾಕಲಾಗುವುದು. ಸೂಕ್ಷ್ಮ ಊರುಗಳಲ್ಲಿ ತಾತ್ಕಾಲಿಕ ಪೋಲಿಸ್ ಕ್ಯಾಂಪ್‍ಗಳು, ಹಲವಾರು ಖಾಲಿ ಹುದ್ದೆಗಳನ್ನು ತುಂಬಲು ಕ್ರಮ ತೆಗೆದುಕೊಳ್ಳಬೇಕು, ರಾತ್ರಿ ಗಸ್ತನ್ನು ಹೆಚ್ಚಿಸಬೇಕು ಹಾಗೂ ಕೆ.ಎಸ್.ಆರ್.ಪಿಯ ಮತ್ತೊಂದು ತುಕಡಿಯನ್ನು ದಕ್ಷಿಣ ಕನ್ನಡ ಜಿಲ್ಲೆಗೆ  ನಿಯೋಜಿಸಲು ಸೂಚಿಸಲಾಗಿದೆ ಎಂದರು.

ನಿನ್ನೆ ಸೂರತ್ಕಲ್‍ನಲ್ಲಿ  ನಡೆದ ಹತ್ಯೆಯ ಬಗ್ಗೆಯೂ ತೀವ್ರಗತಿಯಲ್ಲಿ ತನಿಖೆಯಾಗಿ, ತಪ್ಪಿತಸ್ಥರನ್ನು ಬಂಧಿಸಬೇಕು. ಅದಕ್ಕೂ ಕೂಡ ತಂಡಗಳನ್ನು ರಚಿಸಿ ತನಿಖೆ ಪ್ರಾರಂಭ ಮಾಡಬೇಕೆಂದು ತೀರ್ಮಾನ ಮಾಡಲಾಗಿದೆ ಎಂದರು. ಜಿಲ್ಲಾ ಮಟ್ಟದಲ್ಲಿ ಧಾರ್ಮಿಕ ಮುಖಂಡರನ್ನ ಕರೆದು ಶಾಂತಿ ಸಭೆಗಳನ್ನು ನಡೆಸಲಾಗುವುದು ಎಂದು ಮುಖ್ಯಮಂತ್ರಿಗಳು ತಿಳಿಸಿದರು.

Leave a Comment

error: Content is protected !!