ಸುದ್ದಿ360 ದಾವಣಗೆರೆ, ಏ.19: ಶಾಲೆಯೊಂದಕ್ಕೆ ಅಗ್ನಿಶಾಮಕ ಎನ್ಓಸಿ ನೀಡಲು ಲ್ಯಾಪ್ ಟಾಪ್ ರೂಪದಲ್ಲಿ ಲಂಚದ ಬೇಡಿಕೆ ಇಟ್ಟಿದ್ದ ದಾವಣಗೆರೆ ಜಿಲ್ಲಾ ಅಗ್ನಿಶಾಮಕ ಅಧಿಕಾರಿ ಹಾಗೂ ಫೈರ್‍ಮ್ಯಾನ್ ರನ್ನು ಲೋಕಾಯುಕ್ತ ಪೊಲೀಸರ ಬಲೆಗೆ ಬಿದ್ದಿದ್ದಾರೆ.
ಹರಿಹರದ ವಿಧ್ಯಾದಾಹಿನಿ ಶಾಲೆಯ ಛೇರ್ಮನ್ ಡಿ.ಜಿ. ರಘುನಾಥ್ ಶಾಲೆಗೆ ಅಗ್ನಿಶಾಮಕ ಕಚೇರಿಯಿಂದ ನಿರಾಕ್ಷೇಪಣಾ ಪತ್ರ ಪಡೆಯಲು ಡೆಲ್ ಕಂಪನಿಯ ಲ್ಯಾಪ್‍ಟಾಪ್ ನೀಡುವಂತೆ ಲಂಚದ ಬೇಡಿಕೆ ಇರುವುದಾಗಿ ಲೋಕಾಯುಕ್ತ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದರು.
ಆರೋಪಿಗಳನ್ನು ಹಿಡಿಯಲು ಬಲೆ ಬೀಸಿದ್ದ ದಾವಣಗೆರೆ ಲೋಕಾಯುಕ್ತ ಘಟಕದ ಪೊಲೀಸ್ ಅಧೀಕ್ಷಕರಾದ ಎಂ.ಎಸ್. ಕೌಲಾಪೂರೆ ಅವರ ನೇತೃತ್ವದ ತಂಡ ಆರೋಪಿಗಳನ್ನು ರೆಡ್‍ಹ್ಯಾಂಡ್ ಆಗಿ ಹಿಡಿಯುವಲ್ಲಿ ಯಶಸ್ವಿಯಾಗಿದೆ.
ಬುಧವಾರ ಸಂಜೆ ಅಗ್ನಿಶಾಮಕ ಅಧಿಕಾರಿ ಬಸವಪ್ರಭು ಶರ್ಮ ಹಾಗೂ ಫೈರ್‍ಮ್ಯಾನ್ ರಾಜೇಶ್ ಎಸ್.ಕೆ. ಇವರು ರೂ. 38,500 ಬೆಲೆ ಬಾಳುವ ಡೆಲ್ ಕಂಪನಿಯ ಲ್ಯಾಪ್ ಟಾಪನ್ನು ಸ್ವೀಕರಿಸುವಾಗ ಕಾರ್ಯಾಚರಣೆ ನಡೆಸಿದ ಲೋಕಾಯುಕ್ತ ತಂಡ ದಸ್ತಗಿರಿ ಮಾಡಿ, ತನಿಖೆ ಮುಂದುವರೆಸಿದೆ.
ಲೋಕಾಯುಕ್ತ ತಂಡದಲ್ಲಿ ಪೊಲೀಸ್ ಉಪಾಧೀಕ್ಷಕರಾದ ರಾಮಕೃಷ್ಣ ಕೆ.ಜಿ., ಪೊಲೀಸ್ ಇನ್‍ಸ್ಪೆಕ್ಟರ್ ರಾಷ್ಟ್ರಪತಿ ಹೆಚ್.ಎಸ್. ಆಂಜನೇಯ ಎನ್. ಹೆಚ್. ಹಾಗೂ ಸಿಬ್ಬಂದಿ ವರ್ಗದ ಚಂದ್ರಶೇಖರ್ ಎನ್.ಆರ್., ಆಂಜನೇಯ ವಿ. ಹೆಚ್., ವೀರೇಶಯ್ಯ ಎಸ್.ಎಂ., ಮುಜೀಬ್‍ಖಾನ್, ಲಿಂಗೇಶ್ ಎಸ್. ಎನ್., ಬಸವರಾಜು ಸಿ.ಎಸ್., ಕೃಷ್ಣನಾಯ್ಕ್, ಜೆ., ಇತರರು ಇದ್ದರು.