ಉಪ್ಪು ತಿಂದವರು ನೀರು ಕುಡಿಯಲೇಬೇಕು- ಜಿ.ಎಂ. ಸಿದ್ದೇಶ್ವರ್
ಸುದ್ದಿ360 ದಾವಣಗೆರೆ ಡಿ.25: ನಗರದ ಕಲ್ಲೇಶ್ವರ ರೈಸ್ ಮಿಲ್ ನಲ್ಲಿ ವನ್ಯಜೀವಿಗಳ ಪತ್ತೆಯಾಗಿದ್ದು, ಇದು ಮಾಜಿ ಸಚಿವ ಎಸ್. ಎಸ್. ಮಲ್ಲಿಕಾರ್ಜುನ್ ರ ಒಡೆತನದ ಮಿಲ್ ಎಂಬುದು ಎಲ್ಲರಿಗೂ ತಿಳಿದಿರುವ ವಿಷಯವಾಗಿದೆ. ಹೀಗಿದ್ದರೂ ಆರೋಪಿಗಳನ್ನು ಬಂಧಿಸುವಲ್ಲಿ ಅಧಿಕಾರಿಗಳು ಹಿಂದೆಬಿದ್ದಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಪಟ್ಟಂತೆ ಡಿಎಫ್ಓ ಯಾರದೋ ಒತ್ತಡಕ್ಕೆ ಮಣಿದಂತೆ ಕಾಣುತ್ತಿದೆ ಎಂದು ಸಂಸದ ಜಿ.ಎಂ. ಸಿದ್ದೇಶ್ವರ ಅನುಮಾನ ವ್ಯಕ್ತಪಡಿಸಿದರು.
ಅವರು ಇಂದು ಜಿಎಂಐಟಿಯಲ್ಲಿ ಕರೆದಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಪ್ರಕರಣದಲ್ಲಿ ನಾಲ್ಕನೇ ಆರೋಪಿ ಆಗಿರುವ ಸ್ಥಳದ ಮಾಲೀಕ ಎಸ್. ಎಸ್. ಮಲ್ಲಿಕಾರ್ಜುನ್ ರನ್ನು ಮೊದಲ ಆರೋಪಿಯನ್ನಾಗಿಸಿ ಕ್ರಮ ಜರುಗಿಸಬೇಕು. ಪೊಲೀಸರಾಗಿದ್ದರೆ ಇಷ್ಟು ಹೊತ್ತಿಗೆ ಆರೋಪಿಗಳನ್ನು ಬಂಧಿಸಿರುತ್ತಿದ್ದರು. ಡಿಎಫ್ ಒ ಶಾಮೀಲಾಗಿರುವ ಸಾಧ್ಯತೆ ಇರುವ ಕಾರಣ ಆರೋಪಿಗಳ ಬಂಧನವಾಗಿಲ್ಲ ಎಂದರು.
ಉಪ್ಪುತಿಂದವರು ನೀರು ಕುಡಿಯಲೇ ಬೇಕು. 1978ರ ವನ್ಯಜೀವಿ ರಕ್ಷಣಾ ಕಾಯ್ದೆಯನ್ವಯ ಆರೋಪಿಗಳಿಗೆ ಸರಿಯಾದ ಶಿಕ್ಷೆ ಆಗಬೇಕು. ಎಸ್ ಎಸ್ ಮಲ್ಲಿಕಾರ್ಜುನ್ ನಿವಾಸದಲ್ಲಿ ಯಾರೆಲ್ಲ ಕಾಂಗ್ರೆಸ್ ನಾಯಕರು ಬಂದು ಬಾಡೂಟ ಮಾಡಿ ಹೋಗಿದ್ದಾರೋ ಅವರೆಲ್ಲರೂ ಈ ಪ್ರಕರಣದ ಪಾಲುದಾರರೇ ಆಗಿದ್ದಾರೆ ಎಂದು ಅವರು ಹೇಳಿದರು.
ಕಲ್ಲೇಶ್ವರ ರೈಸ್ ಮಿಲ್ ಮಾಜಿ ಸಚಿವ ಎಸ್. ಎಸ್. ಮಲ್ಲಿಕಾರ್ಜುನ್ ರ ಒಡೆತನದ ಮಿಲ್ ಎಂಬುದು ಎಲ್ಲರಿಗೂ ಗೊತ್ತಿರುವ ವಿಚಾರ. ಅವರು ಅಲ್ಲೇ ಊಟ, ಕೆಲಸ ಹಾಗೂ ಪಾರ್ಟಿ ಮಾಡುತ್ತಾರೆ ಎಂಬುದು ಜಗಜ್ಜಾಹೀರಾಗಿರುವ ವಿಚಾರ. ಹೀಗಿರುವಾಗ ಎಫ್ ಐ ಆರ್ ಹಾಗೂ ಕೋರ್ಟ್ ಗೆ ಸಲ್ಲಿಸಿರುವ ವರದಿಯಲ್ಲಿ ಮಲ್ಲಿಕಾರ್ಜುನ್ ಹೆಸರು ಉಲ್ಲೇಖಿಸದೆ, ಕಲ್ಲೇಶ್ವರ ರೈಸ್ ಮಿಲ್ ಸ್ಥಳದ ಮಾಲೀಕರು ನಾಲ್ಕನೇ ಆರೋಪಿ ಎಂದು ಉಲ್ಲೇಖಿಸಲಾಗಿದೆ. ಯಾವ ಒತ್ತಡಕ್ಕೆ ಮಣಿದು ಈ ರೀತಿ ಮಾಡಲಾಗಿದೆ ಎಂಬುದು ತಿಳಿಯುತ್ತಿಲ್ಲ. ತಪ್ಪಿತಸ್ಥರ ಬಂಧನ ಆಗಲೇಬೇಕು.
ಮುಖ್ಯಮಂತ್ರಿಗಳೊಂದಿಗೂ ಸಹ ಈ ಕುರಿತಾಗಿ ಮಾತನಾಡಿದ್ದು, ನಮ್ಮ ಶಾಸಕರು ಬೆಳಗಾವಿ ಅಧಿವೇಶನದಲ್ಲಿ ಪ್ರಕರಣವನ್ನು ಪ್ರಸ್ತಾಪಿಸಲಿದ್ದಾರೆ ಎಂದರು.
ಡಿಎಫ್ ಒ ನನ್ನ ಕೈಗೂ ಸಿಕ್ಕಿಲ್ಲ. ಮಾಧ್ಯಮವರ ಕೈಗೂ ಸಿಗುತ್ತಿಲ್ಲ. ಅವರೇನು ತಲೆಮರೆಸಿಕೊಂಡಿದ್ದಾರೋ, ಇಲ್ಲವೇ ಯಾರಾದರೂ ಕಿಡ್ನಾಪ್ ಮಾಡಿದ್ದಾರೋ ತಿಳಿಯುತ್ತಿಲ್ಲ. ಇಂಥ ಅಧಿಕಾರಿಯನ್ನು ಕೂಡಲೇ ವರ್ಗಾವಣೆ ಮಾಡಿ ದಕ್ಷ ಅಧಿಕಾರಿ ನೇಮಿಸುವಂತೆ ಮನವಿ ಮಾಡುತ್ತೇನೆ. ಸೋಮವಾರ ಕಚೇರಿಗೆ ಕರ್ತವ್ಯಕ್ಕೆ ಹಾಜರಾಗಬೇಕು. ಸಿವಿಲ್ ಹಾಗೂ ಜೆಎಂಎಫ್ ಸಿ ನ್ಯಾಯಾಲಯ ವರದಿ ಕೇಳಿದೆ. ಏನು ನೀಡುತ್ತಾರೆ ಎಂಬುದನ್ನು ನೋಡಿಕೊಂಡು ಮುಂದಿನ ಕ್ರಮದ ಬಗ್ಗೆ ಸಂಬಂಧಪಟ್ಟವರ ಜೊತೆ ಚರ್ಚಿಸುತ್ತೇನೆ ಎಂದು ತಿಳಿಸಿದರು.
ಹಣವಿದ್ದಾಕ್ಷಣ ಕಾನೂನಿಂದ ಪಾರಾಗಲು ಸಾಧ್ಯವಿಲ್ಲ. ಎಷ್ಟೇ ಬಲಾಢ್ಯರಾದರೂ ಬಿಡಲ್ಲ. ಪ್ರಕರಣದಲ್ಲಿ ಪ್ರಮುಖ ಆರೋಪಿಗಳನ್ನು ಬಂಧಿಸಿಲ್ಲ. ಸಿಂಥೆಲ್ ಎಂಬಾತನನ್ನು ಬಂಧಿಸಿರುವುದು ಸಿಸಿಬಿ ಪೊಲೀಸರು. ಆದ್ರೆ, ಅರಣ್ಯ ಅಧಿಕಾರಿಗಳು ಬಂಧಿಸಿಲ್ಲ ಎನ್ನುತ್ತಿದ್ದಾರೆ. ಇದರಲ್ಲಿ ದ್ವಂದ್ವ ಇದೆ ಎಂದರು.
ಯಾರೇ ಆಗಲಿ ಕಾನೂನು ಬಾಹಿರವಾಗಿ ವನ್ಯಜೀವಿ ಸಾಕುವ ಹಾಗೆ ಇಲ್ಲ. ಪ್ರಾಣಿ ಕೊಂಬು, ಚರ್ಮ ಸಿಕ್ಕರೆ ಪ್ರಾಣಿಗಳು ಎಲ್ಲಿ ಹೋದವು. ಜಿಂಕೆಯ ಕೊಂಬು, ಕೋರೆ ಹಲ್ಲು ಯಾಕೆ ಮಾರಾಟಕ್ಕೆ ಕಳುಹಿಸಿದರು ಎಂಬ ಬಗ್ಗೆಯೂ ತನಿಖೆ ಆಗಬೇಕು. ಸತ್ಯಾಸತ್ಯತೆ ಹೊರಬರಬೇಕು ಎಂಬುದು ನಮ್ಮ ಅಪೇಕ್ಷೆ. ಪಕ್ಷದ ಮುಖಂಡರು, ಕಾರ್ಯಕರ್ತರು ಈ ವಿಚಾರದ ಬಗ್ಗೆ ಪ್ರತಿಭಟನೆ ನಡೆಸಿದ್ದಾರೆ. ಈ ಪ್ರಕರಣದ ತಾರ್ಕಿಕ ಅಂತ್ಯ ಕಾಣಿಸದೇ ವಿರಮಿಸುವುದಿಲ್ಲ ಎಂದು ಅವರು ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ಬಿಜೆಪಿ ಜಿಲ್ಲಾಧ್ಯಕ್ಷ ವೀರೇಶ್ ಹನಗವಾಡಿ, ದೂಡಾ ಅಧ್ಯಕ್ಷ ಎ. ವೈ. ಪ್ರಕಾಶ್, ಯಶವಂತರಾವ್ ಜಾಧವ್, ರಾಜನಹಳ್ಳಿ ಶಿವಕುಮಾರ್, ಬಿಜೆಪಿ ಪ್ರಧಾನ ಕಾರ್ಯದರ್ಶಿ ಡಿ. ಎಸ್. ಜಗದೀಶ್, ಜಿಲ್ಲಾ ವಕ್ತಾರ ಶಿವಶಂಕರ್, ಮಹಾನಗರ ಪಾಲಿಕೆ ಮಾಜಿ ಮೇಯರ್ ಎಸ್. ಟಿ. ವೀರೇಶ್, ಸದಸ್ಯರಾದ ಸೋಗಿ ಶಾಂತಕುಮಾರ್, ಸತೀಶ್ ಮತ್ತಿತರರು ಇದ್ದರು.