ವಿದ್ಯಾರ್ಥಿ ಆತ್ಮಹತ್ಯೆ ಸುತ್ತ ಅನುಮಾನದ ಹುತ್ತ – ತನಿಖೆಗೆ ಆಗ್ರಹಿಸಿ ಎಸ್ ಎಫ್ ಐ, ದಸಂಸ ಪ್ರತಿಭಟನೆ

ಸುದ್ದಿ360 ದಾವಣಗೆರೆ ಆ. 27: ಜಿಲ್ಲೆಯ ಜಗಳೂರು ತಾಲೂಕಿನ ಮೇದನಕೆರೆ ಮುರಾರ್ಜಿ ವಸತಿ ಶಾಲೆಯ 6ನೇ ತರಗತಿ ವಿದ್ಯಾರ್ಥಿ ಸುನೀಲ್ ವಸತಿ ನಿಲಯದ ಶೌಚಾಲಯದಲ್ಲಿ ನೇಣು ಬಿಗಿದುಕೊಂಡು ಸಾವನಪ್ಪಿರುವ ಘಟನೆ ಹಲವು ಅನುಮಾನಗಳಿಗೆ ಎಡೆ ಮಾಡಿದೆ, ಈ ಘಟನೆಯ ಕುರಿತು ಸೂಕ್ತ ತನಿಖೆಯಾಗಬೇಕು ಎಂದು ಆಗ್ರಹಿಸಿ ಶುಕ್ರವಾರ ಜಗಳೂರಿನಲ್ಲಿ ಪ್ರತಿಭಟನೆ ನಡೆದಿದೆ.

ಭಾರತೀಯ ವಿದ್ಯಾರ್ಥಿ ಫೆಡರೇಷನ್ (ಎಸ್ ಎಫ್ ಐ) ಹಾಗೂ ದಲಿತ ಸಂಘಟನೆ ಸಮಿತಿ  ಪ್ರತಿಭಟನೆ ನಡೆಸಿದ್ದು, ವಿದ್ಯಾರ್ಥಿಯ ಸಾವಿನ ಪ್ರಕರಣವನ್ನು ಜಿಲ್ಲಾಡಳಿತ ಸೂಕ್ತ ತನಿಖೆಗೆ ಒಳಪಡಿಸಬೇಕು ಎಂದು ಆಗ್ರಹಿಸಿವೆ.

ಸಾಲಗಟ್ಟೆ ಗ್ರಾಮದ 12 ವರ್ಷದ ಮೃತ ಸುನಿಲ್ ತಾನೇ ನೇಣು ಬಿಗಿದುಕೊಂಡನೇ? ಆತ್ಮಹತ್ಯೆಯ ಯೋಚನೆ ಅವನಿಗೆ ಹೇಗೆ ಬಂತು? ಮೃತದೇಹದ ಪರೀಕ್ಷೆಯನ್ನು ರಾತ್ರೋರಾತ್ರಿ ನಡೆಸಿದ್ದಾದರೂ ಏಕೆ ಎಂಬ ಶಂಕೆಗಳಿವೆ ಎಂದು ಪ್ರತಿಭಟನಾಕಾರರು ಹಲವು ಸಂಶಯಗಳನ್ನು ಮುಂದಿಟ್ಟಿದ್ದಾರೆ.

ವಿದ್ಯಾರ್ಥಿಯ ಸಾವಿಗೆ ಏನೇ ಕಾರಣವಿದ್ದರೂ ಸೂಕ್ತ ತನಿಖೆಯಿಂದ ಹೊರಬರಲಿ. ಪ್ರಕರಣವನ್ನು ಕೂಡಲೇ ನ್ಯಾಯಾಂಗ ತನಿಖೆಗೆ ಒಪ್ಪಿಸಬೇಕು. ನಿರ್ಲಕ್ಷ್ಯ ಹಾಗೂ ಬೇಜವಾಬ್ದಾರಿ ಹಿನ್ನೆಲೆಯಲ್ಲಿ ಶಾಲಾ ಮುಖ್ಯಸ್ಥರ ವಿರುದ್ಧ ಕಾನೂನು ಕ್ರಮ ಜರುಗಸಿಬೇಕು. ಸುನೀಲ್ ಕುಟುಂಬದ ಒಬ್ಬರಿಗೆ ಸರ್ಕಾರಿ ನೌಕರಿ ನೀಡಬೇಕು. ಪರಿಹಾರದ ಮೊತ್ತವನ್ನು ಹತ್ತು ಲಕ್ಷ ರೂ. ಗೆ ಹೆಚ್ಚಿಸಬೇಕು. ಈ ಎಲ್ಲಾ ಬೇಡಿಕೆಗಳನ್ನು ಒಂದು ವಾರದೊಳಗೆ ಈಡೇರಿಸಬೇಕು ಇಲ್ಲವಾದಲ್ಲಿ ತಾಲೂಕಿನ ಎಲ್ಲಾ ಪ್ರಗತಿಪರ ಸಂಘಟನೆಗಳು, ವಿದ್ಯಾರ್ಥಿಯ ಪೋಷಕರು ಹಾಗೂ ಗ್ರಾಮಸ್ಥರನ್ನು ಸೇರಿಸಿಕೊಂಡು ದೊಡ್ಡ ಮಟ್ಟದ ಹೋರಾಟ ನಡೆಸಲಾಗುವುದು ಎಂದು ಪ್ರತಿಭಟನಾಕಾರರು ಎಚ್ಚರಿಸಿದ್ದಾರೆ.

ಪ್ರತಿಭಟನೆಯಲ್ಲಿ ವಿದ್ಯಾರ್ಥಿ ಫೆಡರೇಷನ್ ಜಿಲ್ಲಾ ಅಧ್ಯಕ್ಷ  ಅನಂತರಾಜ್, ಮೈಲೇಶ ಗೌರಿಪುರ, ಇಫ್ತಿಕರ್, ಅಂಜಿನಪ್ಪ, ಪವನ್ ಕುಮಾರ್, ದಸಂಸ ತಾಲೂಕು ಸಂಚಾಲಕ ಮಚಿಕೆರೆ ಸತೀಶ್, ಪ್ರಗತಿಪರ ಸಂಘಟನೆಯ ಮುಖಂಡ ಧನ್ಯಕುಮಾರ್, ಸಂಗೊಂಡನಹಳ್ಳಿ ರಾಜಪ್ಪ, ಭೀಮ್ ಆರ್ಮಿ ಸಂಚಾಲಕ ಜೀವನ್, ವಕೀಲ ಓಬಳೇಶ್ ಇತರರು ಪಾಲ್ಗೊಂಡಿದ್ದರು.

admin

admin

Leave a Reply

Your email address will not be published. Required fields are marked *

error: Content is protected !!