ಸುದ್ದಿ360, ದಾವಣಗೆರೆ ಸೆ.12: ರೈತರ, ಗ್ರಾಹಕರ ವಿದ್ಯುತ್ ತಿದ್ದುಪಡಿ ಮಸೂದೆ ಕಾಯ್ದೆಯನ್ನು ಜಾರಿಗೆ ತರಬಾರದು ಎಂದು ಆಗ್ರಹಿಸಿ, ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರುಸೇನೆ, ದಾವಣಗೆರೆ ಜಿಲ್ಲಾ ಸಮಿತಿ ಸೋಮವಾರ ಜಿಲ್ಲಾಧಿಕಾರಿಗಳ ಕಚೇರಿ ಮುಂದೆ ಪ್ರತಿಭಟನೆ ನಡೆಸಿ, ಜಿಲ್ಲಾಧಿಕಾರಿಗಳ ಮೂಲಕ ಕೇಂದ್ರ ಹಾಗೂ ರಾಜ್ಯ ಸರ್ಕಾರಕ್ಕೆ ಮನವಿ ಸಲ್ಲಿಸಿತು.
ನಗರದ ಪಿಬಿ ರಸ್ತೆಯ ಹೊಸ ಬಸ್ ನಿಲ್ದಾಣದ ಬಳಿ ಇರುವ ರೈತ ಸಂಘ ಹಾಗೂ ಹಸಿರು ಸೇನೆ ಜಿಲ್ಲಾ ಕಚೇರಿಯಿಂದ ಬೈಕ್ ನಲ್ಲಿ ಪ್ರತಿಭಟನಾ ರ್ಯಾಲಿ ಹೊರಟ ರೈತರು ಜಿಲ್ಲಾಧಿಕಾರಿಗಳ ಕಚೇರಿ ಮುಂದೆ ಸರ್ಕಾರದ ರೈತ ವಿರೋಧಿ ನೀತಿಯನ್ನು ಖಂಡಿಸಿ ಘೋಷಣೆಗಳನ್ನು ಕೂಗಿದರು.
ಈ ಹಿಂದೆ ರೈತ ವಿರೋಧಿ ಮೂರು ಕೃಷಿ ಕಾಯ್ದೆಯನ್ನು ಜಾರಿಗೆ ತರಲು ಮುಂದಾಗಿದ್ದ ಕೇಂದ್ರ ಸರ್ಕಾರ, ದೆಹಲಿಯಲ್ಲಿ 1 ವರ್ಷ 4 ತಿಂಗಳು ರೈತರ ದೀರ್ಘ ಕಾಲದ ಪ್ರತಿಭಟನೆಯ ಪರಿಣಾಮ ವಾಪಾಸ್ಸು ಪಡೆಯಿತು. ಆ ಸಂದರ್ಭದಲ್ಲಿ ರೈತರ, ಜನಸಾಮಾನ್ಯರ ವಿರೋಧಿ ಕಾಯ್ದೆಯಂತಹ ವಿದ್ಯುತ್ ಖಾಸಗೀಕರಣ ಕಾಯ್ದೆಯನ್ನು ಜಾರಿಗೊಳಿಸುವುದಿಲ್ಲವೆಂದು ರೈತ ಮುಖಂಡರಿಗೆ ಆಶ್ವಾಸನೆ ಕೊಟ್ಟಿತ್ತು. ಆದರೆ ಈಗ ಲೋಕಸಭೆಯಲ್ಲಿ ತಿದ್ದುಪಡಿ ಮಸೂದೆಯನ್ನು ಮಂಡಿಸಿ ಸ್ಥಾಯಿ ಸಮಿತಿಗೆ ಒಪ್ಪಿಸಿ ಮತ್ತೆ ಈ ಕಾಯ್ದೆಯನ್ನು ಜಾರಿಗೆ ತರಲು ಮುಂದಾಗಿದೆ. ಈ ಕಾಯ್ದೆಯನ್ನು ವಿರೋಧಿಸಿ ರಾಜ್ಯ ವ್ಯಾಪಿ ರೈತ ಚಳುವಳಿಗಳು ನಡೆಯುತ್ತಿದ್ದರೂ ಸಹ ಕೇಂದ್ರ ಸರ್ಕಾರ ಈ ಕಾಯ್ದೆಯನ್ನು ಜಾರಿಗೆ ತರಲು ಹೊರಟಿದೆ. ಈ ಮಸೂದೆ ತಿದ್ದುಪಡಿಯಲ್ಲಿ ವಿದ್ಯುತ್ ಪೂರೈಕೆ ಉಪಗುತ್ತಿಗೆ ಹಾಗೂ ಪ್ರಾಂಚಾಯಿಸಿಗೆ ಅವಕಾಶವಿದ್ದು, ಈ ಮೂಲಕ ವಿದ್ಯುತ್ ವಿತರಣಾ ಕಂಪನಿಗಳನ್ನು ಖಾಸಗೀಕರಣ ಮಾಡುವುದೆ ತಿದ್ದುಪಡಿಯ ಉದ್ದೇಶವಾಗಿದೆ. ಈ ಮಸೂದೆಯ ತಿದ್ದುಪಡಿ ರೈತರಿಗೆ, ಗ್ರಾಹಕರಿಗೆ ಮರಣಶಾಸನವಾಗಲಿದೆ ಆದಕಾರಣ ಈ ಕಾಯ್ದೆ ಯಾವುದೇ ಕಾರಣಕ್ಕೂ ಜಾರಿಯಾಗಬಾರದು ಎಂದು ಆಗ್ರಹಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಸಂಘಟನೆಯ ರಾಜ್ಯ ಉಪಾಧ್ಯಕ್ಷ ಹೊನ್ನೂರು ಮುನಿಯಪ್ಪ, ವಿದ್ಯುತ್ ಪೂರೈಕೆ ಖಾಸಗೀಕರಣಗೊಂಡರೆ ರೈತರು. ಕೂಲಿ ಕಾರ್ಮಿಕರಿಗೆ ಭಾಗ್ಯಜ್ಯೋತಿ, ಕುಟೀರ ಜ್ಯೋತಿ, ಕೃಷಿ ಪಂಪ್ ಸೆಟ್ ಬೀದಿದೀಪ, ನೀರು ಸರಬರಾಜಿಗೆ ನೀಡುತ್ತಿರುವ ಉಚಿತ ವಿದ್ಯುತ್ ಬಂದ್ ಆಗಲಿದೆ. ಗ್ರಾಹಕರು ಮೊದಲು ವಿದ್ಯುತ್ ಶುಲ್ಕ ಪಾವತಿಸಬೇಕಾಗುತ್ತದೆ. ಬಳಿಕ ಸರ್ಕಾರ ಸಬ್ಸಿಡಿ ನೀಡಿದಲ್ಲಿ ಮಾತ್ರ ಪಡೆಯಬೇಕಾಗುತ್ತದೆ. ರೈತರು ಸಹ ಮೊದಲು ಹಣ ಪಾವತಿಸಿ ಬಳಿಕ ಕೃಷಿ ಪಂಪ್ ಸೆಟ್‌ಗಳಿಗೆ ವಿದ್ಯುತ್ ಬಳಕೆ ಮಾಡಿಕೊಳ್ಳಬೇಕಾಗುತ್ತದೆ. ಪ್ರೀಪೈಡ್ ಶುಲ್ಕ ಪಾವತಿಸಿ ಜನರು ಮೊಬೈಲ್ ಬಳಸುವಹಾಗೆ ಪಂಪ್ ಸೆಟ್‌ಗಳಿಗೆ ಮತ್ತು ಇತರೆ ಗ್ರಾಹಕರು ಸಹ ವಿದ್ಯುಚ್ಛಕ್ತಿ ಬಳಸಬೇಕಾಗುತ್ತದೆ. ಈ ಹಿಂದೆ ಜನರು ಬಳಸುವ ಅಡುಗೆ ಅನಿಲಕ್ಕೆ ಸಬ್ಸಿಡಿ ಕೊಡುವುದಾಗಿ ತಿಳಿಸಿ, ಈಗ ಕೊಡದೇ ಮೋಸ ಮಾಡುತ್ತಿರುವ ಹಾಗೆಯೇ ಇದೂ ಕೂಡ ಆಗಲಿದೆ. ಆದ್ದರಿಂದ ಈ ಕಾಯ್ದೆಯನ್ನು ಯಾವುದೇ ಕಾರಣಕ್ಕೂ ಜಾರಿಗೆ ತರಬಾರದೆಂದು ಕೇಂದ್ರ ಮತ್ತು ರಾಜ್ಯ ಸರ್ಕಾರಗಳಿಗೆ ಒತ್ತಾಯಿಸುತ್ತಿರುವುದಾಗಿ ತಿಳಿಸಿದರು.
ಪ್ರತಿಭಟನೆಯಲ್ಲಿ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ಉಪಾಧ್ಯಕ್ಷ ಹೊನ್ನೂರು ಮುನಿಯಪ್ಪ, ಪರಶುರಾಮಪುರದ ಮರುಳಸಿದ್ದಯ್ಯ, ಬಲ್ಲೂರು ರವಿಕುಮಾರ್, ದಶರಥರಾಜ್, ಕೆ.ಪಿ.ಆರ್.ಎಸ್ ಮುಖಂಡ ಶ್ರೀನಿವಾಸ್ ಸೇರಿದಂತೆ ಅನೇಕ ರೈತರು ಪಾಲ್ಗೊಂಡಿದ್ದರು.
ರೈತರ ಕುಂದುಕೊರತೆ ಆಲಿಸಿದ ಜಿಲ್ಲಾಧಿಕಾರಿ
ಮನವಿಯನ್ನು ಸ್ವೀಕರಿಸಿದ ಜಿಲ್ಲಾಧಿಕಾರಿಗಳು, ರೈತರು ಕೊಟ್ಟ ಮನವಿಯನ್ನು ಕೇಂದ್ರ ಹಾಗೂ ರಾಜ್ಯ ಸರ್ಕಾರದ ಗಮನಕ್ಕೆ ತರುವುದಾಗಿ ತಿಳಿಸಿದರು. ನಂತರ ರೈತರು ತಾವು ಬೆಳೆವಿಮೆ, ಅತಿವೃಷ್ಠಿ ಪರಿಹಾರ ಹಾಗೂ ಇತರೆ ಸರ್ಕಾರಿ ಯೋಜನೆಗಳಿಗೆ ಸಂಬಂಧಿಸಿದಂತೆ ತಾವು ಎದುರಿಸುತ್ತಿರುವ ತೊಂದರೆಗಳ ಕುರಿತು ಜಿಲ್ಲಾಧಿಕಾರಿಗಳ ಗಮನಕ್ಕೆ ತಂದರು. ಸರ್ಕಾರಿ ಸೌಲಭ್ಯಗಳ ಕುರಿತಾಗಿ ಅಗತ್ಯ ಮಾಹಿತಿಯನ್ನು ಈ ಸಂದರ್ಭದಲ್ಲಿ ಜಿಲ್ಲಾಧಿಕಾರಿಗಳು ರೈತರಿಗೆ ನೀಡಿದರು.