ಸುದ್ದಿ360 ಮಂಡ್ಯ ಸೆ.06: ಗ್ಯಾಂಗ್ರೀನ್ ಹಿನ್ನೆಲೆಯಲ್ಲಿ ಶಸ್ತ್ರಚಿಕಿತ್ಸೆ ಮಾಡಿ ಕತ್ತರಿಸಿದ್ದ ರೋಗಿಯ ಕಾಲನ್ನು ಮಣ್ಣು ಮಾಡುವಂತೆ ಪತ್ನಿ ಕೈಗೆ ಕೊಟ್ಟಿರುವ ಘಟನೆ ನಗರದ ಮಂಡ್ಯ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ(ಮಿಮ್ಸ್)ಯಲ್ಲಿ ಇಂದು ನಡೆದಿದೆ.
ತಾಲೂಕಿನ ಕೀಲಾರ ಗ್ರಾಮದ ಭಾಗ್ಯಮ್ಮ ಎಂಬುವರ ಪತಿ ಪ್ರಕಾಶ್ ಅವರ ಕಾಲಿಗೆ ಗ್ಯಾಂಗ್ರೀನ್ ಆಗಿತ್ತು. ಈ ಹಿನ್ನೆಲೆಯಲ್ಲಿ ಮಂಗಳವಾರ ಮಿಮ್ಸ್ ನಲ್ಲಿ ಶಸ್ತ್ರಚಿಕಿತ್ಸೆ ನಡೆದಿದೆ. ಆತನ ಕಾಲನ್ನು ಕತ್ತರಿಸಿ ಕವರ್‌ನಲ್ಲಿ ಸುತ್ತಿ ಎಲ್ಲಾದರೂ ಮಣ್ಣು ಮಾಡುವಂತೆ ಪತ್ನಿಯ ಕೈಗೆ ಕೊಟ್ಟಿದ್ದಾರೆ. ಇದರಿಂದ ದಿಗ್ಬಮ್ರೆಗೊಂಡ ಭಾಗ್ಯಮ್ಮ ದಿಕ್ಕು ತೋಚದೆ ಅಳುತ್ತಾ ನಿಂತಿದ್ದರು. ಇದನ್ನು ಕಂಡ ಸಾರ್ವಜನಿಕರು ಮಿಮ್ಸ್ ಅಧಿಕಾರಿಗಳು, ವೈದ್ಯರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇದಲ್ಲದೆ ತಾವೇ ಮಣ್ಣು ಮಾಡಲು ಹಣ ಕೇಳಿದ್ದಾರೆನ್ನುವ ಆರೋಪ ಸಿಬ್ಬಂದಿ ಮೇಲಿದೆ. ಮಾಹಿತಿ ತಿಳಿದು ಸ್ಥಳಕ್ಕೆ ಬಂದ ಮಿಮ್ಸ್ ನಿರ್ದೇಶಕ ಡಾ.ಬಿ.ಜೆ.ಮಹೇಂದ್ರ ಅವರು ಸಿಬ್ಬಂದಿಯನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಇತ್ತ ಸಾರ್ವಜನಿಕರ ಆಕ್ರೋಶವೂ ಹೆಚ್ಚಾದ ಹಿನ್ನೆಲೆಯಲ್ಲಿ ಸಿಬ್ಬಂದಿ ಕಾಲನ್ನು ವಾಪಸ್ ಪಡೆದಿದ್ದಾರೆ.
ಈ ಕುರಿತು ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಡಾ.ಬಿ.ಜೆ.ಮಹೇಂದ್ರ, ರೋಗಿಯ ಮೊಣಕಾಲಿನ ಕಳೆಭಾಗವನ್ನು ತೆಗೆಯಲಾಗಿತ್ತು. ಅದನ್ನು ಬಯೋಮೆಡಿಕಲ್ ವೇಸ್ಟ್ ಮ್ಯಾನೇಜ್ಮೆಂಟ್ ಆ್ಯಂಡ್ ಆಡ್ಲಿಂಗ್ ರೂಲ್ಸ್ ಪ್ರಕಾರ ಕೊಡಬಾರದು. ಡಿಸ್ಪೋಸಲ್ ಅಗ್ರಿಮೆಂಟ್ ಮಾಡಿಕೊಂಡಿರುವವರ ಮೂಲಕ ಡಿಸ್ಪೋಸ್ ಮಾಡಿಸಬೇಕು. ದುರಾದೃಷ್ಟಾವಶಾತ್ ತೆಗೆದ ಕಾಲಿನ ಭಾಗವನ್ನು ರೋಗಿಯ ಪತ್ನಿಗೆ ಡಿ ಗ್ರೂಪ್ ಸಿಬ್ಬಂದಿ ಕೊಟ್ಟಿದ್ದಾರೆ. ಆಕೆಗೆ ಗಾಬರಿಯಾಗಿ ಕಣ್ಣೀರು ಹಾಕಿದ್ದಾರೆ. ಇದು ನನ್ನ ಗಮನಕ್ಕೆ ಬಂದ ತಕ್ಷಣ ವಾಪಸ್ ಪಡೆಯಲಾಗಿದೆ. ರೂಲ್ಸ್ ಪ್ರಕಾರ ವಿಲೇವಾರಿ ಮಾಡಲಾಗುತ್ತದೆ ಎಂದು ತಿಳಿಸಿದರು.
ಪ್ರಸ್ತುತ ಘಟನೆ ಬಗ್ಗೆ 24 ಗಂಟೆಯೊಳಗೆ ವರದಿ ನೀಡುವಂತೆ ಸರ್ಜರಿ ಮುಖ್ಯಸ್ಥರಿಗೆ ಸೂಚನೆ ನೀಡಿದ್ದೇನೆ. ಅಲ್ಲದೆ ಆಸ್ಪತ್ರೆಯ ಯಾವುದೇ ತ್ಯಾಜ್ಯವನ್ನು ನಿಯಮಾನುಸಾರ ವಿಲೇವಾರಿ ಮಾಜುವಂತೆ ಸುತ್ತೋಲೆ ಹೊರಡಿಸಿದ್ದೇನೆ. ಕಾನೂನು ಬಾಹಿರವಾಗಿ ವಿಲೇವಾರಿ ಮಾಡಿದರೆ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಹೇಳಿದರು.
ರೋಗಿಯ ಪತ್ನಿ ಬಳಿ ಸಿಬ್ಬಂದಿ ಹಣ ಕೇಳಿದ್ದಾರೆಂಬ ಆರೋಪ ವಿಚಾರಕ್ಕೆ ಪ್ರತಿಕ್ರಿಯಿಸಿ ಇದು ನನ್ನ ಗಮನಕ್ಕೆ ಬಂದಿಲ್ಲ. ವಿಚಾರಣೆ ವೇಳೆ ಸಾಬೀತಾದರೆ ಕಠಿಣ ಕ್ರಮ ತೆಗೆದುಕೊಳ್ಳಲಾಗುವುದು ಎಂದು ತಿಳಿಸಿದ್ದಾರೆ.