ಶಿವಮೊಗ್ಗ ಜಿಲ್ಲಾ ಒಳಾಂಗಣ ಕ್ರೀಡಾಂಗಣ ಶಟಲ್ ಗಾಗಿ ಮೀಸಲಾಯಿತೇ. . .?

ಇತರೆ ಕ್ರೀಡೆಗಳೆಡೆ ಮಹಾನಗರ ಪಾಲಿಕೆ, ಜಿಲ್ಲಾಡಳಿತದ ಧೋರಣೆಯಾದರೂ ಏನು..?

ಶಿವಮೊಗ್ಗ ಸಿಟಿ ಕರಾಟೆ ಅಸೋಸಿಯೇಶನ್ ಹಾಗೂ ಕ್ರೀಡಾಪಟುಗಳಿಂದ ಪ್ರತಿಭಟನೆ

ಸುದ್ದಿ360 ಶಿವಮೊಗ್ಗ, ಸೆ. 18: ಶಿವಮೊಗ್ಗ ನಗರದಲ್ಲಿರುವ ನೆಹರೂ ಒಳಾಂಗಣ ಕ್ರೀಡಾಂಗಣವನ್ನು ಇಲಾಖಾ ಕ್ರೀಡಾ ಚಟುವಟಿಕೆಗಳಿಗೆ ನೀಡಲು ನಿರಾಕರಿಸುತ್ತಿರುವ ಕ್ರೀಡಾಧಿಕಾರಿಯ ಧೋರಣೆಯನ್ನು ಖಂಡಿಸಿ ಶಿವಮೊಗ್ಗ ಸಿಟಿ ಕರಾಟೆ ಅಸೋಸಿಯೇಶನ್ ಹಾಗೂ ಕ್ರೀಡಾಪಟುಗಳು ಭಾನುವಾರ ಕ್ರೀಡಾಂಗಣದ ಎದುರು ಪ್ರತಿಭಟನೆ ನಡೆಸಿದರು.

ನೆಹರೂ ಒಳಾಂಗಣ ಕ್ರೀಡಾಂಗಣದಲ್ಲಿ ಸ್ಮಾರ್ಟ್ ಸಿಟಿ ಅಡಿಯಲ್ಲಿ ಶಟಲ್ ಕೋರ್ಟ್ ಗಳಿಗಾಗಿ ಸಿಂಥೆಟಿಕ್ ಅಳವಡಿಕೆಯಿಂದ ಇತರೆ ಕ್ರೀಡೆಗಳಿಗೆ ಅವಕಾಶ ನಿರಾಕರಿಸುವ ಕ್ರೀಡಾಧಿಕಾರಿಗಳ ನಡೆಯನ್ನು ಖಂಡಿಸಿರುವ ಕ್ರೀಡಾಪಟುಗಳು ಕ್ರೀಡಾಂಗಣದ ಮೂಲ ಉದ್ದೇಶವನ್ನೇ ಕಡೆಗಣಿಸಿದ್ದಾರೆ ಎಂದು ದೂರಿದ ಪ್ರತಿಭಟನಾಕಾರರು, ಈ ಕುರಿತು ಜಿಲ್ಲಾಧಿಕಾರಿಗಳು, ಶಾಸಕರಾದಿಯಾಗಿ ಮನವಿ ಸಲ್ಲಿಸಲಾಗಿದೆ ಎಂದು ತಿಳಿಸಿದರು.

ಈ ಪ್ರತಿಭಟನೆ ದಸರಾ ಕ್ರೀಡಾಕೂಟಕ್ಕೆ ಮಾತ್ರ ಸೀಮಿತವಾಗಿಲ್ಲ. ಬದಲಿಗೆ ಮುಂದಿನ ದಿನಗಳಲ್ಲಿ ಬೇರೆ ಯಾವುದೇ ಕ್ರೀಡೆಗಳಿಗೆ ಜಿಲ್ಲಾ ಒಳಾಂಗಣ ಕ್ರೀಡಾಂಗಣ ಲಭ್ಯವಾಗದಿರುವುದನ್ನು ವಿರೋಧಿಸಿ ಈ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ.

ಶಿವಮೊಗ್ಗ ವಿನೋದ್, ಅಧ್ಯಕ್ಷರು, ಸಿಟಿ ಕರಾಟೆ ಅಸೋಸಿಯೇಶನ್, ಶಿವಮೊಗ್ಗ.

ಈ ಸಂದರ್ಭದಲ್ಲಿ ಮಾತನಾಡಿದ ಶಿವಮೊಗ್ಗ ಸಿಟಿ ಕರಾಟೆ ಅಸೋಸಿಯೇಶನ್  ಅಧ್ಯಕ್ಷ ಶಿವಮೊಗ್ಗ ವಿನೋದ್, ಸಿಂಥೆಟಿಕ್ ಮ್ಯಾಟ್ ಅಳವಡಿಸಲಾಗಿರುವ ಕೋರ್ಟ್ ಮೇಲೆ ಮ್ಯಾಟ್ ಬಳಸಿ ಉಪಯೋಗಿಸುವುದರಿಂದ ಕೋರ್ಟ್ಗೆ ಯಾವುದೇ ಹಾನಿಯಾಗುವುದಿಲ್ಲ. ಇದನ್ನು ಸ್ಮಾರ್ಟ್ ಸಿಟಿ ಇಂಜಿನಿಯರ್ ಅವರೂ ಸಹ ಖಚಿತಪಡಿಸಿದ್ದಾರೆ. ಆದರೆ ಕ್ರೀಡಾಧಿಕಾರಿಗಳು ಜಿಲ್ಲಾಧಿಕಾರಿಗಳು ಮತ್ತು ಶಾಸಕರಿಗೆ ತಪ್ಪು ಮಾಹಿತಿ ನೀಡುವ ಮೂಲಕ ಇತರೆ ಕ್ರೀಡೆಗಳಿಗೆ ಅನ್ಯಾಯ ಮಾಡುತ್ತಿದ್ದಾರೆ. ಇದೇ ಕ್ರೀಡಾಂಗಣದ ಬಳಕೆಗಾಗಿ ಕುಸ್ತಿ ಮತ್ತು ಕಬ್ಬಡಿ ಸೇರಿದಂತೆ ಇತರೆ ಮ್ಯಾಟ್ ಗಳನ್ನು ಲಕ್ಷಾಂತರ ರೂ. ವ್ಯಯ ಮಾಡಿ ತರಿಸಲಾಗಿದೆ. ಇವುಗಳನ್ನು ಎಲ್ಲಿ ಬಳಸುತ್ತಾರೆ ಎಂದು ಪ್ರಶ್ನಿಸಿದ ಅವರು, ಕ್ರೀಡಾಧಿಕಾರಿಗಳ ನಡೆ ಒಳಾಂಗಣ ಕ್ರೀಡಾಂಗಣ ಬಳಕೆಯ ಬೈಲಾಕ್ಕೆ ವಿರುದ್ಧವಾಗಿದೆ ಎಂದು ದೂರಿದರು.

ಸಿಂಥೆಟಿಕ್ ಅಳವಡಿಕೆಯ ಕ್ರೀಡಾಂಗಣಗಳು ಇತರೆ ಜಿಲ್ಲೆಗಳಲ್ಲಿಯೂ ಇವೆ. ಆದರೆ ಅಲ್ಲಿ ಬೇರೆ ಕ್ರೀಡೆಗಳಿಗೂ ನಿಯಮಾನುಸಾರ ಅವಕಾಶ ನೀಡಲಾಗಿದೆ ಎಂದು ತಿಳಿಸಿದ ಅವರು, ಬೆಂಗಳೂರಿನಲ್ಲಿ ಸಿಂಥೆಟಿಕ್ ಅಳವಡಿಸಲಾದ ಕ್ರೀಡಾಂಗಣದಲ್ಲಿ ಮ್ಯಾಟ್ ಬಳಸಿ ಇತರೆ ಕ್ರೀಡೆಗಳಿಗೂ ಅವಕಾಶ ಮಾಡಿಕೊಟ್ಟಿರುವುದನ್ನು ಫೋಟೋ ಸಮೇತ ಮಾಹಿತಿ ನೀಡಿದರು. ಕ್ರೀಡಾಧಿಕಾರಿಗಳು  ಕೇವಲ ಒಂದು ಕ್ರೀಡೆಯ ಪರವಾಗಿ ನಿಂತರೆ ಇತರೆ ಕ್ರೀಡಾಪಟುಗಳ ಪಾಡೇನು ಎಂದು ಪ್ರಶ್ನಿಸಿದರು.

ಶಿವಮೊಗ್ಗದಲ್ಲಿ ಸುಸಜ್ಜಿತವಾದ ಒಳಾಂಗಣ ಕ್ರೀಡಾಂಗಣ ಇರುವುದರಿಂದಲೇ ಇಲಾಖೆಯ ರಾಜ್ಯಮಟ್ಟದ ಕ್ರೀಡಾಕೂಟ ಸೇರಿದಂತೆ ಬಹುಮುಖ್ಯ ಕ್ರೀಡಾಕೂಟಗಳನ್ನು ಶಿವಮೊಗ್ಗದಲ್ಲಿ ಮೊದಲಿನಿಂದಲೂ ಮಾಡಲಾಗುತ್ತಿದೆ. ಈಗ ಕ್ರೀಡಾಧಿಕಾರಿಯವರು  ಒಳಾಂಗಣ ಕ್ರೀಡಾಂಗಣವನ್ನು ನೀಡಲಾಗುವುದಿಲ್ಲ ಬೇರೆ ಸ್ಥಳಾವಕಾಶವನ್ನು ನೋಡಿಕೊಳ್ಳಿ ಎನ್ನುವುದು ಎಷ್ಟು ಸರಿ. ಇಲಾಖೆಯ ಕ್ರೀಡಾಕೂಟಗಳನ್ನು ನಡೆಸಲು ಇಲಾಖೆ ಕೊಡುವ ಹಣವೇ ಕಡಿಮೆ ಇರುತ್ತದೆ. ಈ ಹಣದಲ್ಲಿ ಕ್ರೀಡಾಕೂಟಗಳನ್ನು ನಡೆಸಲು ಸಾಧ್ಯವಾಗದೆ ಹೆಚ್ಚಿನ ಹೊರೆಯನ್ನು ಅಸೋಸಿಯೇಶನ್ ಗಳು ಭರಿಸುವುದಾದರೆ ಜಿಲ್ಲೆಯಲ್ಲಿ ಕ್ರೀಡಾಪಟುಗಳಿಗೆ ಉತ್ತೇಜನ ಸಿಗುವುದಾದರೂ ಹೇಗೆ.? ಒಳಾಂಗಣ ಕ್ರೀಡಾಂಗಣ ಲಭ್ಯವಾಗದಿದ್ದಲ್ಲಿ ಖಾಸಗಿ ಕಲ್ಯಾಣ ಮಂದಿರಗಳಲ್ಲಿ ಕ್ರೀಡಾಕೂಟಗಳನ್ನು ನಡೆಸಲು ಇಲಾಖೆ ಕೊಡುವ ಹಣಕ್ಕಿಂತ 4 ಪಟ್ಟು ಅಧಿಕವಾಗುವುದರ ಜೊತೆಗೆ ಸ್ಥಳಾವಕಾಶದ ಕೊರತೆಯಾಗುತ್ತದೆ ಹೀಗಿರುವಾಗ ಸರ್ಕಾರಿ ಕ್ರೀಡಾಂಗಣದಲ್ಲಿ ಸರ್ಕಾರಿ ಚಟುವಟಿಕೆಗಳನ್ನು ನಡೆಸಲು ನಿರ್ಬಂಧವಾದರೆ ಸರ್ಕಾರಿ ಕಟ್ಟಡಗಳನ್ನು ನಿರ್ಮಿಸಿರುವ ಉದ್ದೇಶವಾದರೂ ಏನು ಎಂದು ಪ್ರತಿಭಟನಾಕಾರರು ಕಿಡಿಕಾರಿದರು.

ಈ ಮೊದಲು ಇತರೆ ಕ್ರೀಡೆಗಳಿಗೆ ಅವಕಾಶ ಕೊಡಲಾಗುವುದಿಲ್ಲ ಎಂದಿದ್ದ ಕ್ರೀಡಾಧಿಕಾರಿ ಮಂಜುನಾಥಸ್ವಾಮಿಯವರು ಪ್ರತಿಭಟನಾ ಸ್ಥಳಕ್ಕೆ ಭೇಟಿ ನೀಡಿ, “ಮ್ಯಾಟ್ ಹಾಕಿಕೊಂಡು ಉಪಯೋಗಿಸಿದರೆ ತೊಂದರೆ ಇಲ್ಲ. ಆದರೆ ಬರುವ ಕ್ರೀಡಾಪಟುಗಳು ಮತ್ತು ವೀಕ್ಷಕರು ಪಾದರಕ್ಷೆಗಳನ್ನು ಹಾಕಿಕೊಂಡು ಕೋರ್ಟ್ ನಲ್ಲಿ ಓಡಾಡುವುದರಿಂದ ಕೋರ್ಟ್ ಹಾಳಾಗುತ್ತದೆ ಎಂದಿದ್ದಾರೆ.

ಕ್ರೀಡಾಪಟುಗಳಿಗೆ ಸ್ಪಂದಿಸದ ಮೇಯರ್ …

ಈ ನಡುವೆ ಕ್ರೀಡಾಧಿಕಾರಿಗಳು ಮಹಾನಗರ ಪಾಲಿಕೆ ಮೇಯರ್ ಅವರನ್ನು ದೂರವಾಣಿ ಮೂಲಕ ಸಂಪರ್ಕಿಸಿ, ಪ್ರತಿಭಟನೆಯ ವಿಚಾರವನ್ನು ತಿಳಿಸಿದಾಗ ಮೊಬೈಲನ್ನು ಪ್ರತಿಭಟನಾಕಾರರಿಗೆ ನೀಡುವಂತೆ ಹೇಳಿ, ಪ್ರತಿಭಟನಾಕಾರರಿಗೆ ಈ ಕೂಡಲೇ ಪ್ರತಿಭಟನೆಯನ್ನು ನಿಲ್ಲಿಸಿ, ಇಲ್ಲವಾದಲ್ಲಿ ದಸರಾ ಕ್ರೀಡಾಕೂಟದಿಂದ ಕರಾಟೆಯನ್ನು ಹೊರಗಿಡಲಾಗುತ್ತದೆ ಎಂದು ಹೇಳಿದ್ದಾರೆ. ಅಲ್ಲದೆ ಸ್ಥಳ ವೀಕ್ಷಣೆ ನಡೆಸಲು ಉಡಾಫೆಯಾಗಿ ಉತ್ತರಿಸಿದ್ದಾರೆ ಇದು ಪ್ರತಿಭಟನಾಕಾರರನ್ನು ಇನ್ನಷ್ಟು ಕೆರಳುವಂತೆ ಮಾಡಿದೆ ಎಂದು ವಿನೋದ್ ಹೇಳಿದರು.

ಈ ಸಂದರ್ಭದಲ್ಲಿ ಮಹಾನಗರಪಾಲಿಕೆ ವಿರೋಧ ಪಕ್ಷದ ನಾಯಕಿ, ರೇಖಾ ರಂಗನಾಥ್, ಹಾಗೂ ಪಾಲಿಕೆ ಸದಸ್ಯ ಹೆಚ್ ಸಿ. ಯೋಗೇಶ್ ಸ್ಥಳಕ್ಕೆ ಆಗಮಿಸಿ, ವಾಸ್ತವ ಚಿತ್ರಣವನ್ನು ಗಮನಿಸಿದ್ದಾರೆ.

ಪ್ರತಿಭಟನೆಯಲ್ಲಿ ಸಿಟಿ ಕರಾಟೆ ಅಸೋಸಿಯೇಶನ್ ಪದಾಧಿಕಾರಿಗಳಾದ ಆರ್. ರಾಘವೇಂದ್ರ, ವೆಂಕಟೇಶ, ಹರ್ಷಿತ್, ಸಾಗರ್, ಪ್ರಜ್ವಲ್, ಶ್ರೇಯಸ್ ಹಾಗೂ ಅನೇಕ ಕ್ರೀಡಾಪಟುಗಳು ಉಪಸ್ಥಿತರಿದ್ದರು.

admin

admin

Leave a Reply

Your email address will not be published. Required fields are marked *

error: Content is protected !!