ಸರ್ಕಾರದ ಮಧ್ಯಂತರ ಆದೇಶಕ್ಕೆ ಮಣಿದ ಸರ್ಕಾರಿ ನೌಕರರು
ಸುದ್ದಿ360 ಬೆಂಗಳೂರು ಮಾ.01: ರಾಜ್ಯ ಸರ್ಕಾರಿ ನೌಕರರೊಂದಿಗಿನ ಹಲವು ಸುತ್ತಿನ ಮಾತುಕತೆಗಳ ನಂತರ ರಾಜ್ಯ ಸರ್ಕಾರಿ ನೌಕರರ ವೇತನ ಶೇ.17 ರಷ್ಟು ಹೆಚ್ಚಳ ಮಾಡಿ ಮಧ್ಯಂತರ ಆದೇಶ ಮಾಡಿರುವ ಮುಖ್ಯಮಂತ್ರಿಗಳು ಇಂದೇ ಆದೇಶ ಹೊರಡಿಸಲು ಅಧಿಕಾರಿಗಳಿಗೆ ಸೂಚನೆ ನೀಡಿರುವ ಹಿನ್ನೆಲೆಯಲ್ಲಿ ಮುಷ್ಕರವನ್ನು ಷರತ್ತುಬದ್ಧವಾಗಿ ಹಿಂಪಡೆಯಲಾಗಿದೆ ಎಂದು ಸರ್ಕಾರಿ ನೌಕರರ ಸಂಘದ ರಾಜ್ಯಾಧ್ಯಕ್ಷ ಸಿ.ಎಸ್. ಷಡಕ್ಷರಿ ಹೇಳಿದ್ದಾರೆ.
ವಿಧಾನ ಸೌಧದ ಹಣಕಾಸು ಇಲಾಖೆಯ ಐಎಸ್ ಎನ್ ಪ್ರಸಾದ್ ಕೊಠಡಿಯಲ್ಲಿ ಇಂದು ನಡೆದ ಸಭೆಯಲ್ಲಿ ಅಂತಿಮವಾಗಿ ಈ ತೀರ್ಮಾನಕ್ಕೆ ಬರಲಾಗಿದೆ.
ಎನ್ ಪಿ ಎಸ್ ರದ್ಧತಿಗೆ ಸಮಿತಿ ರಚನೆ
ಎನ್ಪಿಎಸ್ ರದ್ಧತಿ ಮಾಡಿ, ಒಪಿಎಸ್ ಜಾರಿ ಮಾಡುವ ನಿಟ್ಟಿನಲ್ಲಿ, ಈಗಾಗಲೇ ಜಾರಿಯಲ್ಲಿರುವ ರಾಜ್ಯಗಳನ್ನು ಭೇಟಿ ಮಾಡಿ ಪರಿಶೀಲಿಸಿ ನಿರ್ಧಾರ ಕೈಗೊಳ್ಳಲು ಅಪರ ಮುಖ್ಯ ಕಾರ್ಯದರ್ಶಿಗಳ ಅಧ್ಯಕ್ಷತೆಯಲ್ಲಿ ಸಮಿತಿ ರಚಿಸಲಾಗಿದೆ. ಸಮಿತಿಯ ವರದಿಯ ನಂತರ ಸರ್ಕಾರ ಕ್ರಮ ಕೈಗೊಳ್ಳಲಿದೆ ಎಂದು ತಿಳಿಸಿದೆ. ಇದು ಫಲಪ್ರದವಾಗಲಿದೆ ಎಂದು ಷಡಕ್ಷರಿ ಹೇಳಿದ್ದಾರೆ.
ಎಲ್ಲ ನೌಕರರು ಕಚೇರಿಗೆ ಕೂಡಲೇ ಹಾಜರಾಗಬೇಕು
ಮುಷ್ಕರ ನಿರತ ನೌಕರರು ಕರ್ತವ್ಯಕ್ಕೆ ಹಾಜರಾಗಬೇಕು. ದೂರದ ಊರಿನಿಂದ ಬರುವವರಿಗೆ ಬೆಸ್ಟ್ ಕೈಂಡ್ ಆಫ್ ಲೀವ್ ನೀಡುವಂತೆ ಸರ್ಕಾರಕ್ಕೆ ಮನವಿ ಮಾಡಿಕೊಳ್ಳಲಾಗುವುದು ಎಂದು ರಾಜ್ಯಾಧ್ಯಕ್ಷರು ತಿಳಿಸಿದ್ದಾರೆ.
ಏ.1ರಿಂದ ಪರಿಷ್ಕೃತ ವೇತನ ಜಾರಿ
ಮಧ್ಯಂತರ ವೇತನ ಪರಿಷ್ಕರಣೆ ಮಾಡಿ ಅಧಿಕೃತ ಆದೇಶ ಮಾಡಲಾಗಿದ್ದು, ಏ.1ರಿಂದ ನೂತನ ಆದೇಶ ಜಾರಿಯಾಗಲಿದೆ.