‘ಮುರುಘಾ ಶ್ರೀಗಳ ಪ್ರಕರಣ ಸಿಬಿಐಗೆ ವಹಿಸಿ’ –  ವಿದ್ಯಾರ್ಥಿಗಳ ರಕ್ಷಣೆಗೆ ಪ್ರಗತಿಪರರ ಒತ್ತಾಯ

ಸುದ್ದಿ360 ದಾವಣಗೆರೆ, ಸೆ.02: ಮುರುಘಾ ಶ್ರೀಗಳ ವಿರುದ್ಧದ ಪ್ರಕರಣವನ್ನು ಸಿಬಿಐಗೆ ವಹಿಸುವಂತೆ ಆಗ್ರಹಿಸಿ ಪ್ರಗತಿಪರ ಸಂಘಟನೆಗಳ ಒಕ್ಕೂಟದ ಮುಖಂಡರು ಹಾಗೂ ಸದಸ್ಯರು ನಗರದ ಡಾ.ಬಿ.ಆರ್. ಅಂಬೇಡ್ಕರ್ ವೃತ್ತದಲ್ಲಿ ಇಂದು ಪ್ರತಿಭಟನೆ ನಡೆಸಿ, ತಮ್ಮ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಉಪವಿಭಾಗಾಕಾರಿ ಮೂಲಕ ರಾಜ್ಯಪಾಲರಿಗೆ ಮನವಿ ಸಲ್ಲಿಸಿದರು.

ಈ ವೇಳೆ ಮಾತನಾಡಿದ ನಿವೃತ್ತ ಪ್ರಾಧ್ಯಾಪಕ ಪ್ರೊ.ಎ.ಬಿ. ರಾಮಚಂದ್ರಪ್ಪ, ಪೋಕ್ಸೋ ಪ್ರಕರಣ ದಖಾಲಾದ ಆರು ದಿನಗಳ ಬಳಿಕವಾದರೂ ಮುರುಘಾ ಶರಣರನ್ನು ಬಂಧಿಸಿರುವುದು ಸ್ವಾಗತದ ವಿಷಯವಾಗಿದೆ. ಆದರೆ, ಶ್ರೀಗಳು ಪ್ರಭಾವಿಗಳಾಗಿರುವ ಕಾರಣ ಪ್ರಕರಣದ ವಿಚಾರಣೆ ಮೇಲೆ ಪ್ರಭಾವ ಬೀರುವ ಸಾಧ್ಯತೆ ಇದೆ. ಕಾರಣ, ಪ್ರಕರಣವನ್ನು ಸಿಬಿಐಗೆ ವಹಿಸುವಂತೆ ಆಗ್ರಹಿಸಿದರು.

ಚಿತ್ರದುರ್ಗದ ಮುರುಘಾ ಮಠವನ್ನು ಸೂಪರ್ ಸೀಡ್ ಮಾಡಿ, ಸರಕಾರದ ವಶಕ್ಕೆ ಪಡೆಯಬೇಕು. ರಾಜ್ಯದ ಎಲ್ಲ ಮಠ ಮತ್ತು ಧಾರ್ಮಿಕ ಸಂಸ್ಥೆಗಳು ನಡೆಸುತ್ತಿರುವ ವಿದ್ಯಾಸಂಸ್ಥೆಗಳ ವಿದ್ಯಾರ್ಥಿನಿಯರಿಗೆ ಸೂಕ್ತ ರಕ್ಷಣೆ ನೀಡಬೇಕು. ಪ್ರಕರಣ ದಾಖಲಿಸಿರುವ ಮೈಸೂರಿನ ಒಡನಾಡಿ ಸಂಸ್ಥೆ ಸದಸ್ಯರಿಗೆ ತೀವ್ರ ಬೆದರಿಕೆ ಇರುವುದರಿಂದ ಅವರಿಗೆ ರಕ್ಷಣೆ ನೀಡಬೇಕು. ಪ್ರಕರಣದಲ್ಲಿ ಸಂತ್ರಸ್ತ ಬಾಲಕಿಯರ ಮುಂದಿನ ವಿದ್ಯಾಭ್ಯಾಸದ ಹೊಣೆಯನ್ನು ಸರಕಾರವೇ ವಹಿಸಿಕೊಳ್ಳಬೇಕು. ವಿದ್ಯಾಭ್ಯಾಸದ ಬಳಿಕ ಅವರಿಗೆ ಸರಕಾರಿ ನೌಕರಿ ನೀಡಬೇಕು ಹಾಗೂ ಸಂತ್ರಸ್ತರಿಗೆ ತಲಾ ಒಂದು ಕೋಟಿ ರೂ. ಪರಿಹಾರ ಒದಗಿಸಬೇಕು ಇದು ನಮ್ಮ ಹಕ್ಕೊತ್ತಾಯವಾಗಿದೆ ಎಂದು ಅವರು ಹೇಳಿದರು.

ಪಾರದರ್ಶಕ ತನಿಖೆಯಾಗಲಿ

ರೈತ ಮುಖಂಡ ಬಲ್ಲೂರು ರವಿಕುಮಾರ್ ಮಾತನಾಡಿ, ಸಂತ್ರಸ್ಥರಲ್ಲಿ ಒಬ್ಬ ಬಾಲಕಿ ಪರಿಶಿಷ್ಟ ಜಾತಿಗೆ ಸೇರಿರುವ ಕಾರಣ, ಶರಣರ ಮೇಲೆ ಅಸ್ಪೃಶ್ಯತಾ ನಿಷೇಧ ಕಾಯ್ದೆ ಅಡಿಯಲ್ಲೂ ಮೊಕದ್ದಮೆ ದಾಖಲಾಗಿದೆ. ಶಿವಮೂರ್ತಿ ಮುರುಘಾ ಶರಣರು ಪಲಾಯನ ಮಾಡಲು ಹೋಗಿ ಹಾವೇರಿ ಜಿಲ್ಲೆಯ ಬಂಕಾಪುರದ ಬಳಿ ಪೋಲೀಸರಿಗೆ ಸಿಕ್ಕಿಬಿದ್ದಿದ್ದಾರೆ. ಶ್ರೀಗಳು ಪ್ರಭಾವಿಗಳು ಎಂಬ ಕಾರಣಕ್ಕೆ ನೆನ್ನೆವರೆಗೂ ಯಾವುದೇ ಕಠಿಣ ಕ್ರಮ ತೆಗೆದುಕೊಂಡಿರಲಿಲ್ಲ. ಇದೀಗ ಶ್ರೀಗಳನ್ನು ಬಂಧಿಸಿ ತನಿಖೆಗೆ ಒಳಪಡಿಸಿರುವುದು ಸ್ವಾಗಾತಾರ್ಹ. ಪಾರದರ್ಶಕ ತನಿಖೆ ನಡೆಯಬೇಕು ಎಂದು ಒತ್ತಾಯಿಸಿದರು.

ಪ್ರಕರಣದಲ್ಲಿ ಶ್ರೀಗಳಾದಿಯಾಗಿ ಆರೋಪಿಗಳೆಲ್ಲರೂ ಅತ್ಯಂತ ಪ್ರಭಾವಿಗಳಾಗಿದ್ದು, ಪೋಲಿಸ್ ಇಲಾಖೆ ಇದುವರೆಗೆ ಆರೋಪಿತರ ಮೇಲೆ ಯಾವುದೇ ಕ್ರಮ ಕೈಗೊಂಡಿಲ್ಲ. ಬದಲಿಗೆ, ಸಂತ್ರಸ್ತೆಯರ ಖಾಸಗಿತನ ಕಾಪಾಡದೆ, ಅವರನ್ನು ಹೆದರಿಸುವ ಕೆಲಸ ನಡೆಯುತ್ತಿದೆ. ಮಠದ ಸಾವಿರಾರು ಭಕ್ತರನ್ನು ಕರೆದುಕೊಂಡು ಹೋಗಿ ಸ್ಥಳ ಮಹಜರು ಮಾಡಲಾಗಿದೆ. ಇದು ಸಂತ್ರಸ್ತೆಯರಿಗೆ ನ್ಯಾಯ ಸಿಗುವುದರ ಬಗ್ಗೆ ಅನುಮಾನ ಮೂಡಿಸುತ್ತದೆ ಎಂದು ಸಿಐಟಿಯು ಮುಖಂಡ ಆನಂದರಾಜ್ ಅಭಿಪ್ರಾಯಪಟ್ಟರು.

ವಕೀಲ ಗುಮ್ಮನೂರು ಮಲ್ಲಿಕಾರ್ಜುನ್, ಹೆಗ್ಗೆರೆ ರಂಗಪ್ಪ, ಜಬೀನಾ ಖಾನಂ, ಹುಚ್ಚವ್ವನಹಳ್ಳಿ ಮಂಜುನಾಥ್, ಶ್ರೀನಿವಾಸ್, ಬಿ. ದುಗ್ಗಪ್ಪ, ಟಿ. ರವಿ, ಆಟೋ ತಿಮ್ಮಣ್ಣ, ಎಲ್. ಜಯಪ್ಪ, ಗುಮ್ಮನೂರು ರಾಮಚಂದ್ರ, ಅಳಗವಾಡಿ ನಿಂಗರಾಜ್, ಮೇಗಳಗೆರೆ ಮಂಜುನಾಥ್, ಅಳಗವಾಡಿ ಬಾಬು ಇತರರಿದ್ದರು.

admin

admin

Leave a Reply

Your email address will not be published. Required fields are marked *

error: Content is protected !!