ಶ್ರೀಶೈಲಕ್ಕೆ ಅ.10ರಿಂದ 80 ದಿನಗಳ ಧಾರ್ಮಿಕ, ಸಾಮಾಜಿಕ, ಜನಜಾಗೃತಿ ಪಾದಯಾತ್ರೆ

ಸುದ್ದಿ360, ದಾವಣಗೆರೆ, ಜು.08: ಶ್ರೀಶೈಲ ಜಗದ್ಗುರುಗಳ ದ್ವಾದಶ ಪೀಠಾರೋಹಣ ಮಹೋತ್ಸವ ಹಾಗೂ ಜನ್ಮ ಸುವರ್ಣಮಹೋತ್ಸವದ ಅಂಗವಾಗಿ, ಸ್ವಸ್ಥ ಸಮಾಜದ ನಿರ್ಮಾಣಕ್ಕಾಗಿ ಹತ್ತು ಹಲವು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದ್ದು, ಈ ನಿಟ್ಟಿನಲ್ಲಿ ಇದೇ ಬರುವ ಅ.10ರಿಂದ 2023ರ ಜ.15ರವರೆಗೆ 80 ದಿನಗಳ ಕಾಲ ವಿವಿಧ ಧಾರ್ಮಿಕ, ಸಾಮಾಜಿಕ ಹಾಗೂ ಜನಜಾಗೃತಿ ಪಾದಯಾತ್ರೆ ಹಮ್ಮಿಕೊಂಡಿರುವುದಾಗಿ ಶ್ರೀಶೈಲ ಜಗದ್ಗುರು ಶ್ರೀ ಡಾ. ಚನ್ನಸಿದ್ಧರಾಮ ಪಂಡಿತಾರಾಧ್ಯ ಶಿವಾಚಾರ್ಯ ಮಹಾಸ್ವಾಮೀಜಿ ತಿಳಿಸಿದರು.

ನಗರದ ಪಿಬಿ ರಸ್ತೆಯಲ್ಲಿರುವ ಶ್ರೀಶೈಲ ಮಠದ ಶ್ರೀ ಜಗದ್ಗುರು ಪಂಚಾಚಾರ್ಯ ಮಂದಿರದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಈ ಕುರಿತು ಮಾಹಿತಿ ನೀಡಿದ ಶ್ರೀಗಳು, ಪೀಠಾರೋಹಣ ಮಹೋತ್ಸವದ ಅಂಗವಾಗಿ ಬೆಳಗಾವಿ ಜಿಲ್ಲೆ ಚಿಕ್ಕೋಡಿ ತಾಲೂಕಿನ ಶ್ರೀಕ್ಷೇತ್ರ ಯಡೂರದಿಂದ ಆಂಧ್ರಪ್ರದೇಶದ ಸುಕ್ಷೇತ್ರ ಶ್ರೀಶೈಲದವರೆಗೆ ಸುಮಾರು 600 ಕಿ.ಮೀ ಪಾದಯಾತ್ರೆ ನಡೆಸಲಾಗುವುದು.  ಈ ವೇಳೆ 3 ಹಂತದ ಸಮಾಜಮುಖಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದರು.

ಪಂಚ ಪೀಠದ ಸ್ವಾಮೀಜಿಗಳು ಎಂದರೆ ಕೇವಲ ಪಲ್ಲಕ್ಕಿಯಲ್ಲಿ ವಿಹರಿಸುವವರು ಎಂಬ ತಪ್ಪು ಕಲ್ಪನೆ ಬಹಳಷ್ಟು ಜನರಿಗಿದೆ. ಆದರೆ, ಪಂಚ ಪೀಠದ ಶ್ರೀಗಳು ನೂರಾರು ಮೈಲಿ ನಡೆದು ಹೋಗುವ ಮೂಲಕ ಶ್ರೀಕ್ಷೇತ್ರ ತಲುಪುತ್ತಾರೆ ಎಂಬುದನ್ನು ತಿಳಿಸಿ, ತಪ್ಪು ಕಲ್ಪನೆ ದೂರ ಮಾಡುವ ದೃಷ್ಟಿಯಿಂದ ಪಾದಯಾತ್ರೆ ಹಮ್ಮಿಕೊಳ್ಳಲಾಗಿದೆ. ಮತ್ತು ಪಾದಯಾತ್ರೆ ಹೋಗುವ ಭಕ್ತರಿಗೆ ಮಾರ್ಗಮಧ್ಯೆ ಎದುರಾಗುವ ಕಷ್ಟಗಳನ್ನು ಸ್ವತಃ ಅರಿತು, ಅವುಗಳ ಪರಿಹಾರಕ್ಕೆ ಸಮಗ್ರ ಯೋಜನೆ ರೂಪಿಸಲಾಗುವುದು ಎಂದು ಶ್ರೀ ಡಾ. ಚನ್ನಸಿದ್ಧರಾಮ ಪಂಡಿತಾರಾಧ್ಯ ಶಿವಾಚಾರ್ಯ ಮಹಾಸ್ವಾಮೀಜಿ ತಿಳಿಸಿದರು.

ದುಷ್ಚಟಗಳ ಭಿಕ್ಷೆ

ಪಾದಯಾತ್ರೆಯಲ್ಲಿ ಮೊದಲ ಹಂತವಾಗಿ ಯಾತ್ರೆ ಮಾರ್ಗದುದ್ದಕ್ಕೂ, ಸ್ವಸ್ಥ ಸಮಾಜ ನಿರ್ಮಿಸುವ ಉದ್ದೇಶದಿಂದ ಯುವಕರಿಂದ ದುಶ್ಚಟಗಳ ಭಿಕ್ಷೆ ಪಡೆಯಲಾಗುವುದು. ನಮ್ಮೊಂದಿಗೆ ಪಾದಯಾತ್ರೆಯಲ್ಲಿ ಭಾಗವಹಿಸುವ ವಿವಿಧ ಮಠಾಧೀಶರು, ಜೋಳಿಗೆ ಹಿಡಿದು ಯುವಕರ ಬಳಿ ಹೋಗಿ ದುಶ್ಚಟಗಳನ್ನು ಭಿಕ್ಷೆಯಾಗಿ ಪಡೆದು, ದುಶ್ಚಟ ಮುಕ್ತಿ ದೀಕ್ಷೆ ನೀಡುವರು.

ಇಪ್ಪತ್ತು ಸಾವಿರ ಜನರಿಗೆ ಲಿಂಗದೀಕ್ಷೆ

2ನೇ ಹಂತವಾಗಿ 20,000 ಜನರಿಗೆ ಲಿಂಗದೀಕ್ಷೆ ನೀಡುವ ಕಾರ್ಯಕ್ರಮವಿದೆ. 20 ಸಾವಿರ ಜನರಿಗೆ ಲಿಂಗಕಟ್ಟಿ ಶ್ರೀಶೈಲ ಲಿಂಗವನ್ನು ಮುಟ್ಟಬೇಕೆಂಬುದು ನಮ್ಮ ಉದ್ದೇಶ ಎಂದು ಶ್ರೀಗಳು ತಿಳಿಸಿದರು.

ರಸ್ತೆಯ  ಇಕ್ಕೆಲಗಳಲ್ಲಿ ಸಸಿ ನೆಡುವ ಕಾರ್ಯಕ್ರಮ

ಕಾರ್ಯಕ್ರಮದ 3ನೇ ಹಂತವಾಗಿ ಪಾದಯಾತ್ರೆ ಸಾಗುವ ವೇಳೆ ಮಾರ್ಗದುದ್ದಕ್ಕೂ ರಸ್ತೆಯ ಎರಡೂ ಬದಿ ಗಿಡ ನೆಡುವ ಮೂಲಕ ಪರಿಸರ ಕಾಳಜಿಯೊಂದಿಗೆ ಅರ್ಥಪೂರ್ಣವಾಗಿ ಆಚರಣೆ ನಡೆಯಲಿದೆ. ಈಗಾಗಲೇ ಜೂ.20ರಂದು ಅರಣ್ಯ ಸಚಿವ ಉಮೇಶ್ ಕತ್ತಿ ಗಿಡ ನೆಡುವ ಕಾರ್ಯಕ್ರಮಕ್ಕೆ ಚಾಲನೆ ನೀಡಿದ್ದಾರೆ. ಪ್ರತಿ ವರ್ಷ ಯುಗಾದಿ ಸಮಯದಲ್ಲಿ ಕರ್ನಾಟಕದಿಂದ ಲಕ್ಷಾಂತರ ಭಕ್ತರು ಶ್ರೀಶೈಲಕ್ಕೆ ಪಾದಯಾತ್ರೆ ಹೋಗುತ್ತಾರೆ. ಅಂತಹ ಭಕ್ತರು ಮುಂಬರುವ ದಿನಗಳಲ್ಲಿ ಬೃಹತ್ ಮರಗಳ ನೆರಳಿನಲ್ಲಿ ನಡೆದು ಹೋಗಲಿ ಎಂಬುದು ಸಹ ಗಿಡ ನೆಡುವ ಕಾರ್ಯಕ್ರಮದ ಉದ್ದೇಶವಾಗಿದೆ ಎಂದು ಶ್ರೀಗಳು ಹೇಳಿದರು.

ಇದೀಗ ಕೈಗೂಡುತ್ತಿರುವ ಶ್ರೀಕ್ಷೇತ್ರ ಅಭಿವೃದ್ಧಿ ಯೋಜನೆ

ಪ್ರಸ್ತುತ ಆಂಧ್ರಪ್ರದೇಶ ಸರಕಾರ ಶ್ರೀಪೀಠಕ್ಕೆ 10 ಎಕರೆ ಭೂಮಿ ಮಂಜೂರು ಮಾಡಿದ್ದು, ಈ ಪೈಕಿ 5 ಎಕರೆಯನ್ನು ಪೀಠಕ್ಕೆ ಹಸ್ತಾಂತರಿಸಿದೆ. ಈ ಜಾಗದಲ್ಲಿ, ಭಕ್ತರು ತರುವ ಶ್ರೀ ಮಲ್ಲಿಕಾರ್ಜುನ ಸ್ವಾಮಿಯ ಪ್ರತೀಕವಾಗಿರುವ ಕಂಬಿಗಳನ್ನು ಇರಿಸಲು ಬೃಹತ್ ಕಂಬಿ ಮಂಟಪ, 500 ಕೋಣೆಗಳ ಯಾತ್ರಿ ನಿವಾಸ, 100 ಹಾಸಿಗಗಳ ಆಸ್ಪತ್ರೆ ಹಾಗೂ ವಸತಿ ಶಾಲೆ ನಿರ್ಮಿಸಲಾಗುತ್ತಿದೆ. ಶ್ರಾವಣ ಮಾಸದಲ್ಲಿ ಕಂಬಿ ಮಂಟಪ ಹಾಗೂ ಯಾತ್ರಿ ನಿವಾಸ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಲಾಗುವುದು. ಹೀಗೆ ಶ್ರೀಶೈಲ ಸುಕ್ಷೇತ್ರ ಅಭಿವೃದ್ಧಿಯ ಹಲವು ವರ್ಷಗಳ ಕನಸು ಈಗ ಕೈಗೂಡುತ್ತಿದೆ ಎಂದು ಶ್ರೀಗಳು ಮಾಹಿತಿ ನೀಡಿದರು.

ಈ ಸಂದರ್ಭದಲ್ಲಿ ಆವರಗೊಳ್ಳ ಪುರವರ್ಗ ಮಠದ ಶ್ರೀ ಓಂಕಾರ ಶಿವಾಚಾರ್ಯ ಸ್ವಾಮೀಜಿ, ಅಥಣಿ ವೀರಣ್ಣ, ದೇವರಮನೆ ಶಿವಕುಮಾರ್, ಶ್ರೀನಿವಾಸ ದಾಸಕರಿಯಪ್ಪ, ಮುರುಗೇಶ್, ಅಶೋಕ್, ಪರಮೇಶ್ವರಯ್ಯ, ಹಾಲಸ್ವಾಮಿ, ಪ್ರಶಾಂತ್, ಪಾಟೀಲ್ ಇತರರಿದ್ದರು.

admin

admin

Leave a Reply

Your email address will not be published. Required fields are marked *

error: Content is protected !!