ಸುದ್ದಿ360, ದಾವಣಗೆರೆ, ಜು.10: ಸಾವಿರಾರು ಭಕ್ತಗಣದ ಸಮ್ಮುಖದಲ್ಲಿ ಶ್ರೀ ಕೇದಾರ ಜಗದ್ಗುರು ಶ್ರೀ ಭೀಮಾಶಂಕರಲಿಂಗ ಶಿವಾಚಾರ್ಯ ಸ್ವಾಮೀಜಿಯವರ ಸಂಗೀತಯುಕ್ತ ಇಷ್ಟಲಿಂಗ ಮಹಾಪೂಜೆ ನಗರದ ತ್ರಿಶೂಲ್ ಕಲಾಭವನದಲ್ಲಿ ಭಾನುವಾರ ಸಾಂಗವಾಗಿ ನೆರವೇರಿತು. ನೆರೆದ ಭಕ್ತಗಣ ಶ್ರೀಗಳು ನೆರವೇರಿಸಿದ ಮಹಾಪೂಜೆಯಲ್ಲಿ ಭಕ್ತಪರವಶರಾಗಿ ದೈವಾನುಗ್ರಹಕ್ಕೆ ಪಾತ್ರರಾದರು.
ತಪೋಕ್ಷೇತ್ರ ಕಣ್ವಕುಪ್ಪೆ ಗವಿಮಠದ ಶ್ರೀ ನಾಲ್ವಡಿ ಶಾಂತಲಿಂಗ ಶಿವಾಚಾರ್ಯ ಸ್ವಾಮೀಜಿಯವರು ಪೂಜಾ ಕಾರ್ಯಕ್ರಮದ ನೇತೃತ್ವ ವಹಿಸಿದ್ದರು. ಬೆಳಗ್ಗೆ 9 ಗಂಟೆಗೆ ಆರಂಭವಾದ ಇಷ್ಟಲಿಂಗ ಮಹಾಪೂಜೆ ಮಧ್ಯಾಹ್ನ 1.30ರ ಸುಮಾರಿಗೆ ಸಂಪನ್ನಗೊಂಡಿತು.
ಇಷ್ಟಲಿಂಗ ಪೂಜೆಯ ನಂತರ ಸಂದೇಶ ನೀಡಿದ ಶ್ರೀಗಳು, ‘ಎಲ್ಲ ಭಕ್ತಿರಿಗೂ ಇಷ್ಟಲಿಂಗ ಮಹಾಪೂಜೆಯ ತೀರ್ಥ ಪ್ರಸಾದ ವಿನಿಯೋಗ ಮಾಡಲಾಗುತ್ತದೆ. ಈ ತೀರ್ಥವನ್ನು ಎಲ್ಲರೂ ಸೇವಿಸಬೇಕು. ಇದು ಶ್ರೇಷ್ಠ ತೀರ್ಥ. ಇದನ್ನು ಸೇವಿಸಿದರೆ ಕೊರೊನಾ ನಿಮ್ಮ ಬಳಿ ಸುಳಿಯುವುದಿಲ್ಲ. ಸರಕಾರ ಕೊರೊನಾ ಸೋಂಕು ತಡೆಯಲು ನೀಡುವ ಲಸಿಕೆ ಡೋಸ್‌ಗಿಂತಲೂ ಈ ಕೇದಾರ ಲಿಂಗ ತೀರ್ಥ ಹತ್ತುಪಟ್ಟು ಪರಿಣಾಮಕಾರಿ ಮತ್ತು ಶಕ್ತಿಶಾಲಿ’ ಎಂದು ಕೇದಾರ ಶ್ರೀಗಳು ತಿಳಿಸಿದರು.
ಸಂಗೀತಯುಕ್ತ ಇಷ್ಟಲಿಂಗ ಪೂಜೆ ಕಾರ್ಯಕ್ರಮದಲ್ಲಿ 2000ಕ್ಕೂ ಅಧಿಕ ಭಕ್ತರು ಪಾಲ್ಗೊಂಡಿದ್ದರು. ಮಹಾರಾಷ್ಟ್ರದ ಕೇದಾರೇಶ್ವರ ಸಂಗೀತ ಕಲಾಬಳಗದ ಕಲಾವಿದರು ಸತತ ನಾಲ್ಕು ಗಂಟೆಗೂ ಹೆಚ್ಚು ಕಾಲ ಗಾಯನ ಸೇವೆ ಸಲ್ಲಿಸಿದರು. ಈ ವೇಳೆ ಕೇದಾರ ಜಗದ್ಗುರುಗಳ ಪೂಜಾ ಸೇವಾ ಸಮಿತಿ ಸದಸ್ಯ ಕೆ.ಎಂ. ಸುರೇಶ್, ಅಜ್ಜಂಪುರ ಶೆಟ್ರು ಮೃತ್ಯುಂಜಯ, ಕೆ.ಆರ್. ಶಿವಕುಮಾರ್, ಎನ್. ಮಲ್ಲನಗೌಡ, ಶಿವಯೋಗಿ ಕಂಬಾಳಿಮಠ, ವಿಧಾನ ಪರಿಷತ್ ಮಾಜಿ ಮುಖ್ಯ ಸಚೇತಕ ಡಾ.ಎ.ಎಚ್. ಶಿವಯೋಗಿಸ್ವಾಮಿ, ರಾಜಶೇಖರ್ ನಾಗಪ್ಪ, ಕಡೇಕೊಪ್ಪ ನಾಗಭೂಷಣ್, ಟಿ.ಎಚ್.ಎಂ. ವೀರೇಶ್, ಅರುಣ್ ಮುದ್ದಳ್ಳಿ, ಮಳಲಕೆರೆ ಗುರುಮೂರ್ತಿ, ಕೆ.ಶಿವಪ್ಪ, ಸಚಿನ್ ಗೊಳಸಂಗಿ, ಮಗಾನಳ್ಳಿ ಗುರು, ಕೆ.ಜಿ. ವಾಗೀಶ, ಕಲ್ಲೇಶ್, ಗುರು ಸೇವಾ ಬಳಗದ ಸದಸ್ಯರು ಇದ್ದರು.
ದೇಹವನ್ನು ಸತ್ಕಾರ್ಯಗಳಲ್ಲಿ ತೊಡಗಿಸಿ
ದುಷ್ಟ ದುರ್ಯೋಧನನ ರೀತಿ ದೇಹವನ್ನು ಪಾಪ ಕಾರ್ಯಗಳಿಗೆ ಬಳಸಿಕೊಳ್ಳದೆ ಸತ್ಕಾರ್ಯಗಳಿಗೆ ಬಳಸಿಕೊಳ್ಳಿ ಎಂದು ಕೇದಾರ ಶ್ರೀಗಳು ಉಪದೇಶ ನೀಡಿದರು. ಇಂದು ಮನುಷ್ಯ ತನ್ನ ದೇಹವನ್ನು ದುಷ್ಟ ಕಾರ್ಯಗಳಿಗೆ ಬಳಸಿಕೊಂಡು ಅದನ್ನು ಅಪವಿತ್ರ ಮಾಡಿಕೊಂಡಿದ್ದಾನೆ. ಕೈಗಳು ಮತ್ತೊಬ್ಬರ ಕೆಡುಕಿಗೆ ಬಳಕೆಯಾದರೆ, ಕಿವಿಗಳು ಸದ್‌ವಾಖ್ಯದ ಬದಲು ಕೇವಲ ದುಷ್ಟವಾಖ್ಯ ಕೇಳುತ್ತಿವೆ. ಸುಂದರ ಸೃಷ್ಟಿಯ ಸೊಬಗು ಸವಿಯಲು ನೀಡಿರುವ ಕಣ್ಣುಗಳ ಮೂಲಕ ಅಪವಿತ್ರ ಭಾವನೆಯಿಂದ ನೋಡುತ್ತಿದ್ದೇವೆ. ಹೊಟ್ಟೆಯ ತುಂಬಾ ಅನ್ಯಾಯದ ಗಳಿಕೆಯೇ ತುಂಬಿದೆ. ಪಾದಗಳು ಕೇವಲ ಮತ್ತೊಬ್ಬರಿಗೆ ಕಷ್ಟಕೊಡಲು ಓಡಾಡುತ್ತಿವೆ. ತಲೆಯ ತುಂಬಾ ಗರ್ವ, ಅಹಂಕಾರ, ದುರಾಲೋಚನೆಗಳು ತುಂಬಿವೆ. ಇದರಿಂದ ಹೊರಬಂದು ದೇಹವನ್ನು ಸತ್ಕಾರ್ಯಗಳಿಗೆ ತೊಡಗಿಸಿಕೊಳ್ಳಿ ಎಂದು ಕರೆ ನೀಡಿದರು.