ಸುದ್ದಿ360 ದಾವಣಗೆರೆ, ಆ.4: ನಗರದ ಚರ್ಚ್ ರಸ್ತೆಯಲ್ಲಿರುವ ಸಂತ ಪೌಲರ ವಿದ್ಯಾಸಂಸ್ಥೆಯ ಅಮೃತ ಮಹೋತ್ಸವದ ಅಂಗವಾಗಿ ಪರಿಸರ ಸ್ವಚ್ಛತೆ ಹಾಗೂ ಸಂರಕ್ಷಣೆ ಕುರಿತು ಜಾಗೃತಿ ಮೂಡಿಸುವ ಉದ್ದೇಶದಿಂದ ಆ.6ರಂದು ಬೆಳಗ್ಗೆ 7.30ಕ್ಕೆ ಶಾಲೆ ಆವರಣದಿಂದ ಪರಿಸರ ನಡಿಗೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ
ಈ ಕುರಿತು ಶಾಲೆಯ ಹಳೇ ವಿದ್ಯಾರ್ಥಿಗಳ ಸಂಘದ ಅಧ್ಯಕ್ಷ ದಿನೇಶ್ ಕೆ. ಶೆಟ್ಟಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು. ಸ್ವಾತಂತ್ರ‍್ಯ ಪೂರ್ವದಲ್ಲಿ (1946) ಸ್ಥಾಪನೆಯಾದ ಸಂತ ಪೌಲರ ವಿದ್ಯಾಸಂಸ್ಥೆ 2021ರಲ್ಲೇ 75 ವರ್ಷಗಳನ್ನು ಪೂರೈಸಿದೆ. ಆದರೆ, ಕೋವಿಡ್ ಕಾರಣದಿಂದಾಗಿ ಕಳೆದ ವರ್ಷ ಅಮೃತ ಮಹೋತ್ಸವ ಆಚರಿಸಲು ಆಗಿರಲಿಲ್ಲ ಎಂದು ಹೇಳಿದರು.
ಪರಿಸರ ನಡಿಗೆ ಜಾಥಾಗೆ ಅಂದು ಬೆಳಗ್ಗೆ 7.30ಕ್ಕೆ ಜಿಲ್ಲಾ ಪೊಲೀಸ್ ವರಿಷ್ಠಾಕಾರಿ ಸಿ.ಬಿ. ರಿಷ್ಯಂತ್ ಚಾಲನೆ ನೀಡುವರು. ಬಳಿಕ ಚರ್ಚ್ ರಸ್ತೆ ಮೂಲಕ ಡಾ. ಮೋದಿ ವೃತ್ತ, ಚಿಗಟೇರಿ ಜಿಲ್ಲಾಸ್ಪತ್ರೆ ಎದುರಿನ ರಸ್ತೆ ಮೂಲಕ ಹರಳೆಣ್ಣೆ ಕೊಟ್ಟೂರು ಬಸಪ್ಪ ವೃತ್ತ (ರಾಮ್ ಆಂಡ್ ಕೋ ವೃತ್ತ) ತಲುಪಿ, ಪುನಃ ಚರ್ಚ್ ರಸ್ತೆ ಮೂಲಕ ಶಾಲೆ ಆವರಣ ತಲುಪಲಿದೆ ಎಂದು ತಿಳಿಸಿದರು.
ಅಮೃತ ಮಹೋತ್ಸವ ನಿಮಿತ್ತ ಕಳೆದ ಎರಡು ತಿಂಗಳುಗಳಿಂದ ಆರೋಗ್ಯ ತಪಾಸಣೆ ಶಿಬಿರ, ಸಾಂಸ್ಕೃತಿಕ ಕಾರ್ಯಕ್ರಮ ಸೇರಿ ವಿವಿಧ ಚಟುವಟಿಕೆಗಳನ್ನು ನಡೆಸಿಕೊಂಡು ಬರಲಾಗಿದೆ. ನಗರದ ಅತ್ಯಂತ ಹಳೆಯ ವಿದ್ಯಾಸಂಸ್ಥೆ ಎಂಬ ಖ್ಯಾತಿ ಗಳಿಸಿರುವ ಸಂತ ಪೌಲರ ಶಾಲೆಯಲ್ಲಿ ಇದುವರೆಗೆ 2 ಲಕ್ಷಕ್ಕೂ ಹೆಚ್ಚು ವಿದ್ಯಾರ್ಥಿಗಳು ಓದಿದ್ದಾರೆ. ಬಹಳಷ್ಟು ಮಂದಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡುವ ಜತೆಗೆ, ರಾಜಕೀಯ, ಸರಕಾರಿ ಹಾಗೂ ಖಾಸಗಿ ವಲಯಗಳಲ್ಲಿ ಉನ್ನತ ಹುದ್ದೆಗಳನ್ನು ಅಲಂಕರಿಸಿರುವುದಾಗಿ ತಿಳಿಸಿದ ಅವರು, ಶಾಲೆಯ ಎಲ್ಲಾ ಹಳೇ ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿ ಯಶಸ್ವಿಗೊಳಿಸುವಂತೆ ಕೋರಿದರು.
ಸುದ್ದಿಗೋಷ್ಠಿಯಲ್ಲಿ ಸಂಸ್ಥೆ ಶಿಕ್ಷಣ ಸಲಹೆಗಾರರಾದ ಸಿಸ್ಟರ್ ಅಲ್ಬೀನಾ, ಮುಖ್ಯ ಶಿಕ್ಷಕಿಯರಾದ ಸಿಸ್ಟರ್ ಆ್ಯನೀಸ್, ಸಿಸ್ಟರ್ ಸಮಂತಾ, ಸಂಘದ ಕಾರ್ಯದರ್ಶಿ ಜಯಮ್ಮ, ಖಜಾಂಚಿ ಜೆಸ್ಸಿ, ಹಿರಿಯ ಶಿಕ್ಷಕಿಯರಾದ ಎಂ.ಕೆ. ಮಂಜುಳಾ, ರಾಧಾ ಮಾಲತಿ ಇದ್ದರು.