ಸುದ್ದಿ360 ದಾವಣಗೆರೆ, ಜೂನ್ 28: ಜಿಲ್ಲಾ ಉಸ್ತುವಾರಿ ಸಚಿವರೆಂದರೆ ಕೇಳಬೇಕೆ..? ಅವರು ಜಿಲ್ಲೆಗೆ ಭೇಟಿ ನೀಡಿದರೆಂದರೆ ಬಂದಾಗಿನಿಂದ ಹೊರಡುವವರೆಗೂ ಸಾಕಷ್ಟು ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳುವ ಅನಿವಾರ್ಯತೆ.
ದಾವಣಗೆರೆ ಜಿಲ್ಲಾ ಉಸ್ತುವಾರಿ ಸಚಿವರಾದ ಬಿ.ಎ. ಬಸವರಾಜ (ಭೈರತಿ)ಯವರ ಜೂ.28ರ ಜಿಲ್ಲಾ ಪ್ರವಾಸದಲ್ಲಿ ಹೀಗೆಯೇ ಸಾಕಷ್ಟು ಕಾರ್ಯಕ್ರಮಗಳು ಸೇರಿದ್ದವು.
ಇದೇ ವೇಳೆ ಬೆಜೆಪಿ ಪಕ್ಷದ ಹಿರಿಯ ಮುಖಂಡ ಹಾಗೂ ಯಶವಂತರಾವ್ ಜಾಧವ್ ರವರ ಹುಟ್ಟುಹಬ್ಬದ ನಿಮಿತ್ತ ನಗರದದ ದೇವರಾಜು ಅರಸು ಬಡಾವಣೆಯ ಅಂಧ ಮಕ್ಕಳ ಶಾಲೆಯಲ್ಲಿ ಜನ್ಮದಿನಾಚರಣೆ ಕಾರ್ಯಕ್ರಮದಲ್ಲೂ ಸಚಿವರ ಪಾಲ್ಗೊಳ್ಳುವಿಕೆ ಸ್ಥಾನ ಪಡದಿತ್ತು.
ಕಾರ್ಯಕ್ರಮಕ್ಕೆ ಬೆಳಗ್ಗೆ 11ರಿಂದಲೇ ಶಾಮಿಯಾನದಡಿ ಕುಳಿತ ಶಾಲೆಯ ಅಂದ ಮಕ್ಕಳು ಮತ್ತು ಪಕ್ಷದ ಕಾರ್ಯಕರ್ತರು ತಮ್ಮ ನೆಚ್ಚಿನ ಸಚಿವ ಭೈರತಿ ಬಸವರಾಜರ ಬರುವಿಕೆಗಾಗಿ ಕಾಯುತ್ತಿದ್ದರು. ಆಯೋಜಕರ ಸಮಯಪ್ರಜ್ಞೆಯಿಂದ ಶಾಲೆಯ ಓರ್ವ ಅಂಧ ಮಗುವನ್ನು ಕರೆದು ಹಾಡಲು ಹೇಳಿದರು. ಮನೋಜ್ಞವಾಗಿ ಹಾಡಿ ನೆರೆದವರ ಹೃನ್ಮನ ತಣಿಸಿದ ಮೂರನೇ ತರಗತಿ ವಿದ್ಯಾರ್ಥಿನಿ ಶೈಲಜಾ ತನ್ನ ಸಂಗೀತಧಾರೆಯಿಂದ ದೇವಿ ಶಾರದೆಯನ್ನು ಸ್ತುತಿಸಿದಳು ನಂತರ ಹಾಡಲು ಬಂದ ಮಕ್ಕಳು ಶ್ರೇಯಾ, ವರ್ಷಿಣಿ, ಧನುಷ್ ಹೀಗೆ ಸಾಕಷ್ಟು ಮಕ್ಕಳು ಹಾಡುವುದರ ಮೂಲಕ ಸಂಗೀತ ರಸದೌತಣವನ್ನು ನೆರೆದವರಿಗೆ ನೀಡಿದರೆ, ಶಿಕ್ಷಕ ಬಸವರಾಜ್ ಮಾಗಡಿ ಕ್ರಿಕೆಟ್ ಕಾಮೆಂಟ್ರಿಯನ್ನು ಮಾಡುವುದರ ಮೂಲಕ ರಂಜಿಸಿದರು.
ಹೀಗೆ ಮುಂದುವರೆದ ಜನ್ಮದಿನಾಚರಣೆ ಕಾರ್ಯಕ್ರಮದಲ್ಲಿಸಚಿವರ ಬರುವಿಕೆ ತಡವಾದದ್ದು ಮಕ್ಕಳ ಹಾಡು ಕೇಳಲು ಒಂದು ಉತ್ತಮ ಅವಕಾಶ ನೆರೆದವರಿಗೆ ಸಿಕ್ಕರೆ, ಮಕ್ಕಳಿಗೂ ಒಂದು ಉತ್ತಮ ವೇದಿಕೆ ಸಿಕ್ಕಂತಾಯಿತು. ಮಧ್ಯಾಹ್ನ 2 ಗಂಟೆಯಾದರೂ ಕಾಯುತ್ತಲಿದ್ದ ಆಯೋಜಕರಿಗೆ ಸಚಿವರ ಗೈರು ನಿರಾಸೆಯುಂಟು ಮಾಡಿತು.
ಸುಮಾರು ಎರಡು ತಾಸು ನಡೆದ ಮಕ್ಕಳ ರಸಮಂಜರಿ ಕಾರ್ಯಕ್ರಮಕ್ಕೆ ಯಶವಂತರಾವ್ ಜಾದವ್, ಉಪಮೇಯರ್ ಗಾಯತ್ರಿ ಖಂಡೋಜಿರಾವ್, ರಾಜನಹಳ್ಳಿ ಶಿವಕುಮಾರ್, ಪಿಸಿ ಶ್ರೀನಿವಾಸ್, ಗೋಪಾಲ್ ರಾವ್ ಮಾನೆ, ಶಾಂತಕುಮಾರ್ ಸೋಗಿ, ಶಂಕರ್ ಬಿರಾದರ್, ಸಂದೀಪ್ ಜೈನ್, ಹನುಮಂತರಾವ್ ಪವಾರ್, ಟಿಂಕರ್ ಮಂಜಣ್ಞ, ಎಲ್ ಡಿ. ಗೋಣಪ್ಪ ಸೇರಿದಂತೆ ಸಾಕಷ್ಟು ಸಂಖ್ಯೆಯಲ್ಲಿ ಸೇರಿದ್ದ ಪಕ್ಷದ ಕಾರ್ಯಕರ್ತರು ತಲೆದೂಗಿದರು.