ಸುದ್ದಿ360, ದಾವಣಗೆರೆ, ಜು.16: ಶಿಕ್ಷಕನಾದವನಿಗೆ ಸಮಾಜ ಅವನ ಸೇವೆಯನ್ನು ಗುರುತಿಸಿ ಸನ್ಮಾನಿಸಿದರೆ ಅದರಷ್ಟು ಹೆಮ್ಮೆ ತರುವ ವಿಚಾರ ಇನ್ನೊಂದಿಲ್ಲ. ಸನ್ಮಾನ ಎಂಬುದು ಶಿಕ್ಷಕರ ಪಾಲಿಗೆ ದೊಡ್ಡ ಬಹುಮಾನದಂತೆ ಎಂದು ಶಾಮನೂರು ಸರ್ಕಾರಿ ಸಂಯುಕ್ತ ಪ್ರೌಢಶಾಲೆ ಮುಖ್ಯಶಿಕ್ಷಕ ದೇವೇಂದ್ರಪ್ಪ ಹೇಳಿದರು.
ದಾವಣಗೆರೆ ಜಿಲ್ಲಾ ಸಂಸ್ಕಾರ ಭಾರತಿ ವತಿಯಿಂದ ಗುರುಪೂರ್ಣಿಮೆ ಅಂಗವಾಗಿ ಹಮ್ಮಿಕೊಂಡಿದ್ದ ಗುರುವಂದನಾ ಕಾರ್ಯಕ್ರಮದಲ್ಲಿ ಸನ್ಮಾನ ಸ್ವೀಕರಿಸಿ ಅವರು ಮಾತನಾಡಿದರು.
ಶಿಕ್ಷಕರನ್ನು ಗೌರವಿಸಿದರೆ, ಮಕ್ಕಳ ಸರ್ವಾಂಗೀಣ ಅಭಿವೃದ್ಧಿಗೆ ಪ್ರೋತ್ಸಾಹದಾಯಕವಾಗುತ್ತದೆ. ತನ್ನನ್ನು ಪ್ರೀತಿಸುವ ವ್ಯಕ್ತಿಗಳಿದ್ದಾರೆ ಎಂದರೆ ಶಿಕ್ಷಕರಿಗೆ ನವಚೈತನ್ಯ ಮೂಡುತ್ತದೆ. ಅಕ್ಷರ ಜ್ಞಾನ, ಮೌಲ್ಯಗಳನ್ನು ನೀಡಿದ ಶಿಕ್ಷಕರನ್ನು ಗೌರವಿಸಿ, ಪ್ರೀತಿಸಿ, ಆನಂದಿಸಿ ಎಂದು ಕರೆ ನೀಡಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಸಂಸ್ಕಾರ ಭಾರತಿ ಜಿಲ್ಲಾಧ್ಯಕ್ಷ ಎ. ಮಹಾಲಿಂಗಪ್ಪ ಮಾತನಾಡಿ, ಸಂಸ್ಕಾರ ಭಾರತಿಯ ವರ್ಷದ ಮೊದಲ ಕಾರ್ಯಕ್ರಮ ಇದಾಗಿದ್ದು, ನಮ್ಮ ಸಂಸ್ಕೃತಿ, ಸಂಸ್ಕಾರಗಳನ್ನು ಮುಂದಿನ ಪೀಳಿಗೆಗೆ ಪರಿಚಯಿಸುವ ಕೆಲಸವನ್ನು ಸಂಸ್ಕಾರ ಭಾರತಿ ಮಾಡುತ್ತಿದೆ. ಎಲೆಮರೆ ಕಾಯಿಗಳ ಜೊತೆ ಕಾರ್ಯನಿರ್ವಹಿಸುತ್ತಿರುವ ಎಲ್ಲಾ ಕ್ಷೇತ್ರಗಳಲ್ಲಿರುವ ಸಾಧಕರನ್ನು ಗುರ್ತಿಸಿ ಗೌರವಿಸಲಾಗುವುದು ಎಂದು ತಿಳಿಸಿದರು.
ವೇದಿಕೆಯಲ್ಲಿ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕ ನಾಗರಾಜಪ್ಪ, ಸಂಸ್ಕಾರ ಭಾರತಿ ಜಿಲ್ಲಾ ಖಜಾಂಚಿ ಬಿ. ದಿಳ್ಯಪ್ಪ, ಮಹಿಳಾ ಕಾರ್ಯದರ್ಶಿ ದೇವಿಕ ಸುನೀಲ್, ಸಾಹಿತ್ಯ ವಿಭಾಗದ ಸದಸ್ಯೆ ಸತ್ಯಭಾಮಾ ಮಂಜುನಾಥ್ ಉಪಸ್ಥಿತರಿದ್ದರು.
ನಿವೃತ್ತ ವಿಜ್ಞಾನ ವಿಷಯ ಪರಿವೀಕ್ಷಕರಾದ ಕೆ.ಬಿ. ರಾಮಚಂದ್ರಪ್ಪ, ಶಿಕ್ಷಕರಾದ ಪಂಚಾಕ್ಷರಯ್ಯ, ಜೆ.ಎನ್. ನಾಗಪ್ಪ, ಬಿ.ಪಿ. ನಾಗೇಶ್, ಮಾಲಿನಿ, ಡಿ. ವಿಜಯ, ಎಲ್. ಸವಿತ, ಆಶಾ ಡಿ. ಪಾಟೀಲ್ ಹಾಗೂ ಸಂಸ್ಕಾರ ಭಾರತಿ ಹಿರಿಯ ಸದಸ್ಯರುಗಳಾದ ಪಿ. ತಿಪ್ಪಣ್ಣ, ಗುಡ್ಡಪ್ಪ, ಜಿ. ಪರಮೇಶ್ವರಪ್ಪ, ಎಂ.ಎಸ್. ಅಗಡಿ, ನಾಗಭೂಷಣ್ ಹಾಗೂ ಸಿ.ಎಸ್. ಸಂಗಾ ಹಾಜರಿದ್ದರು. ಕಾರ್ಯಕ್ರಮದ ಕೊನೆಯಲ್ಲಿ ವಿದ್ಯಾರ್ಥಿಗಳು ಗುರುಗಳಿಗೆ ಪುಷ್ಪವೃಷ್ಟಿ ಮಾಡಿ, ನಮಸ್ಕರಿಸಿ, ಆಶೀರ್ವಾದ ಪಡೆದರು. ಕಾರ್ಯಕ್ರಮದ ನಿರೂಪಣೆಯನ್ನು ಶಾಲೆಯ ಶಿಕ್ಷಕಿ ಹಾಗೂ ಸಂಸ್ಕಾರ ಭಾರತಿ ಸದಸ್ಯೆ ಐ.ಕೆ. ಉಮಾದೇವಿ ನಿರ್ವಹಿಸಿದರು.