ಸರಕಾರಿ ಶಾಲಾ ಕಟ್ಟಡ ನೆಲಸಮ – ಲಕ್ಷಾಂತರ ರೂ. ಗುಳುಂ

ತಪ್ಪಿತಸ್ಥರನ್ನು ಪತ್ತೆ ಹಚ್ಚಿ ಕ್ರಮಕೈಗೊಳ್ಳಲು ಗ್ರಾಮಸ್ಥರ ಆಗ್ರಹ

ಸುದ್ದಿ360 ದಾವಣಗೆರೆ.ಜು.04: ಇಲಾಖೆ ಗಮನಕ್ಕೆ ತಾರದೆ ಸರಕಾರಿ ಶಾಲೆಯ ಹಳೆಕಟ್ಟಡ ನೆಲಸಮಗೊಳಿಸಿ, ಅದರಲ್ಲಿದ್ದ ಬೆಲೆಬಾಳುವ ವಸ್ತುಗಳನ್ನು ಹಿಂದಿನ ಮುಖ್ಯ ಶಿಕ್ಷಕ ಹಾಗೂ ಗ್ರಾಪಂ ಸದಸ್ಯರು ಮಾರಿಕೊಂಡಿರುವುದಾಗಿ ತಾಲೂಕಿನ ಲೋಕಿಕೆರೆ ಗ್ರಾಮಸ್ಥರು ಆರೋಪಿಸಿದರು.

ಈ ಕುರಿತು ನಗರದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಗ್ರಾಮದ ನಿವಾಸಿ ಪುರಂದರ ಲೋಕಿಕೆರೆ ಮಾತನಾಡಿ, ಗ್ರಾಮದಲ್ಲಿನ ಶ್ರೀ ಮಾರುತಿ ಸರಕಾರಿ ಪ್ರೌಢಶಾಲೆಯ ಹಳೆಯ ಕಟ್ಟಡವನ್ನು ಶಿಕ್ಷಣ ಇಲಾಖೆ ಗಮನಕ್ಕೆ ತಾರದೇ ನೆಲಸಮಗೊಳಿಸಲಾಗಿದೆ. ಮತ್ತು ಅದರಲ್ಲಿದ್ದ ಬೆಲೆಬಾಳುವ ವಸ್ತುಗಳನ್ನು ವಿಲೇಮಾಡುವಲ್ಲಿ ಲಕ್ಷಾಂತರ ರೂ. ಅವ್ಯವಹಾರ ನಡೆದಿದೆ ಎಂದು ಆರೋಪಿಸಿರು.

ಗ್ರಾಮಸ್ಥರಿಗೂ ಮಾಹಿತಿ ಇಲ್ಲ

ಪ್ರೌಢ ಶಾಲೆಗೆ ಈಗ ಹೊಸ ಕಟ್ಟಡವಿದ್ದು, 6 ವರ್ಷಗಳಿಂದ ಹಳೆಯ ಕಟ್ಟಡ ಬಳಸುತ್ತಿರಲಿಲ್ಲ. ಕಳೆದ ಬೇಸಿಗೆ ರಜೆ ವೇಳೆ ಹಿಂದಿನ ಮುಖ್ಯ ಶಿಕ್ಷಕ ಹಾಗೂ ಗ್ರಾಪಂ ಸದಸ್ಯರು ತಮ್ಮ ವ್ಯಾಪ್ತಿಗೆ ಬಾರದಿದ್ದರೂ ಸಹ ಶಿಥಿಲಗೊಂಡಿದ್ದ 6 ಕೊಠಡಿಗಳ ಕಟ್ಟಡ ನೆಲಸಮ ಮಾಡಿಸಿ, ಮರ-ಮುಟ್ಟು, ಕಲ್ಲುಗಳನ್ನು ಮಾರಿದ್ದಾರೆ. ಇದು ಗ್ರಾಮಸ್ಥರ ಗಮನಕ್ಕೂ ತಂದಿಲ್ಲ. ಕಟ್ಟಡ ಕೆಡವಿ, ವಸ್ತುಗಳನ್ನು ಮಾರಾಟ ಮಾಡುವ ಮುನ್ನ ಡಂಗೂರ ಸಾರಿಲ್ಲ, ಕರಪತ್ರ ಹೊರಡಿಸಿಲ್ಲ, ಟೆಂಡರ್ ಕೂಡ ಕರೆದಿಲ್ಲ ಎಂದು ಆರೋಪಿಸಿದರು.

ಹಳೇ ಕಟ್ಟಡ ನೆಲಸಮ ಮಾಡಿದಾಗ 30 ಲೋಡ್ ಸೈಸುಗಲ್ಲು, 50-60 ಚದರ ಕಡಪ ಕಲ್ಲು, 8 ಸೆಟ್ ಬಾಗಿಲು ಮತ್ತು ಕದ, 34 ಸೆಟ್ ಕಿಟಕಿ, 20 ಅಡಿಯ 180 ಮರದ ತೀರುಗಳು, 180 ಸೆಟ್ ಅಡ್ಡ ಪಟ್ಟಿ, 10,000 ಕೆಂಪುಹೆಂಚು, 6 ಲೋಡ್ ಚಪ್ಪಡಿ ಕಲ್ಲುಗಳು ಸಿಕ್ಕಿವೆ. ಅವುಗಳ ಅಂದಾಜು ಮೌಲ್ಯ 10ರಿಂದ 15 ಲಕ್ಷ ರೂ. ಆಗುತ್ತದೆ. ಆದರೆ ಗ್ರಾ.ಪಂ ಸದಸ್ಯರು ಹಾಲಿ ಮುಖ್ಯ ಶಿಕ್ಷಕರ ಬ್ಯಾಂಕ್ ಖಾತೆಗೆ ಕೇವಲ 10,000 ರೂ. ಜಮೆ ಮಾಡಿ ಕೈತೊಳೆದುಕೊಂಡಿದ್ದಾರೆ. ಉಳಿದ ಹಣ ಎಲ್ಲಿ ಎಂದು ಕೇಳಿದರೆ ಯಾರ ಬಳಿಯೂ ಉತ್ತರವಿಲ್ಲ ಎಂದು ದೂರಿದರು.

ಇಲಾಖೆಗೆ ಮಾಹಿತಿ ಇಲ್ಲ

ಖಾಸಗಿ ಶಾಲೆಯಾಗಿದ್ದ ಶ್ರೀ ಮಾರುತಿ ಶಾಲೆಯನ್ನು 1980-81ರಲ್ಲಿ ಸರಕಾರಿ ಶಾಲೆಯನ್ನಾಗಿ ಪರಿವರ್ತಿಸಲಾಗಿದೆ. ಆದರೆ ಆ ಶಾಲೆ ಕಟ್ಟಡ ತೆರವುಗೊಳಿಸುವ ಮೊದಲು ಗ್ರಾ.ಪಂ.ನವರು ಶಿಕ್ಷಣ ಇಲಾಖೆಗೆ ಮಾಹಿತಿ ನೀಡಿಲ್ಲ. ಕಟ್ಟಡದ ಸಾಮಗ್ರಿಗಳನ್ನು ಹರಾಜು ಹಾಕುವಾಗ ಶಿಕ್ಷಣ ಇಲಾಖೆ ಅಧಿಕಾರಿ ಒಬ್ಬರು ಸ್ಥಳದಲ್ಲಿ ಹಾಜರಿರಬೇಕು ಎಂಬ ನಿಯಮವಿದೆ. ಆದರೆ ಎಲ್ಲಾ ನಿಯಮಗಳನ್ನು ಗಾಳಿಗೆ ತೂರಲಾಗಿದೆ.

ಸೂಕ್ತ ತನಿಖೆ ನಡೆಯಲಿ

ಶಾಲಾ ಕಟ್ಟಡದಲ್ಲಿ ನಡೆದಿರುವ ಅವ್ಯವಹಾರ ಕುರಿತು ದೂರು ನೀಡೋಣ ಎಂದರೆ ದಕ್ಷಿಣ ವಿಭಾಗದ ಕ್ಷೇತ್ರ ಶಿಕ್ಷಣಾಧಿಕಾರಿಗಳು ಸಂಪರ್ಕಕ್ಕೆ ಸಿಗುತ್ತಿಲ್ಲ. ಇಲ್ಲಿ ಲಕ್ಷಾಂತರ ರೂ. ಮೌಲ್ಯದ ಅವ್ಯವಹಾರ ನಡೆದಿದೆ. ಈ ಕುರಿತು ಸೂಕ್ತ ತನಿಖೆ ನಡೆಸಿ ತಪ್ಪಿತಸ್ತರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಗ್ರಾಮಸ್ಥರು ಆಗ್ರಹಿಸಿದರು.

ಸುದ್ದಿಗೋಷ್ಠಿಯಲ್ಲಿ ಗ್ರಾಮದ ಮುಖಂಡ ಎಸ್.ಎಚ್. ನಾಗಪ್ಪ, ವ್ಯವಸಾಯ ಸೇವಾ ಸಹಕಾರ ಸಂಘದ ಮಾಜಿ ಅಧ್ಯಕ್ಷ ಆರ್. ರಾಮಸ್ವಾಮಿ, ಗ್ರಾ.ಪಂ ಮಾಜಿ ಸದಸ್ಯ ಟಿ.ಬಿ. ಮೂರ್ತಿ, ಕೆ.ಎಚ್. ಅಣ್ಣಪ್ಪ, ಹನುಮಂತಪ್ಪ ಇದ್ದರು.

admin

admin

Leave a Reply

Your email address will not be published. Required fields are marked *

error: Content is protected !!