ಸುದ್ದಿ360 ದಾವಣಗೆರೆ, ಸೆ.16: ಪತಿಯ ಜೀವ ಉಳಿಸಲು ಕಾಳಜಿ ವಹಿಸಿ ಆಂಬ್ಯುಲೆನ್ಸ್ ನಲ್ಲಿ ಕೂತಿದ್ದ ಪತ್ನಿಯೇ ದುರಂತ ಅಂತ್ಯ ಕಂಡಿರುವ ದಾರುಣ ಘಟನೆ ದಾವಣಗೆರೆ ಸಮೀಪದ ಕಲ್ಪನಹಳ್ಳಿ ರಾಷ್ಟ್ರೀಯ ಹೆದ್ದಾರಿ 6 ರಲ್ಲಿ ಗುರುವಾರ ಬೆಳಿಗ್ಗೆ ನಡೆದಿದೆ.
ಇಲ್ಲಿನ ರಾಷ್ಟ್ರೀಯ ಹೆದ್ದಾರಿ 6 ರಲ್ಲಿ ಕಲ್ಪನಹಳ್ಳಿ ಬಳಿ ನಡೆದ ಸರಣಿ ಅಪಘಾತದಲ್ಲಿ ಮೊರಾರ್ಜಿ ದೇಸಾಯಿ ವಸತಿ ಶಾಲೆಯ ಶಿಕ್ಷಕಿ ಸೇರಿ ಇಬ್ಬರು ಸಾವು ಕಂಡಿದ್ದಾರೆ. ಕಾರಿಗನೂರಿನ ಮೊರಾರ್ಜಿ ದೇಸಾಯಿ ಶಾಲೆಯಲ್ಲಿ ಕೆಲಸ ಮಾಡುತ್ತಿದ್ದ ಶಿಕ್ಷಕಿ ಜ್ಯೋತಿ(43) ಮತ್ತು ಪವಾಡರಂಗವ್ವನಹಳ್ಳಿಯ ಮಂಜುನಾಥ್(68) ಸಾವು ಕಂಡ ದುರ್ದೈವಿಗಳು.
ಮೂಲತಃ ದಾವಣಗೆರೆ ತಾಲ್ಲೂಕಿನ ಕಾಟೇಹಳ್ಳಿಯ ಶಿಕ್ಷಕಿ ಜ್ಯೋತಿ ಕುಟುಂಬ ಸಹಿತ ತಮಿಳು ನಾಡು, ಮದುರೈಗೆ ಪ್ರವಾಸಕ್ಕೆ ತೆರಳಿದ್ದರು. ಈ ವೇಳೆ ಜ್ಯೋತಿ ಅವರ ಪತಿಗೆ ಹೃದಯಾಘಾತ ಸಂಭವಿಸಿತ್ತು. ಅವರಿಗೆ ಮದುರೈನಲ್ಲಿ ತುರ್ತು ಚಿಕಿತ್ಸೆ ಕೊಡಿಸಿಕೊಂಡು ಹೆಚ್ಚಿನ ಚಿಕಿತ್ಸೆಗಾಗಿ ದಾವಣಗೆರೆಯ ಎಸ್‌ಎಸ್ ನಾರಾಯಣ ಹೃದಯಾಲಯಕ್ಕೆ ತಮಿಳುನಾಡಿನ (ಟಿಎನ್-72ಬಿಆರ್ 7147) ಅಂಬ್ಯುಲೆನ್ಸ್ನಲ್ಲಿ ಕರೆತರಲಾಗುತಿತ್ತು. ಈ ವೇಳೆ ಅಂಬ್ಯುಲೆನ್ಸ್ ಚಾಲಕ ಟ್ರಾಕ್ಟರ್ ನ್ನು ಹಿಂದಿಕ್ಕುವ ರಭಸದಲ್ಲಿ ಟ್ರಾಕ್ಟರ್ ಟ್ರಾಲಿಗೆ ಅಂಬ್ಯುಲೆನ್ಸಿನ ಎಡಭಾಗವನ್ನು ಬಲವಾಗಿ ಡಿಕ್ಕಿ ಹೊಡೆಸಿದ್ದಾನೆ. ಈ ವೇಳೆ ಅಂಬ್ಯುಲೆನ್ಸಿನ ಒಳಗೆ ಕುಳಿತಿದ್ದ ಶಿಕ್ಷಕಿ ಜ್ಯೋತಿ ಅವರ ತಲೆಗೆ ಬಲವಾದ ಪೆಟ್ಟು ಬಿದ್ದು, ಗಂಭೀರವಾಗಿ ಗಾಯಗೊಂಡಿದ್ದರು. ನಂತರ ಅವರನ್ನು ಮತ್ತೊಂದು ಅಂಬ್ಯುಲೆನ್ಸ್ನಲ್ಲಿ ಜಿಲ್ಲಾ ಸರ್ಕಾರಿ ಆಸ್ಪತೆಗೆ ದಾಖಲಿಸಲಾಯಿತಾದರೂ ಚಿಕಿತ್ಸೆ ಫಲಿಸದೇ ಸಾವು ಕಂಡಿದ್ದಾರೆ.
ಬೈಕ್ ಸವಾರನ ಸಾವು
ಡಿಕ್ಕಿಯ ರಭಸಕ್ಕೆ ಗಾಬರಿಗೊಂಡ ಚಾಲಕನ ನಿಯಂತ್ರಣ ತಪ್ಪಿದ ಅಂಬ್ಯುಲೆನ್ಸ್ ದಾವಣಗೆರೆಗೆ ಹೋಗುತ್ತಿದ್ದ ಪವಾಡರಂಗವ್ವನಹಳ್ಳಿಯ ಮಂಜುನಾಥ್ ಅವರ ಬೈಕಿಗೆ ಹಿಂಬದಿಯಿಂದ ರಭಸದಿಂದ ಡಿಕ್ಕಿ ಹೊಡೆದಿದೆ. ಡಿಕ್ಕಿಯ ರಭಸಕ್ಕೆ ಬೈಕ್ ಅಂಬ್ಯುಲೆನ್ಸಿನ ಒಳಭಾಗಕ್ಕೆ ಹೋಗಿ ಸಿಕ್ಕಿಹಾಕಿಕೊಂಡಿದೆ. ಇದರಿಂದ ಗಂಭೀರವಾಗಿ ಗಾಯಗೊಂಡ ಮಂಜುನಾಥ್ ಸ್ಥಳದಲ್ಲಿಯೇ ಸಾವು ಕಂಡಿದ್ದಾರೆ.
ಅಂಬ್ಯುಲೆನ್ಸ್ ಚಾಲಕನ ಅತಿಯಾದ ವೇಗ ಮತ್ತು ಅಜಾಗರೂಕ ಚಾಲನೆಯೇ ಈ ಸರಣಿ ಅಪಘಾತಕ್ಕೆ ಕಾರಣ ಎಂದು ಪ್ರಾಥಮಿಕ ತನಿಖೆಯಿಂದ ತಿಳಿದು ಬಂದಿದೆ. ಪತಿಯ ಜೀವ ಉಳಿಸಲು ಮದುರೈನಿಂದ ಬಂದ ಪತ್ನಿಯೇ ದುರಂತ ಅಂತ್ಯ ಕಂಡಿರುವುದಕ್ಕೆ ಸ್ಥಳಿಯರು ಕಂಬನಿ ಮಿಡಿದಿದ್ದಾರೆ. ಇನ್ನು ಸುದ್ದಿ ತಿಳಿದು ಸ್ಥಳಕ್ಕೆ ಆಗಮಿಸಿದ ಮಾಜಿ ಜಿಪಂ ಸದಸ್ಯ ಕೆ.ಎಸ್.ಬಸವಂತಪ್ಪ ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಿ ಮಾನವೀಯತೆ ಮೆರೆದರು. ಪ್ರಕರಣ ಕುರಿತಾಗಿ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.