ಸುದ್ದಿ360 ದಾವಣಗೆರೆ: 93ನೇ ವಯಸ್ಸಿನಲ್ಲಿ ಶಾಸಕರಾಗಿ ಯುವ ರಾಜಕಾರಣಿಗಳು ನಾಚುವಂತೆ ಕೆಲಸ ಮಾಡುತ್ತಿರುವ ಶಾಮನೂರು ಶಿವಶಂಕರಪ್ಪನವರದು ವಿಶಿಷ್ಟವಾದ ವ್ಯಕ್ತಿತ್ವ ಎಂದು ಅರಣ್ಯ ಸಚಿವ ಈಶ್ವರ ಖಂಡ್ರೆ ಹೇಳಿದರು.
ನಗರದ ಎಸ್‌ಎಸ್ ಕನ್ವೆನ್ಷನ್ ಹಾಲ್‌ನಲ್ಲಿ ನಡೆದ ಶಾಮನೂರು ಶಿವಶಂಕರಪ್ಪನವರ ಹುಟ್ಟುಹಬ್ಬ ಆಚರಣೆ ಸಮಾರಂಭದಲ್ಲಿ ಪಾಲ್ಗೊಂಡು ಅವರು ಮಾತನಾಡಿ, ನಾವು ಮಾಡುವ ಒಳ್ಳೆಯ ಕೆಲಸಗಳು ಅಜರಾಮರವಾಗಿ ಉಳಿಯುತ್ತವೆ. ಅಂತಹ ಕೆಲಸಗಳನ್ನು ಶಾಮನೂರು ಶಿವಶಂಕರಪ್ಪ ಮಾಡಿದ್ದಾರೆ. ಜಾತಿ, ಮತ, ಧರ್ಮ ಭೇದವಿಲ್ಲದೆ ನೆರವಾಗುವ ಅವರ ಗುಣ ಎಲ್ಲರಿಗೂ ಆದರ್ಶ. ಅತ್ಯಂತ ಅಪರೂಪದ ರಾಜಕಾರಣಿಯಾಗಿ ಏಳು ದಶಕ ಕಾಲ ಅವರು ಸಮಾಜಕ್ಕೆ ಸಲ್ಲಿಸಿರುವ ಸೇವೆ ಅನನ್ಯ ಎಂದರು.
ಸಾಮಾಜಿಕ, ಧಾರ್ಮಿಕ, ಶೈಕ್ಷಣಿಕ, ಔದ್ಯೋಗಿಕ, ಉದ್ಯಮ ಹಾಗೂ ಸೇವಾ ಕ್ಷೇತ್ರದಲ್ಲಿ ಎಸ್‌ಎಸ್ ಅವರ ಸಾಧನೆಗೆ ಸಾಟಿಯಿಲ್ಲ. ಶೈಕ್ಷಣಕ ಕ್ಷೇತ್ರದಲ್ಲಿ ಅವರ ಸೇವೆ ಅನನ್ಯವಾಗಿದ್ದು, ಕೆಜಿಯಿದ ಆರಂಭವಾಗಿ ಪಿಜಿವರೆಗೆ ಶಿಕ್ಷಣ ನೀಡುವ ಸಂಸ್ಥೆಗಳನ್ನು ಅವರು ಸ್ಥಾಪಿಸಿದ್ದಾರೆ. ಜಿಲ್ಲೆ, ರಾಜ್ಯ ಮಾತ್ರವಲ್ಲದೆ ಹೊರ ರಾಜ್ಯದ ಲಕ್ಷಾಂತರ ವಿದ್ಯಾರ್ಥಿಗಳು ಅವರ ಸಂಸ್ಥೆಗಳಲ್ಲಿ ಕಲಿತು ಇಂದು ದೇಶ, ವಿದೇಶಗಳಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ಇನ್ನು ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ಅಧ್ಯಕ್ಷರಾಗಿ ಶಾಮನೂರು ಶಿವಶಂಕರಪ್ಪ ಅವರ ಸೇವೆ ಸ್ಮರಣೀಯ. ಸಮಾಜಕ್ಕೆ ಸಂಕಷ್ಟ ಎದುರಾದ ಎಲ್ಲ ಸಂದರ್ಭದಲ್ಲೂ ಸಮಾಜ ಒಗ್ಗೂಡಿಸುವ, ಮುನ್ನಡೆಸುವ ಕೆಲಸ ಮಾಡಿದ್ದಾರೆ. ನಮ್ಮ ತಂದೆ ಭೀಮಣ್ಣ ಖಂಡ್ರೆ ಅವರ ಹೆಗಲಿಗೆ ಹೆಗಲು ನೀಡಿ ಮಹಾಸಭಾವನ್ನು ಈ ಹಂತಕ್ಕೆ ಬೆಳೆಸಿದ್ದಾರೆ ಎಂದು ಪ್ರಶಂಸಿಸಿದರು.
ಈ ವೇಳೆ ಶಾಮನೂರು ಶಿವಶಂಕರಪ್ಪ ಅವರ ಪುತ್ರರಾದ ಸಚಿವ ಎಸ್.ಎಸ್. ಮಲ್ಲಿಕಾರ್ಜುನ್, ಎಸ್.ಎಸ್. ಬಕ್ಕೇಶ್, ಎಸ್.ಎಸ್. ಗಣೇಶ್, ಹೋಟೆಲ್ ಉದ್ಯಮಿ ಅಣಬೇರು ರಾಜಣ್ಣ, ಮೇಯರ್ ವಿನಾಯಕ ಪೈಲ್ವಾನ್, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಎಚ್.ಬಿ. ಮಂಜಪ್ಪ, ಪ್ರಧಾನ ಕಾರ್ಯದರ್ಶಿ ದಿನೇಶ್ ಕೆ. ಶೆಟ್ಟಿ, ಎಸ್. ಮಲ್ಲಿಕಾರ್ಜುನ್, ಅಯೂಬ್ ಪೈಲ್ವಾನ್, ಪಾಲಿಕೆ ಸದಸ್ಯ ಗಡಿಗುಡಾಳ್ ಮಂಜುನಾಥ್, ಹರೀಶ್ ಬಸಾಪುರ, ಯುವ ಕಾಂಗ್ರೆಸ್‌ನ ನಿಖಿಲ್ ಕೊಂಡಜ್ಜಿ, ಪಾಲಿಕೆ ಸದಸ್ಯರು, ಕಾಂಗ್ರೆಸ್ ಮುಖಂಡರು ಭಾಗವಹಿಸಿದ್ದರು.