ಸಾಮೂಹಿಕ ಸನ್ನಿಯಂತೆ ಕಾಡುತ್ತಿರುವ ಮಾದಕ ವಸ್ತು ಸೇವನೆ

ಯುವಪೀಳಿಗೆ ಜಾಗರೂಕರಾಗಲು ಜಿಲ್ಲಾ ಪೊಲೀಸ್ ಅಧೀಕ್ಷಕ ಸಿ ಬಿ ರಿಷ್ಯಂತ್ ಕರೆ

ಸುದ್ದಿ360 ದಾವಣಗೆರೆ. ಜೂ.29: ಸಾಮಾಜಿಕ ಜಾಲತಾಣಗಳು ಇಂದಿನ ಯುವಪೀಳಿಗೆಗೆ ದೊಡ್ಡ ಪಿಡುಗಾಗಿ ಮಾರ್ಪಟ್ಟಿದ್ದು ಯುವಪೀಳಿಗೆಯನ್ನು ಸಮಸ್ಯೆಯತ್ತ ದೂಡುತ್ತಿವೆ ಇದನ್ನು ತಡೆಗಟ್ಟುವ ನಿಟ್ಟಿನಲ್ಲಿ ಎಲ್ಲರೂ ಒಂದಾಗಬೇಕಿದೆ ಎಂದು ಜಿಲ್ಲಾ ಪೊಲೀಸ್ ಅಧೀಕ್ಷಕ ಸಿ ಬಿ ರಿಷ್ಯಂತ್ ಹೇಳಿದರು.

ನಗರದ ಎಸ್ ಎಸ್ ವೈದ್ಯಕೀಯ ಮಹಾವಿದ್ಯಾಲಯ ಮತ್ತು ಸಂಶೋಧನಾ ಕೇಂದ್ರದ ಸಭಾಂಗಣದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ಮಾನಸಿಕ ಆರೋಗ್ಯ ಕಾರ್ಯಕ್ರಮ ಹಾಗೂ ಎಸ್ ಎಸ್ ವೈದ್ಯಕೀಯ ಮಹಾವಿದ್ಯಾಲಯ ಮತ್ತು ಸಂಶೋಧನಾ ಕೇಂದ್ರ ಇವರ ಸಹಯೋಗದಲ್ಲಿ ಆಯೋಜಿಸಲಾಗಿದ್ದ ಅಂತಾರಾಷ್ಟ್ರೀಯ ಮಾದಕ ವ್ಯಸನ ಹಾಗೂ ಅನಧಿಕೃತ ಕಳ್ಳಸಾಗಣೆ ವಿರೋಧಿ ದಿನಾಚರಣೆಯಲ್ಲಿ ಪಾಲ್ಗೊಂಡು, ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಮಾದಕ ವಸ್ತುಗಳ ಸೇವನೆ ಒತ್ತಡದಲ್ಲಿರುವ ಮನಸ್ಸನ್ನೂ ನಿಯಂತ್ರಿಸುತ್ತದೆ ಎನ್ನುವ ತಪ್ಪು ತಿಳುವಳಿಕೆ ಯುವ ಪೀಳಿಗೆಯಲ್ಲಿದೆ. ಆದರೆ ಮಾದಕ ವಸ್ತುಗಳ ಸೇವನೆಯಿಂದ ಇಡೀ ಜೀವನವೇ ಹಾಳಾಗುತ್ತದೆ ಎಂದು ಜಿಲ್ಲಾ ಪೊಲೀಸ್ ಅಧೀಕ್ಷಕ ಸಿ ಬಿ ರಿಷ್ಯಂತ್ ಎಚ್ಚರಿಕೆ ನೀಡಿದರು.

ಮಾದಕ ವಸ್ತುಗಳ ಸೇವನೆ, ಧೂಮಪಾನ ಮತ್ತು ಮದ್ಯಪಾನ ಮಾಡುವ ಚಟಗಳು ಯುವಪೀಳಿಗೆಯನ್ನು ಸಾಮೂಹಿಕ ಸನ್ನಿಯಂತೆ ಕಾಡುತ್ತಿವೆ. ಬಹುತೇಕ ಕಾಲೇಜುಗಳಲ್ಲಿ ಸಾಮೂಹಿಕವಾಗಿ  ಒಬ್ಬರನ್ನು ನೋಡಿ ಮತ್ತೊಬ್ಬರು ಕಲಿಯುವಂತಹ ಕೆಟ್ಟ ಚಟವಾಗಿದೆ. ಗೆಳೆಯರೊಂದಿಗೆ ಇರುವ ವಿದ್ಯಾರ್ಥಿಗಳು ಅವರು ಮಾಡುತ್ತಾರೆ ಅದನ್ನು ನಾವು ಮಾಡದಿದ್ದರೆ ಹೇಗೋ ಏನೋ ಎನ್ನುವ ಸಂಕುಚಿತ ಮನೋಭಾವ ಹೊಂದಿ  ಅವರನ್ನು ನೋಡಿ ಇವರು ಮಾಡುತ್ತಾರೆ ಇದರಿಂದಾಗಿ ಕ್ಷಣಿಕ ಸುಖಕ್ಕಾಗಿ ಇಡೀ ಜೀವನವನ್ನೇ ಹಾಳು ಮಾಡಿಕೊಳ್ಳುತ್ತಿದ್ದಾರೆ ಎಂದು ಅಸಮಧಾನ ವ್ಯಕ್ತಪಡಿಸಿದರು.

ಪ್ರಸ್ತುತ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುವ ದೃಶ್ಯಗಳು ಇಂದಿನ ಯುವಪೀಳಿಗೆಯನ್ನು ಹಾಳು ಮಾಡುತ್ತಿವೆ ಯಾರೋ ಡ್ರಗ್ಸ್ ಸೇವನೆ ಮಾಡುತ್ತಾರೆ ಎನ್ನುವ ಭರದಲ್ಲಿ ಇಂದಿನ ಯುವಪೀಳಿಗೆ ಅದಕ್ಕೆ ಜೋತು ಬೀಳುತ್ತಿದೆ ಎಂದು ವಿಷಾದ ವ್ಯಕ್ತಿಪಡಿಸಿದರು.

ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿದ್ದ ಎಸ್ ಎಸ್ ವೈದ್ಯಕೀಯ ಮಹಾವಿದ್ಯಾಲಯದ ಮನೋವೈದ್ಯಕೀಯ ವಿಭಾಗದ ಡಾ. ಎನ್ ಮೃತ್ಯುಂಜಯ ಮಾದಕ ವಸ್ತು ಸೇವಿಸುವ ಕುರಿತಂತೆ ಆಗುವ ದುಷ್ಪರಿಣಾಮಗಳ ಬಗ್ಗೆ ಉಪನ್ಯಾಸ ನೀಡಿದರು

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಎಸ್ ಎಸ್ ವೈದ್ಯಕೀಯ ಮಹಾವಿದ್ಯಾಲಯದ ಪ್ರಾಂಶುಪಾಲ ಡಾ. ಬಿ ಎಸ್ ಪ್ರಸಾದ್ ವಹಿಸಿದ್ದರು. ಈ ವೇಳೆ ಎಸ್ ಎಸ್ ವೈದ್ಯಕೀಯ ಮಹಾವಿದ್ಯಾಲಯದ ವೈದ್ಯಕೀಯ ನಿರ್ದೇಶಕ ಡಾ. ಅರುಣ್ ಕುಮಾರ್ ಅಜ್ಜಪ್ಪ, ಜಿಲ್ಲಾ ಕುಷ್ಠರೋಗ ನಿವಾರಣಾಧಿಕಾರಿ ಡಾ. ಪಿ ಡಿ ಮುರಳೀಧರ, ಜಿಲ್ಲಾ ಮನೋವೈದ್ಯ ಡಾ. ಗಂಗಮ್ ಸಿದ್ಧಾರೆಡ್ಡಿ,  ಅಬಕಾರಿ ಇಲಾಖೆಯ ಉಪ ಆಯುಕ್ತ ಬಿ ಶಿವಪ್ರಸಾದ್, ಸಿ ಜಿ ಆಸ್ಪತ್ರೆಯ ಮನೋವೈದ್ಯ ಡಾ.ಕೆ ಮರಳುಸಿದ್ಧಪ್ಪ ಇತರರು ಇದ್ದರು.

ಡಾ. ಸುಮಿತ್ರಾ ಪ್ರಾರ್ಥಿಸಿದರು. ಮನೋಶಾಸ್ತ್ರಜ್ಞೆ ಡಾ. ಎಚ್.ಎನ್. ಆಶಾ ಎಲ್ಲರನ್ನು ಸ್ವಾಗತಿಸಿದರು. ಸಂತೋಷ್ ಕಾರ್ಯಕ್ರಮ ನಿರೂಪಿಸಿದರು.

admin

admin

Leave a Reply

Your email address will not be published. Required fields are marked *

error: Content is protected !!