ಸಾರವರ್ಧಿತ ಅಕ್ಕಿಯಿಂದ  ದೇಹಕ್ಕೆ ಅಗತ್ಯ ಪೌಷ್ಠಿಕಾಂಶ ಲಭ್ಯ

ಸುದ್ದಿ360 ದಾವಣಗೆರೆ ಜೂ.21:  ಸಾರವರ್ಧಿತ ಅಕ್ಕಿ ಹೆಚ್ಚು ಪೋಷಾಕಾಂಶಗಳನ್ನು ಒಳಗೊಂಡಿದ್ದು, ಇದರ ಸೇವನೆಯಿಂದ ಸಾರ್ವಜನಿಕರ ಆರೋಗ್ಯಕ್ಕೆ ಯಾವುದೇ ಹಾನಿ ಆಗುವುದಿಲ್ಲ. ಸಾರ್ವಜನಿಕರ ಆರೋಗ್ಯದ ಹಿತದೃಷ್ಠಿಯಿಂದ ನ್ಯಾಯಬೆಲೆ ಅಂಗಡಿಗಳ ಮೂಲಕ ಕೇಂದ್ರ ಸರಕಾರ ಸಾರವರ್ಧಿತ ಅಕ್ಕಿಯನ್ನು ವಿತರಿಸುತ್ತಲಿದೆ ಎಂದು ಅಪರ ಜಿಲ್ಲದಿಕಾರಿ ಪಿ.ಎನ್. ಲೋಕೇಶ್ ಹೇಳಿದರು.

ನಗರದ ಜಿಲ್ಲಾಡಳಿತ ಭವನದ ತುಂಗಭದ್ರಾ ಸಭಾಂಗಣದಲ್ಲಿ ಮಂಗಳವಾರ ಕೇಂದ್ರ ಸರಕಾರದ ಸೂಚನೆ ಮೇರೆಗೆ, ಪಾಥ್ ಸಂಸ್ಥೆ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ಸಾರವರ್ಧಿತ ಅಕ್ಕಿ ಕುರಿತು ಅರಿವು ಮೂಡಿಸುವ ತರಬೇತಿ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿ, ಸಾರ್ವಜನಿಕರು ಮೊದಲು ಈ ಅಕ್ಕಿ ಬಗ್ಗೆ ಇಲ್ಲಸಲ್ಲದ ಅನುಮಾನಗಳನ್ನು  ತಮ್ಮ ತಲೆಯಿಂದ ತೆಗೆದುಹಾಕಬೇಕು. ಹಾಗೆಯೇ ಜಿಲ್ಲೆಯ ಎಲ್ಲಾ ನ್ಯಾಯಬೆಲೆ ಅಂಗಡಿ ಮಾಲೀಕರು, ಪಡಿತರ ವಿತರಕರು, ಈ ಅಕ್ಕಿಯಿಂದ ಆಗುವ ಪ್ರಯೋಜನಗಳ ಕುರಿತು ಪಡಿತರ ಫಲಾನುಭವಿಗಳಿಗೆ ಅರಿವು ಮೂಡಿಸಬೇಕು ಎಂದು ಹೇಳಿದರು.

100 ಕೆಜಿಗೆ ಒಂದು ಕೆಜಿ ಸಾರವರ್ಧಿತ ಅಕ್ಕಿ

ರಾಜ್ಯದ 14 ಜಿಲ್ಲೆಗಳಲ್ಲಿ ಸಾರವರ್ಧಿತ ಅಕ್ಕಿ ವಿತರಣೆಗೆ ಕೇಂದ್ರ ಸರಕಾರ ಗುರುತಿಸಿದ ಅದರಲ್ಲಿ ದಾವಣಗೆರೆ ಕೂಡ ಒಂದಾಗಿದೆ. ನ್ಯಾಯಬೆಲೆ ಅಂಗಡಿಗಳಲ್ಲಿ ವಿತರಿಸುವ 100 ಕೆಜಿ ಅಕ್ಕಿಗೆ ಒಂದು ಕೆಜಿ ಸಾರರವರ್ಧಿತ ಅಕ್ಕಿಯನ್ನು ಬೆರೆಸಲಾಗುತ್ತದೆ. ಬಣ್ಣದಲ್ಲಿ ಸಾಮಾನ್ಯ ಅಕ್ಕಿಗಿಂತ ಭಿನ್ನವಾಗಿರುವ ಈ ಅಕ್ಕಿಯಲ್ಲಿ ವಿಟಮಿನ್ ಬಿ-12, ಕಬ್ಬಿಣದ ಹಾಗೂ ಫೋಲಿಕ್ ಆಸಿಡ್ ರೀತಿಯ ಅತ್ಯಗತ್ಯ ಪೋಷಕಾಂಶಗಳಿವೆ. ಈ ಅಕ್ಕಿ ಸೇವನೆಯಿಂದ ಹಲವು ಅನಾರೋಗ್ಯ ಸಮಸ್ಯೆಗಳು ದೂರಾಗುತ್ತವೆ ಎಂದು ಆಹಾರ ಮತ್ತು ನಾಗರಿಕ ಪೂರೈಕೆ ಇಲಾಖೆ ಪ್ರಭಾರ ಜಂಟಿ ನಿರ್ದೇಶಕಿ ರೇಷ್ಮಾ ಹಾನಗಲ್ ಮಾಹಿತಿ ನೀಡಿದರು.

ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಜಂಟಿ ನಿರ್ದೇಶಕಿ ವಾಸಂತಿ ಉಪ್ಪಾರ್ ಮಾತನಾಡಿ, ನಾವು ಇಂದು ಸೇವಿಸುತ್ತಿರುವ ಆಹಾರದಲ್ಲಿ ಪೋಷಕಾಂಶಗಳ ಕೊರತೆಯನ್ನು ಎದುರಿಸುತ್ತಿದ್ದೇವೆ. ಹಿಂದೆ ನಮ್ಮ ಅಜ್ಜಿಯರು ಹತ್ತು ಹನ್ನೆರಡು ಮಕ್ಕಳನ್ನು ಹೆತ್ತು, 100 ವರ್ಷ ಗಟ್ಟಿಮುಟ್ಟಾಗೇ ಬದುಕಿ ಬಾಳುತ್ತಿದ್ದರು. ಆದರೆ ಇಂದು ನಾವು ಒಂದು ಮಗು ಹೆರುವಷ್ಟರಲ್ಲಿ ಹೈರಾಣಾಗಿ ಹೋಗುತ್ತೇವೆ ಇದಕ್ಕೆ ಆಹಾರದಲ್ಲಿನ ಪೌಷ್ಠಿಕತೆಯ ಕೊರತೆ ಕಾರಣ ಎಂದು ತಿಳಿಸಿದರು.

ಪೋಷಕಾಂಶಗಳಿಗೆ ಅಕ್ಕಿ ರೂಪ

ದೇಹದ  ಆರೋಗ್ಯಕ್ಕೆ ಪ್ರತಿ ದಿನ ಸೇವಿಸುವ ಆಹಾರದಲ್ಲಿ ಪ್ರೋಟೀನ್ ಮತ್ತು ವಿಟಮಿನ್‌ಗಳು ಮತ್ತು ಖನಿಜಾಂಶಗಳು ಇರುವುದು ಅತೀ ಮುಖ್ಯ. ಈ ನಿಟ್ಟಿನಲ್ಲಿ ಬೆಳಗಿನಿಂದ ರಾತ್ರಿವರೆಗೆ ಸೇವಿಸುವ ಆಹಾರದಲ್ಲಿ ಬೇಳೆಕಾಳುಗಳು, ಏಕದಳ ಧಾನ್ಯಗಳು, ತರಕಾರಿ, ಹಣ್ಣುಗಳು ಮತ್ತು ಹಸಿರು ಸೊಪ್ಪು ಇರಬೇಕು. ಆದರೆ, ಮೂರು ಹೊತ್ತಿನ ಆಹಾರದಲ್ಲಿ ಇವುಗಳಲ್ಲಿ ಯಾವುದಾದರೂ ಒಂದು ಬಿಟ್ಟು ಹೋಗಿರುತ್ತದೆ. ಆದ್ದರಿಂದ ಮೂರು ಪ್ರಮುಖ ಪೋಷಕಾಂಶಗಳ ಪುಡಿಗೆ ಅಕ್ಕಿ ರೂಪ ನೀಡಿ, ಅದನ್ನು ಪಡಿತರ ಅಕ್ಕಿ ಜತೆ ಸೇರಿಸಲಾಗುತ್ತಿದೆ ಎಂದು ವಾಸಂತಿ ಉಪ್ಪಾರ್ ತಿಳಿಸಿದರು.

ಗರ್ಭಿಣಿ ಮತ್ತು ಬಾಣಂತಿಯರು ಸೇರಿ ಶೇ.50 ಮಹಿಳೆಯರಲ್ಲಿ ಹೀಮೋಗ್ಲೋಬಿನ್ ಕೊರತೆಯನ್ನು ಕಾಣುತ್ತಿದ್ದೇವೆ. ರಕ್ತದಲ್ಲಿ ಹೀಮೋಗ್ಲೋಬಿನ್ ಪ್ರಮಾಣ ಹೆಚ್ಚಿಸಲು ಕಬ್ಬಿಣದ ಪೋಷಕಾಂಶ ಅತಿ ಮುಖ್ಯ. ಕಬ್ಬಿಣದೊಂದಿಗೆ ಫೋಲಿಕ್ ಆಸಿಡ್ ಸೇರಿಕೊಂಡಾಗ ಹೀಮೋಗ್ಲೋಬಿನ್ ರಕ್ತದಲ್ಲೇ ಉಳಿಯುತ್ತದೆ. ಇನ್ನು ವಿಟಮಿನ್ ಬಿ-12 ಕೂಡ ರಕ್ತಹೀನತೆ ತಡೆಯುವಲ್ಲಿ ಸಹಕಾರಿಯಾಗಿದೆ. ಈ ವಿಟಮಿನ್ ಮಾಂಸಾಹಾರದಲ್ಲಿ ಹೇರಳವಾಗಿ ಸಿಗುತ್ತದೆ. ಸಸ್ಯಹಾರಿಗಳಿಗೂ ಇದರ ಪ್ರಯೋಜನ ಸಿಗಲಿ ಎಂಬ ಉದ್ದೇಶದಿಂದ ಸಾರವರ್ಧಿತ ಅಕ್ಕಿಯಲ್ಲಿ ವಿಟಮಿನ್ ಬಿ-12 ಸೇರಿಸಲಾಗಿದೆ ಎಂದು ಮಾಹಿತಿ ನೀಡಿದರು. ಪಾಥ್ ಸಂಸ್ಥೆ ಪ್ರತಿನಿಧಿ ಸತ್ಯಬ್ರತ ಪಾಡಿ ನ್ಯಾಯಬೆಲೆ ಅಂಗಡಿ ಮಾಲೀಕರಿಗೆ ಸಾರವರ್ಧಿತ ಅಕ್ಕಿಯ ಮಹತ್ವ ಕುರಿತು ತರಬೇತಿ ನೀಡಿದರು. ಅಕ್ಷರ ದಾಸೋಹ ಅಧಿಕಾರಿ ಎಂ. ಮಂಜುನಾಥ್ ಸ್ವಾಮಿ, ಆಹಾರ ಸುರಕ್ಷತಾ ಅಧಿಕಾರಿ ಎಚ್. ಕೊಟ್ರೇಶ್, ಆಹಾರ ನಿರೀಕ್ಷಕ ರವಿ ಹಿಪ್ಪರಗಿ, ಬಿ.ಟಿ. ಪ್ರಕಾಶ್, ಸಯ್ಯದ್ ಕಲೀಮುಲ್ಲಾ ಇತರರು ಕಾರ್ಯಕ್ರಮದಲ್ಲಿ ಇದ್ದರು.

admin

admin

Leave a Reply

Your email address will not be published. Required fields are marked *

error: Content is protected !!