ಎಸ್‌ಎಸ್‌ಎಂ 55 ಅದ್ದೂರಿ ಕಾರ್ಯಕ್ರಮಕ್ಕೆ ಭೂಮಿಪೂಜೆ
ಸುದ್ದಿ360 ದಾವಣಗೆರೆ, ಸೆ.09: ಮಾಜಿ ಸಚಿವ ಎಸ್.ಎಸ್. ಮಲ್ಲಿಕಾರ್ಜುನರವರ 55ನೇ ಜನ್ಮದಿನಾಚರಣೆ ಇದೇ ತಿಂಗಳ 22 ರಂದು ನಡೆಯಲಿದ್ದು, ಜನ್ಮದಿನಾಚರಣೆ ಅಂಗವಾಗಿ ನಗರದ ಎಸ್‌ಎಸ್ ಲೇಔಟ್ ಬಿ ಬ್ಲಾಕ್‌ನಲ್ಲಿರುವ ಬಾಪೂಜಿ ಇನ್ಸ್ಟಿಟ್ಯೂಟ್ ಆಫ್ ಹೈಟೆಕ್ ಎಜುಕೇಷನ್ (ಎಂಬಿಎ ಕಾಲೇಜು) ಮೈದಾನದಲ್ಲಿ ಶುಕ್ರವಾರ ಎಸ್‌ಎಸ್‌ಎಂ 55ನೇ ಜನ್ಮದಿನ ಸಮಾರಂಭದ ವೇದಿಕೆ ನಿರ್ಮಾಣಕ್ಕೆ ಇಂದು ಭೂಮಿ ಪೂಜೆ ನೆರವೇರಿಸಲಾಯಿತು.
ಎಸ್‌ಎಸ್‌ಎಂ ಅಭಿಮಾನಿ ಬಳಗ ಈ ಕಾರ್ಯಕ್ರಮವನ್ನು ಆಯೋಜಿಸುತ್ತಿದ್ದು, ಬೆಣ್ಣೆನಗರಿಯಲ್ಲಿ ಯಶಸ್ವಿಯಾಗಿ ಮತ್ತು ಅದ್ದೂರಿಯಾಗಿ ನಡೆದ ಸಿದ್ದರಾಮಯ್ಯ ಅಮೃತ ಮಹೋತ್ಸವದ ಬಳಿಕ, ಹಮ್ಮಿಕೊಂಡಿರುವ `ಎಸ್‌ಎಸ್‌ಎಂ 55′ ಜಿಲ್ಲಾ ಮಟ್ಟದಲ್ಲಿ ಕಾಂಗ್ರೆಸ್ ಬಲವರ್ಧನೆ ಮತ್ತು ಸಂಘಟನೆಗೆ ನೆರವಾಗಲಿದೆ ಎಂಬ ಅಭಿಪ್ರಾಯ ಪಕ್ಷದ ಮುಖಂಡರಲ್ಲಿ ಕೇಳಿಬರುತ್ತಿದೆ.
50ರಿಂದ 60 ಸಾವಿರ ಜನರ ನಿರೀಕ್ಷೆ:
ಸುದ್ದಿಗಾರರೊಂದಿಗೆ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಎಚ್.ಬಿ. ಮಂಜಪ್ಪ ಮಾತನಾಡಿ, ಎಂಬಿಎ ಕಾಲೇಜು ಆವರಣದಲ್ಲಿ ಸೆ.22ರಂದು ಮಧ್ಯಾಹ್ನ 1 ಗಂಟೆಗೆ ಜನ್ಮದಿನ ಕಾರ್ಯಕ್ರಮ ಆರಂಭವಾಗಲಿದೆ. ಸಿದ್ದರಾಮಯ್ಯ ಅಮೃತ ಮಹೋತ್ಸವದ ಮಾದರಿಯಲ್ಲೇ ಆಯೋಜಿಸುತ್ತಿರುವ ಕಾರ್ಯಕ್ರಮಕ್ಕೆ ಪ್ರತಿ ತಾಲೂಕಿನಿಂದ 4 ಸಾವಿರ ಕಾರ್ಯಕರ್ತರು, ಅಭಿಮಾನಿಗಳನ್ನು ಸೇರಿಸುವ ಗುರಿ ಇದೆ. ಒಟ್ಟಾರೆ ಕಾರ್ಯಕ್ರಮದಲ್ಲಿ 50ರಿಂದ 60 ಸಾವಿರ ಮಂದಿ ಭಾಗವಹಿಸುವ ನಿರೀಕ್ಷೆ ಇದೆ ಎಂದರು.
ರಾಜ್ಯ ನಾಯಕರು:
ಶಾಸಕ ಶಾಮನೂರು ಶಿವಶಂಕರಪ್ಪ ನೇತೃತ್ವದಲ್ಲಿ ಸಮಾರಂಭ ನಡೆಯಲಿದ್ದು, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್, ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ, ಮಾಜಿ ಸಚಿವರಾದ ಎಂ.ಬಿ. ಪಾಟೀಲ್, ಎಚ್.ಆಂಜನೇಯ, ಉಮಾಶ್ರೀ, ಮುಖಂಡರಾದ ಜಮೀರ್ ಅಹಮದ್ ಖಾನ್, ಎಚ್.ಸಿ. ಮಹಾದೇವಪ್ಪ, ಬಿ.ಎಲ್. ಶಂಕರ್, ಲಕ್ಷ್ಮೀ ಹೆಬ್ಬಾಳ್ಕರ್ ಸೇರಿ ಹಲವು ಮುಖಂಡರು ಭಾಗವಹಿಸಲಿದ್ದಾರೆ ಎಂದು ಮಾಹಿತಿ ನೀಡಿದರು.
ಕಾರ್ಯಕ್ರಮಕ್ಕಾಗಿ ಪೆಂಡಾಲ್ ಸಮಿತಿ, ಆಹಾರ, ಸ್ವಾಗತ, ಸೇರಿ ನಾನಾ ಸಮಿತಿ ರಚಿಸಿ ಜವಾಬ್ದಾರಿ ಹಂಚಲಾಗಿದೆ. ಭಾಗವಹಿಸುವ ಎಲ್ಲರಿಗೂ ಊಟ, ನೀರಿನ ವ್ಯವಸ್ಥೆ ಮಾಡಲಾಗುತ್ತಿದೆ. ಪ್ರಮುಖ ವೇದಿಕೆ ಕಾರ್ಯಕ್ರಮದ ಬಳಿಕ ಸಂಜೆ ಕೂಹು-ಕೂಹು ಸಂಗೀತ ಸಂಜೆ ಕಾರ್ಯಕ್ರಮವಿದ್ದು, ನಟ ದರ್ಶನ್, ಸಂಗೀತ ಸಂಯೋಜಕ ಹರಿಕೃಷ್ಣ ಭಾಗವಹಿಸಲಿದ್ದಾರೆ ಎಂದರು.
ಗೋಷ್ಠಿಯಲ್ಲಿ ಪಕ್ಷದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ದಿನೇಶ್ ಕೆ.ಶೆಟ್ಟಿ, ಮುದೇಗೌಡ್ರ ಗಿರೀಶ್, ಪಾಲಿಕೆ ಪ್ರತಿಪಕ್ಷ ನಾಯಕ ಮಂಜುನಾಥ್ ಗಡಿಗುಡಾಳ್, ಕೆಪಿಸಿಸಿ ವಕ್ತಾರ ಡಿ.ಬಸವರಾಜ್, ಬ್ಲಾಕ್ ಅಧ್ಯಕ್ಷರಾದ ಅಯೂಬ್ ಪೈಲ್ವಾನ್, ಕೆ.ಜಿ. ಶಿವಕುಮಾರ್, ಪಾಲಿಕೆ ಸದಸ್ಯ ಎ. ನಾಗರಾಜ್, ಗೀತಾ ಚಂದ್ರಶೇಖರ್, ಯಶೋಧಾ ಪ್ರಕಾಶ್, ಜಯಾ, ಮಹಿಳಾ ಕಾಂಗ್ರೆಸ್ ಜಿಲ್ಲಾಧ್ಯಕ್ಷೆ ಅನಿತಾ ಬಾಯಿ ಮಾಲತೇಶ್, ತುರ್ಚಘಟ್ಟ ಬಸವರಾಜಪ್ಪ, ಎಸ್. ಮಲ್ಲಿಕಾರ್ಜುನ್, ಪರಶುರಾಮ್, ಹರೀಶ್ ಕೆ.ಎಲ್. ಬಸಾಪುರ, ಎಲ್.ಎಂ.ಎಚ್. ಸಾಗರ್, ಸವಿತಾ ಮಲ್ಲೇಶ್ ನಾಯ್ಕ ಇತರರಿದ್ದರು.